ಹೈದ್ರಾಬಾದ್: ತೆಲಂಗಾಣದ (Telagana) ಪೆದ್ದಪಳ್ಳಿ (Peddapalli) ಜಿಲ್ಲೆಯಲ್ಲಿ ಗೂಡ್ಸ್ ರೈಲೊಂದು ಹಳಿ ತಪ್ಪಿದ ಪರಿಣಾಮ (Goods Train Derailment) ಈ ಮಾರ್ಗದಲ್ಲಿ ಸಂಚರಿಸುವ 20 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೇ (SCR) ಪ್ರಕಟಣೆ ಬುಧವಾರದಂದು ತಿಳಿಸಿದೆ.
ರಾಘವಪುರಂ ಮತ್ತು ರಾಮಗಂಡಂ ನಡುವೆ ಕಬ್ಬಿಣದ ಅದಿರನ್ನು ಸಾಗಿಸುತ್ತಿದ್ದ ಗೂಡ್ಸ್ ರೈಲಿನ ಹನ್ನೊಂದು ಬೋಗಿಗಳು ಮಂಗಳವಾರ ತಡರಾತ್ರಿ ಹಳಿ ತಪ್ಪಿದ್ದವು. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಒಟ್ಟು 20 ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದ್ದು, ನಾಲ್ಕು ರೈಲುಗಳನ್ನು ಆಂಶಿಕವಾಗಿ ರದ್ದುಪಡಿಸಲಾಗಿದೆ ಹಾಗೂ 10 ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ಎಸ್.ಸಿ.ಆರ್. ವಲಯದ ಪ್ರಕಟಣೆ ತಿಳಿಸಿದೆ. ಹಳಿ ತಪ್ಪಿದ ರೈಲಿನ ಬೋಗಿಗಳನ್ನು ತೆರವುಗೊಳಿಸಿ ಹಳಿಯನ್ನು ದುರಸ್ತಿಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಮೆಟ್ರೊದಲ್ಲಿ ಹಣ ನೀಡದ ಪ್ರಯಾಣಿಕನಿಗೆ ಬಟ್ಟೆ ಎತ್ತಿ ಖಾಸಗಿ ಭಾಗ ತೋರಿಸಿದ ಮಂಗಳಮುಖಿ! ವಿಡಿಯೊ ಇದೆ
ಕಳೆದ ೫ ವರ್ಷಗಳಲ್ಲಿ ಭಾರತದ ವಿವಿಧ ಕಡೆಗಳಲ್ಲಿ ಸಂಭವಿಸಿದ ಸುಮಾರು 200 ರೈಲು ಅಪಘಾತಗಳಲ್ಲಿ 351 ಜನರು ಸಾವಿಗೀಡಾಗಿದ್ದು, 970 ಜನ ಗಾಯಗೊಂಡಿದ್ದಾರೆ. ಈ ವಿಚಾರಕ್ಕೆ ಹಿಂದೊಮ್ಮೆ ಪ್ರತಿಕ್ರಿಯಿಸಿದ್ದ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್, 10 ವರ್ಷಗಳ ಹಿಂದೆ ವರ್ಷಕ್ಕೆ 171 ರೈಲು ಅಪಘಾತಗಳು ಸಂಭವಿಸುತ್ತಿತ್ತು ಆದರೆ ಇದೀಗ ಈ ಸಂಖ್ಯೆ 40ಕ್ಕೆ ಇಳಿದಿದೆ ಎಂದು ಮಾಹಿತಿ ನೀಡಿದ್ದರು.
ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಬಾಲಾಸೋರ್ ರೈಲು ಅಪಘಾತ ಸೇರಿದಂತೆ ದೇಶದಲ್ಲಿ ಸಂಭವಿಸಿರುವ 10 ಭೀಕರ ರೈಲು ಅಪಘಾತಗಳಲ್ಲಿ 297 ಜನ ಸಾವಿಗೀಡಾಗಿದ್ದು, 637 ಜನರು ಗಾಯಗೊಂಡಿದ್ದಾರೆ. ಇನ್ನು ಪೂರ್ವ ವಲಯದಲ್ಲಿ ಸಂಭವಿಸಿರುವ 15 ರೈಲು ದುರಂತದಲ್ಲಿ 20 ಸಾವು ಸಂಭವಿಸಿದ್ದರೆ, 79 ಜನ ಗಾಯಗೊಂಡಿದ್ದಾರೆ. ಇತ್ತೀಚೆಗೆ ನಡೆದ ಪ್ರಮುಖ ರೈಲು ದುರಂತವನ್ನು ಉಲ್ಲೇಖಿಸುವುದಾದರೆ, ಜುಲೈ ತಿಂಗಳಿನಲ್ಲಿ ಕಾಂಚನಜುಂಗಾ ರೈಲು ದುರಂತ ಸಂಭವಿಸಿ 10 ಜನ ಸಾವನ್ನಪ್ಪಿದ್ದರು.
ಮಧ್ಯ ರೈಲ್ವೇ ವಲಯದಲ್ಲಿ 22 ಅಪಘಾತಗಳು ಸಂಭವಿಸಿದ್ದು ಇವುಗಳಲ್ಲಿ ಒಬ್ಬರು ಸಾವಿಗೀಡಾಗಿದ್ದು ಇಬ್ಬರು ಗಾಯಗೊಂಡಿದ್ದಾರೆ. ಇನ್ನು, ಪೂರ್ವ ರೈಲ್ವೇ ವ್ಯಾಪ್ತಿಯಲ್ಲಿ ನಡೆದಿರುವ 12 ಅಪಘಾತಗಳಲ್ಲಿ ಓರ್ವ ಸಾವನ್ನಪ್ಪಿದ್ದು ಒಂಭತ್ತು ಜನರು ಗಾಯಗೊಂಡಿದ್ದಾರೆ. ಇದೇ ರೀತಿ ಪೂರ್ವ ಕೇಂದ್ರ ವಲಯ ವ್ಯಾಪ್ತಿಯಲ್ಲಿ 18 ಅಪಘಾತಗಳು ಸಂಭವಿಸಿದ್ದು ಇದರಲ್ಲಿ ಎಂಟು ಸಾವು ಸಂಭವಿಸಿದ್ದರೆ 33 ಜನರು ಗಾಯಗೊಂಡಿದ್ದಾರೆ.
ಒಟ್ಟಿನಲ್ಲಿ, ಭಾರತದ ರೈಲ್ವೇ ಸುರಕ್ಷತಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಅಳವಡಿಸುವ ಮೂಲಕ ಸಂಭಾವ್ಯ ರೈಲು ದುರಂತಗಳನ್ನು ತಪ್ಪಿಸಲು ರೈಲ್ವೇ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿರುವ ನಡುವೆಯೇ ಅಲ್ಲೊಂದು ಇಲ್ಲೊಂದು ರೈಲು ಹಳಿ ತಪ್ಪುವ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ.