Sunday, 29th December 2024

ʼನನ್ನ ಮಲತಂದೆ ಭಾರತೀಯʼ; ಅಮೆರಿಕದಲ್ಲಿ ಜನಾಂಗೀಯ ದ್ವೇಷ ಹರಡುತ್ತಿರುವ ಮಧ್ಯೆ ಎಲೋನ್ ಮಸ್ಕ್‌ನ ಮಾಜಿ ಗೆಳತಿಯ ಹೇಳಿಕೆ

Grimes

ವಾಷಿಂಗ್ಟನ್‌: ಕೆನಡಾದ ಸಂಗೀತಗಾರ್ತಿ ಮತ್ತು ಎಲೋನ್ ಮಸ್ಕ್ ಅವರ ಮಾಜಿ ಗೆಳತಿ (Elon Musk’s Ex Girlfriend) ಗ್ರಿಮ್ಸ್ (Grimes) ಅವರು ಭಾರತೀಯರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಅಮೆರಿಕದಲ್ಲಿ ಟ್ರಂಪ್‌ (Donald Trump) ಸಚಿವ ಸಂಪುಟಕ್ಕೆ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದೂ ಗ್ರಿಮ್ಸ್‌ ಹೇಳಿದ್ದಾರೆ.

ತನಗೆ ಹಾಗೂ ಭಾರತೀಯರಿಗೆ ಇರುವ ನಂಟಿನ ಬಗ್ಗೆ ಮಾತನಾಡುತ್ತ ಅವರು, ವ್ಯಾಂಕೋವರ್ ಮೂಲದ ಈಸ್ಟ್ ಇಂಡಿಯಾ ಕಾರ್ಪೆಟ್ಸ್‌ನ ನಿರ್ದೇಶಕ ರವಿ ಸಿಧೂ ಅವರನ್ನು ತನ್ನ ತಾಯಿ ಮದುವೆಯಾದ ನಂತರ ತಾನು ಅರ್ಧ-ಭಾರತೀಯ ಕುಟುಂಬದಲ್ಲಿ ಬೆಳೆದೆ ಎಂದು ವಿವರಿಸಿದ್ದಾರೆ. ನನ್ನ ಮಲತಂದೆ ಭಾರತೀಯ, ನನಗೆ ಭಾರತೀಯ ಸಂಪ್ರದಾಯ ಹಾಗೂ ಸಂಸ್ಕೃತಿಯ ಬಗ್ಗೆ ತಿಳಿದಿದೆ. ಭಾರತೀಯ ಸಂಸ್ಕೃತಿಯು ಪಾಶ್ಚಿಮಾತ್ಯ ಸಂಸ್ಕೃತಿಯೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

ಅಮೆರಿಕದಲ್ಲಿ ಸದ್ಯ ಭಾರತೀಯರಿಗೆ ಟ್ರಂಪ್‌ ಸಚಿವಾಲಯದಲ್ಲಿ ಹೆಚ್ಚಿನ ಸ್ಥಾನ ಸಿಗುತ್ತಿರುವುದರ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಅವರು ಇಲ್ಲಿ ಭಾರತ ವಿರೋಧಿ ಅಲೆ ಯಾಕೆ ಶುರುವಾಗಿದೆ ಎಂದು ನನಗೆ ತಿಳಿದಿಲ್ಲ ಎಂದಿದ್ದಾರೆ.

ಭಾರತ ವಿರೋಧಿ ಹೇಳಿಕೆಗಳ ಬಗ್ಗೆ ಅಸಮಾಧಾನ

ಸಾಮಾಜಿಕ ಮಾಧ್ಯಮದಲ್ಲಿ ಭಾರತ ವಿರೋಧಿ ಕಾಮೆಂಟ್‌ಗಳನ್ನು ಗ್ರಿಮ್ಸ್ ಬಲವಾಗಿ ಟೀಕಿಸಿದ್ದಾರೆ. ಹಠಾತ್ತನೆ ಎಲ್ಲಿಂದಲೋ ಭಾರತ ವಿರೋಧಿ ಶಕ್ತಿಯನ್ನು ಉತ್ಪಾದಿಸುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಅವರು ಬರೆದಿದ್ದಾರೆ.

ಸಾಮಾಜಿಕ ಮಾಧ್ಯಮ ಬಳಕೆದಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗ್ರಿಮ್ಸ್, ನಾವು ಈಗಾಗಲೇ ಭಾರತೀಯ ಸಂಸ್ಕೃತಿಯನ್ನು ಅಮೆರಿಕನ್ ಸಂಸ್ಕೃತಿಯೊಂದಿಗೆ ಬೆರೆಸಲು ಪ್ರೇರೇಪಿಸಿದ್ದೇವೆ. ಆದಾಗ್ಯೂ, ಈ ಪ್ರಕ್ರಿಯೆಯು ಭಾರತದಲ್ಲಿ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಅಮೆರಿಕದ ಹೆಚ್ಚಿನ ಕಂಪನಿಗಳು ಭಾರತದಲ್ಲಿ ಸ್ಥಾಪನೆಯಾದರೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಬಹುದು ಎಂದು ಸಲಹೆ ನೀಡಿದ್ದಾರೆ.

ಬಾಲಿವುಡ್ ಸಂಗೀತ ಮತ್ತು ಪಾಶ್ಚಾತ್ಯ ಸಂಗೀತದ ಮೇಲೆ ಅದರ ಪ್ರಭಾವವನ್ನು ಚರ್ಚಿಸುವಾಗ, ಗ್ರಿಮ್ಸ್ ಭಾರತೀಯ ಗಾಯಕರ ಗುಣಗಳನ್ನು ಹೊಗಳಿದರು. ‘ಭಾರತದ ಗಾಯಕರು ವಿಶ್ವದ ಅತ್ಯುತ್ತಮ ಗಾಯಕರು. ನಾನು ನನ್ನನ್ನು ಗಾಯಕಿ ಎಂದು ಪರಿಗಣಿಸುವುದಿಲ್ಲ. ಅಮೆರಿಕಾದಲ್ಲಿ ಬಾಲಿವುಡ್ ಹಿಟ್ ಆಗದಿರುವುದು ವಿಚಿತ್ರ ಮತ್ತು ನಾನು ಈ ದಿಕ್ಕಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : Indian Rupee: ಅಮೆರಿಕದ ಡಾಲರ್‌ ಎದುರು ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ; ಕಾರಣವೇನು?