ಬೆಳಕಿನ ಹಬ್ಬ ಪ್ರಾರಂಭವಾಗಿದೆ. ಎಲ್ಲರ ಮನೆಯಲ್ಲೂ ಪಟಾಕಿ ಸದ್ದು ಕೇಳುವಾಗ ನಾವೂ ಒಂದೆರಡಾದರೂ ಪಟಾಕಿ ಸುಡದಿದ್ದರೆ ಹೇಗೆ ಎಂದು ಯೋಚಿಸುವಾಗ ನೆನಪಾಗುವುದು ಹಸಿರು ಪಟಾಕಿ (Green Fireworks). ಪರಿಸರ ಮಾಲಿನ್ಯದ ದೃಷ್ಟಿಯಿಂದ ಯೋಚಿಸಿದರೆ ಈ ಹಬ್ಬ ಕಳೆಗಟ್ಟಿಸುವುದಕ್ಕೆ ದೀಪಗಳೇ ಸಾಕು. ಆದರೂ ಸ್ವಲ್ಪ ಪಟಾಕಿಯಾದರೂ ಬೇಕು ಎನ್ನುವವರಿಗೆ ಹಸಿರು ಪಟಾಕಿಗಳು ಪರಿಸರ-ಸ್ನೇಹಿ ಪರ್ಯಾಯವಾಗಿ ಗೋಚರಿಸಿದರೆ ಅಚ್ಚರಿಯಿಲ್ಲ.
ಹಸಿರು ಪಟಾಕಿಗಳೇನು ಹೇಳುವಷ್ಟು ಒಳ್ಳೆಯದಲ್ಲ, ಅದರಲ್ಲೂ ಹೊಗೆ ಬರುತ್ತದೆ, ಶಬ್ದವೂ ಆಗುತ್ತದೆ, ಸುಮ್ನೆ ಹಸಿರು ಬಣ್ಣದ ಕಾಗದ ಸುತ್ತಿದ್ರೆ ಏನು ಬಂತು?…ʼ ಮುಂತಾದ ಬಹಳಷ್ಟು ಮಾತುಗಳನ್ನು ಕೇಳುವಾಗ ಹಸಿರು ಪಟಾಕಿಗಳ ಬಗ್ಗೆ ಗೊಂದಲ ಮೂಡುವುದು ಸಹಜ. ಏನು ಹಸಿರು ಪಟಾಕಿಗಳೆಂದರೆ? ಇವುಗಳನ್ನು ಗುರುತಿಸುವುದು ಹೇಗೆ? ಇದರಿಂದ ನಿಜಕ್ಕೂ ಪರಿಸರಕ್ಕೆ ಪ್ರಯೋಜನ ಇದೆಯೇ ಅಥವಾ ಸುಮ್ಮನೆ ಇದೊಂದು ದೊಂಬರಾಟವೇ? ಇಂಥ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಸಾಂಪ್ರದಾಯಿಕ ಪಟಾಕಿಗಳಿಂದ ಪರಿಸರದ ಮೇಲಾಗುವ ಹಾನಿಯನ್ನು ಅರ್ಥ ಮಾಡಿಕೊಳ್ಳಲೇಬೇಕಾದ ಕಾಲವಿದು. ಒಂದು ಹಬ್ಬದ ನೆಪದಿಂದ ಇಡೀ ವಾತಾವರಣವನ್ನು ವಿಷಮಯ ಮಾಡಿಕೊಳ್ಳುವಷ್ಟು ದಡ್ಡರೇನಲ್ಲವಲ್ಲ ನಾವು. ಹಾಗಾಗಿ ಹಸಿರು ಪಟಾಕಿಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಮಾತ್ರವಲ್ಲ, ಕೆಲವು ಪ್ರದೇಶಗಳಲ್ಲಿ ಈಗಾಗಲೇ ಹೆಚ್ಚು ಶಬ್ದ ಮಾಡದ ಪಟಾಕಿಗಳನ್ನೂ ಅರಿತೇ ಬಳಸಲಾಗುತ್ತಿದೆ. ಇದರಿಂದ ದೀಪಾವಳಿಯಲ್ಲಿ ಕಿವಿ ಕಿವುಡಾಗುವಂಥ ಶಬ್ದಗಳನ್ನು ಬಹುಪಾಲು ನಿಯಂತ್ರಿಸಬಹುದು. ಪರಿಸರಕ್ಕೆ ಹೆಚ್ಚು ಕಂಟಕವನ್ನು ತಾರದಂಥ ಈ ಪಟಾಕಿಗಳ ಪ್ರವರಗಳೇನು?
ಹಸಿರು ಪಟಾಕಿಗಳೆಂದರೆ ಇದು
ಇವೇನು ಸಂಪೂರ್ಣ ಮಾಲಿನ್ಯ ಮುಕ್ತ ಪಟಾಕಿಗಳಲ್ಲ. ಆದರೆ ಪರಿಸರಕ್ಕೆ ಹೆಚ್ಚು ವಿಷವನ್ನು ಸೇರಿಸದ ರೀತಿಯಲ್ಲಿ ನಿರ್ಮಾಣಗೊಂಡ ಪಟಾಕಿಗಳಿವು. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ-ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯು (ಸಿಎಸ್‌ಐಆರ್-ಎನ್‌ಇಇಆರ್‌ಐ) ಇದರ ಹಿಂದಿದ್ದು, 2019ರಿಂದ ಇವು ಚಾಲ್ತಿಯಲ್ಲಿವೆ.
ಈ ಪಟಾಕಿಗಳನ್ನು ಸುಟ್ಟಾಗ ಹೆಚ್ಚು ಹೊಗೆ ಬಾರದಂತೆ ಅದರಲ್ಲಿನ ನೀರಾವಿಯ ಕಣಗಳು ಕೆಲಸ ಮಾಡುತ್ತವೆ. ಇವುಗಳಲ್ಲಿ ಆರ್ಸೆನಿಕ್, ಲಿಥಿಯಂ ಮತ್ತು ಎಲ್ಲಕ್ಕಿಂತ ಹೆಚ್ಚು ಕೆಡುಕು ಮಾಡುವ ಬ್ಯಾರಿಯಂನ ಸಂಯುಕ್ತಗಳು ಇರುವುದಿಲ್ಲ. ಬ್ಯಾರಿಯಂ ಇಲ್ಲದಿದ್ದರಿಂದಲೇ ಇದರ ಜ್ವಾಲೆಗೆ ಹಸಿರು ಬಣ್ಣ ಇರುವುದನ್ನು ಕಾಣಬಹುದು. ಜೊತೆಗೆ, ಅಲ್ಯುಮಿನಿಯಂ, ಸೀಸ, ಇಂಗಾಲ ಮುಂತಾದ ಅಂಶಗಳನ್ನು ಕಡಿಮೆ ಪ್ರಮಾಣದಲ್ಲಿ ಸೇರಿಸಲಾಗುತ್ತದೆ. ಇದರಿಂದ ಇಂಥ ಪಟಾಕಿಯಲ್ಲಿ ಬರುವ ಹೊಗೆ ಸಾಂಪ್ರದಾಯಿಕ ಪಟಾಕಿಗಳಿಗಿಂತ ಕಡಿಮೆ. ಜೊತೆಗೆ, ಘನ ಕಣಗಳು ವಾತಾವರಣವನ್ನು ಸೇರುವ ಪ್ರಮಾಣವೂ ಕಡಿಮೆಯೇ.
ಇದರ ಇನ್ನೊಂದು ಮುಖ್ಯ ಅಂಶವೆಂದರೆ, ಕಡಿಮೆ ಶಬ್ದ. ಅಂದರೆ ಶಬ್ದ ರಹಿತವಾಗಿ ಪಟಾಕಿ ಸುಡುವುದೆಂದು ಭಾವಿಸುವಂತಿಲ್ಲ. ಆದರೆ ಉಳಿದ ಪಟಾಕಿಗಳಿಗಿಂತ ಶೇ. 30ರಷ್ಟು ಕಡಿಮೆ ಶಬ್ದ ಮಾಡುತ್ತದೆ. ಉಳಿದವು 160 ಡಿ.ಬಿ. ಲೆಕ್ಕದಲ್ಲಿ ಗಲಾಟೆ ಮಾಡಿದರೆ, ಇದರ ಶಬ್ದ ಸುಮಾರು 120 ಡಿ.ಬಿಗಳಷ್ಟು.
ಇವುಗಳನ್ನು ಗುರುತಿಸುವುದು ಹೇಗೆ?
ಈ ಪಟಾಕಿಗಳ ಮೇಲೆ ಪ್ರತ್ಯೇಕವಾದ ಸಿಎಸ್‌ಐಆರ್-ಎನ್‌ಇಇಆರ್‌ಐ ಮತ್ತು ಪಿಇಎಸ್‌ಒ ಗಳ (CSIR-NEERI and PESO) ಹಸಿರು ಬಣ್ಣದ ಲೊಗೊ ಇರುತ್ತದೆ. ಇದರೊಂದಿಗೆ ಒಂದು ಕ್ಯುಆರ್ ಕೋಡ್ ಸಹ ನೀಡಲಾಗಿರುತ್ತದೆ. ಖರೀದಿಸುವಾಗ ಇದನ್ನು ಗಮನಿಸಿ. ಯಾರೋ ಗೊತ್ತಿಲ್ಲದ ಅಂಗಡಿಯಲ್ಲಿ ಪಟಾಕಿ ಖರೀಸುವ ಬದಲು, ಅಧಿಕೃತ ಮಾರಾಟಗಾರರಿಂದಲೇ ಪಟಾಕಿ ಖರೀದಿ ಮಾಡಿ. ಇದರಿಂದ ಮೋಸ ಹೋಗುವ ಸಾಧ್ಯತೆ ಕಡಿಮೆ. ಪಟಾಕಿಯನ್ನು ಹೊತ್ತಿಸಿದಾಗ ಹಸಿರು ಬಣ್ಣದ ಉರಿ ಕಂಡುಬಂದಲ್ಲಿ, ನೀವು ನಿಜವಾಗಿ ಹಸಿರು ಪಟಾಕಿಯನ್ನೇ ಬಳಸುತ್ತಿದ್ದೀರಿ ಎಂದರ್ಥ.
ಇವುಗಳಲ್ಲಿ ಎಷ್ಟು ವಿಧ?
ಭಾರತದಲ್ಲಿ ಮೂರು ರೀತಿಯ ಹಸಿರು ಪಟಾಕಿಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.
ಎಸ್‌ಡಬ್ಲೂಎಎಸ್: (ಸ್ವಾಸ್)- ಸೇಫ್ ವಾಟರ್ ರಿಲೀಜ್: ಇದು ಸ್ಫೋಟಿಸಿದಾಗ ನೀರಾವಿಯನ್ನು ಬಿಡುಗಡೆ ಮಾಡಿ, ವಾತಾವರಣಕ್ಕೆ ಹೆಚ್ಚು ರಾಸಾಯನಿಕ ಧೂಳು ಮತ್ತು ಹೊಗೆ ಸೇರುವುದನ್ನು ತಡೆಯುತ್ತದೆ.
ಎಸ್‌ಟಿಎಆರ್: (ಸ್ಟಾರ್)- ಸೇಫ್ ಥರ್ಮೈಟ್ ಕ್ರಾಕರ್: ಇದರಲ್ಲಿ ಪೊಟಾಶಿಯಂ ನೈಟ್ರೇಟ್ ಅಥವಾ ಸಲ್ಫರ್ ಅಂಶಗಳು ಇರುವುದಿಲ್ಲ. ಹಾಗಾಗಿ ಘನ ಕಣಗಳು ಗಾಳಿ ಸೇರುವ ಪ್ರಮಾಣ ಕಡಿಮೆ ಹಾಗು ಶಬ್ದವೂ ಕಡಿಮೆ.
ಎಸ್‌ಎಎಫ್‌ಎಎಲ್: (ಸಫಲ್)- ಸೇಫ್ ಮಿಲಿಮಲ್ ಅಲುಮಿನಿಯಂ: ಇದರಲ್ಲಿ ಅಲುಮಿನಿಯಂ ಅಂಶ ಅತಿ ಕಡಿಮೆಯಿದ್ದು, ಶಬ್ದ ಮಾಲಿನ್ಯ ಕಡಿಮೆ ಮಾಡುತ್ತದೆ.
ದೀಪಾವಳಿ ಹಬ್ಬದಲ್ಲಿ ನೀವೂ ಸುರಕ್ಷಿತವಾಗಿರಿ, ವಾತಾವರಣವನ್ನೂ ಸುರಕ್ಷಿತವಾಗಿರಿಸಿ. ಸಾಧ್ಯವಾದರೆ, ಪಟಾಕಿಗಳ ಬದಲಿಗೆ ದೀಪಗಳನ್ನು ಬೆಳಗಿಸಿ, ಸಂಭ್ರಮಿಸಿ.