ಚಂಡೀಗಢ: ಸರ್ಕಾರಿ ಶಾಲೆಗಳಲ್ಲಿ (Government School) ಮೂಲಭೂತ ಸೌಕರ್ಯ ಕೊರತೆ ವಿಚಾರ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಈ ವಾರದ ಆರಂಭದಲ್ಲಿ ಬಿಡುಗಡೆಯಾದ ಕೇಂದ್ರ ಶಿಕ್ಷಣ ಸಚಿವಾಲಯದ ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಫರ್ಮೇಷನ್ ಸಿಸ್ಟಮ್ ಫಾರ್ ಎಜುಕೇಶನ್ (UDISE)-ಪ್ಲಸ್‌ನ ದತ್ತಾಂಶವು ನಿಜಕ್ಕೂ ಗಾಬರಿಯಾಗುವಂತಹ ಮಾಹಿತಿಯನ್ನು ನೀಡಿದ್ದು, ಹರಿಯಾಣದ (Haryana) ಸರ್ಕಾರಿ ಶಾಲೆಗಳ ಪರಿಸ್ಥಿತಿಯನ್ನು ತೆರೆದಿಟ್ಟಿದೆ.
ಈ ವರದಿಯ ಪ್ರಕಾರ ಹರಿಯಾಣಾದ ಒಟ್ಟು 23,517 ಸರ್ಕಾರಿ ಶಾಲೆಗಳಲ್ಲಿ 767 ಬಾಲಕಿಯರ ಶೌಚಾಲಯಗಳ ಕೊರತೆಯಿದ್ದರೆ, 1,263 ಶಾಲೆಗಳಲ್ಲಿ ಬಾಲಕರ ಶೌಚಾಲಯಗಳಿಲ್ಲ. ಆದರೆ ಒಟ್ಟು ಶಾಲೆಗಳ ಶೌಚಾಲಯಗಳ ಪೈಕಿ 22,750 ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಡೇಟಾ ಬಹಿರಂಗಪಡಿಸುತ್ತದೆ. ಇನ್ನು ವಿದ್ಯುತ್ ಸಂಪರ್ಕದ ವಿಚಾರಕ್ಕೆ ಬಂದರೆ 146 ಶಾಲೆಗಳಲ್ಲಿ ಇನ್ನೂ ವಿದ್ಯುತ್ ಸಂಪರ್ಕದ ಕೊರತೆಯಿದೆ ಎಂದು ತಿಳಿದು ಬಂದಿದೆ. 97% (22,721) ಶಾಲೆಗಳು ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ಗಳನ್ನು ಒದಗಿಸುತ್ತಿದ್ದರೂ ರಾಜ್ಯದಲ್ಲಿ ಸುಮಾರು 33% (7,591) ಶಾಲೆಗಳು ಇಂಟರ್ನೆಟ್ ಸಂಪರ್ಕವನ್ನು ಹೊಂದಿಲ್ಲ.
ಇನ್ನು ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕೊರತೆಯ ಬಗ್ಗೆ ಈ ವರದಿ ಬಹಿರಂಗಪಡಿಸಿದ್ದು, ಹರಿಯಾಣದ 81 ಶಾಲೆಗಳಿಗೆ 178 ಶಿಕ್ಷಕರನ್ನು ನಿಯೋಜಿಸಿದ್ದರೂ ವಿದ್ಯಾರ್ಥಿಗಳಿಲ್ಲ ಎಂದು ತಿಳಿದು ಬಂದಿದೆ. ರಾಜ್ಯದ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಅನುಪಾತವು 22 ರಷ್ಟಿದೆ, ಇದು ರಾಷ್ಟ್ರೀಯ ಸರಾಸರಿ 25 ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.
ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಫರ್ಮೇಷನ್ ಸಿಸ್ಟಮ್ ಫಾರ್ ಎಜುಕೇಶನ್‌ನ ವರದಿಯು ಬಿಡುಗಡೆಯಾಗುತ್ತಿದ್ದಂತೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸಂಸದೆ ಹಾಗೂ ಕೇಂದ್ರದ ಮಾಜಿ ಸಚಿವೆ ಕುಮಾರಿ ಸೆಲ್ಜಾ, ಸರ್ಕಾರಿ ಶಾಲೆಗಳನ್ನು ಹರಿಯಾಣ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಟೀಕಿಸಿದ್ದಾರೆ. 81 ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಗೆ ಕಾರಣವೇನು ಎಂದು ಪ್ರಶ್ನಿಸಿದ ಅವರು, ತಮ್ಮ ಮಕ್ಕಳನ್ನು ಸರ್ಕಾರಿ ಸಂಸ್ಥೆಗಳಿಗೆ ಕಳುಹಿಸಲು ಪೋಷಕರು ಏಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರವು ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳು ಸೇರಿದಂತೆ ಮೂಲಭೂತ ಸೌಕರ್ಯಗಳ ಅನುಪಸ್ಥಿತಿಯನ್ನು ಪರಿಹರಿಸಬೇಕಾಗಿದೆ ಮತ್ತು ಅವರು ಹೆಚ್ಚು ಅಗತ್ಯವಿರುವಲ್ಲಿ ಶಿಕ್ಷಕರನ್ನು ಸರಿಯಾಗಿ ನಿಯೋಜಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು” ಎಂದು ಸೆಲ್ಜಾ ಹೇಳಿದರು. ಇದು ಕೇವಲ ಹರಿಯಾಣದ ಸ್ಥಿತಿಯಲ್ಲ. ಭಾರತದ ಅನೇಕ ಸರ್ಕಾರಿ ಶಾಲೆಗಳು ಇದೇ ಸಮಸ್ಯೆಯನ್ನು ಎದುರಿಸುತ್ತಿವೆ. ಸರ್ಕಾರ ಶಾಲೆಗಳ ಅಭಿವೃದ್ದಿಗೆ ಅದೆಷ್ಟೇ ಯೋಜನೆ ಜಾರಿಗೊಳಿಸಿದ್ದರೂ ಕೂಡ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣ ಹಾಗೂ ಮೂಲಭೂತ ಸೌಕರ್ಯಕ್ಕಾಗಿ ಪರೆದಾಡುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ : DA Hike: ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ತುಟ್ಟಿಭತ್ಯೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ನಿರ್ಧಾರ