ಜೈಸಲ್ಮೇರ್: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅಧ್ಯಕ್ಷತೆಯಲ್ಲಿ55 ನೇ ಜಿಎಸ್‌ಟಿ ಕೌನ್ಸಿಲ್‌ನ ಸಭೆ (GST Council Meeting) ಶನಿವಾರ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನಡೆಯಿತು. ತೆರಿಗೆ ವಿಚಾರದಲ್ಲಿ ಹಲವು ಬದಲಾವಣೆಯನ್ನು ಮಾಡುವ ನಿರ್ಧಾರವನ್ನು ಈ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳು ಮತ್ತು ಪ್ರತಿನಿಧಿಗಳು ಭಾಗವಹಿಸಿದ ಸಭೆಯಲ್ಲಿ ತೆರಿಗೆ ದರ ಬದಲಾವಣೆ, ವ್ಯಾಪಾರ ಸುಗಮಗೊಳಿಸುವಿಕೆ ಮತ್ತು ಜಿಎಸ್‌ಟಿಯಂತಹ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಯಿತು.
ಫೋರ್ಟಿಫೈಡ್ ರೈಸ್ ಕರ್ನಲ್ (ಎಫ್‌ಆರ್‌ಕೆ) ಮೇಲಿನ ಜಿಎಸ್‌ಟಿ ದರವನ್ನು 5% ಕ್ಕೆ ಇಳಿಸಲು ಕೌನ್ಸಿಲ್ ಶಿಫಾರಸು ಮಾಡಿದೆ. ಜೀನ್ ಥೆರಪಿ (ವೈದ್ಯಕೀಯ ಅಸ್ವಸ್ಥತೆಗೆ ಚಿಕಿತ್ಸೆ ನೀಡಲು ಜೀನ್ ಬಳಸುವ ವೈದ್ಯಕೀಯ ತಂತ್ರಜ್ಞಾನ) ಸಂಪೂರ್ಣವಾಗಿ ತೆರಿಗೆ ಸ್ಲ್ಯಾಬ್ ನಿಂದ ಹೊರಗಿಡಲಾಗಿದೆ. ಹಾಗೂ ಥರ್ಡ್-ಪಾರ್ಟಿ ಮೋಟಾರು ವಾಹನದ ಪ್ರೀಮಿಯಂಗಳಿಂದ ಮೋಟಾರು ವಾಹನ ಅಪಘಾತ ನಿಧಿಗೆ ಸಾಮಾನ್ಯ ವಿಮಾ ಕಂಪನಿಗಳು ನೀಡಿದ ಕೊಡುಗೆಗಳ ಮೇಲೆ GST ಯ ಸಂಪೂರ್ಣ ವಿನಾಯಿತಿಯನ್ನು ಘೋಷಿಸಿದೆ.
ಪಾಪ್‌ಕಾರ್ನ್ ವಿವಾದ
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪಾಪ್‌ಕಾರ್ನ್ ಟ್ಯಾಕ್ಸ್ ದೊಡ್ಡ ಸುದ್ದಿಯಾಗಿದೆ. ರುಚಿಗೆ ಅನುಗುಣವಾಗಿ ಜಿಎಸ್‌ಟಿಯ (GST On Popcorn) ವಿವಿಧ ಸ್ಲ್ಯಾಬ್‌ಗಳಲ್ಲಿ ಪಾಪ್‌ಕಾರ್ನ್ ಅನ್ನು ಸೇರಿಸುವ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಕ್ಯಾರಮೆಲೈಸ್ಡ್ ಪಾಪ್‌ಕಾರ್ನ್ (ಸಕ್ಕರೆಯಿಂದ ತಯಾರಿಸಿದ ಪಾಪ್ ಕಾರ್ನ್) ಮೇಲೆ 18% ಜಿಎಸ್‌ಟಿ, ಉಪ್ಪು ಮತ್ತು ಮಸಾಲೆಯುಕ್ತ ಪ್ಯಾಕ್ ಮಾಡದ ಮತ್ತು ಲೇಬಲ್ ಮಾಡದ ಪಾಪ್‌ಕಾರ್ನ್‌ಗೆ 5% ಜಿಎಸ್‌ಟಿ ಅನ್ವಯಿಸುತ್ತದೆ. ಲೇಬಲ್ ಮಾಡಿದ ರೆಡಿ-ಟು-ಈಟ್ ತಿಂಡಿಗಳು 12% ಜಿಎಸ್‌ಟಿಗೆ ಒಳಪಟ್ಟಿರುತ್ತವೆ.
ಇನ್ನು ಇಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ವಾಹನ ಖರೀದಿಗೆ ಉತ್ತೇಜನ ನೀಡಲು, ಬಳಸಿದ ಇಲೆಕ್ಟ್ರಿಕ್ ವಾಹನಗಳ ಮಾರಾಟದ ಮೇಲೆ ತೆರಿಗೆ ವಿನಾಯತಿ ನೀಡಲು ನಿರ್ಧರಿಸಲಾಗಿದೆ. ಹಾಗಾಗಿ, ಖಾಸಗಿಯಾಗಿ ಇನ್ನೊಬ್ಬರಿಗೆ ಮಾರಾಟ ಮಾಡಿದರೆ, ಇದರ ಮೇಲೆ ತೆರಿಗೆ ವಿನಾಯತಿ ಇರಲಿದೆ. ಆದರೆ, ವಾಹನವು ಕಂಪೆನಿಯ ಹೆಸರಿನಲ್ಲಿ ನೊಂದಣಿಯಾಗಿದ್ದರೆ, ಅದನ್ನು ಮಾರಾಟ ಮಾಡುವ ಸಮಯದಲ್ಲಿ ಶೇ. 18ರಷ್ಟು ಜಿಎಸ್‌ಟಿ ಬೀಳಲಿದೆ.
ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಆಹಾರ ವಿತರಣಾ ಸೇವೆಗಳ ಮೇಲಿನ ಜಿಎಸ್‌ಟಿ ವಿಷಯದ ಕುರಿತು, ವಿತರಣಾ ಶುಲ್ಕದ ಮೇಲಿನ ಜಿಎಸ್‌ಟಿಯು ರೆಸ್ಟೋರೆಂಟ್‌ಗಳಿಂದ ಆಹಾರದ ಮೇಲಿನ ಜಿಎಸ್‌ಟಿಯಂತೆಯೇ ಇರಬೇಕೇ ಅಥವಾ ಅದು ಹೆಚ್ಚಿರಬೇಕೇ ಎಂದು ಇನ್ನೂ ಚರ್ಚಿಸುತ್ತಿದೆ ಎಂದು ಹಣಕಾಸು ಸಚಿವರು ಸ್ಪಷ್ಟಪಡಿಸಿದ್ದಾರೆ.
ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಪ್ರತಿನಿಧಿಗಳನ್ನು ಹೊಂದಿರುವ ಸಮಿತಿಯನ್ನು ರಚಿಸಿ , ಕೆಲವು ವಸ್ತುಗಳ ಮೇಲೆ ಶೇ. 1ರಷ್ಟು ತೆರಿಗೆಯನ್ನು ವಿಧಿಸಿ, ಅದನ್ನು ಪ್ರಾಕೃತಿಕ ವಿಕೋಪಕ್ಕೆ ಬಳಸುವ ಸಂಬಂಧ ವರದಿಯನ್ನು, ಕೇಂದ್ರ ಹಣಕಾಸು ಇಲಾಖೆಗೆ ಸಲ್ಲಿಸುವ ನಿರ್ಧಾರಕ್ಕೆ ಬರಲಾಗಿದೆ.
ಎಟಿಎಫ್ ( Aviation Turbine Fuel) ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎನ್ನುವ ವಿಮಾನಯಾನ ಇಲಾಖೆಯ ಮನವಿಯನ್ನು ಸಭೆಯಲ್ಲಿ ತಿರಸ್ಕರಿಸಲಾಗಿದೆ. ಏತನ್ಮಧ್ಯೆ, GST ಯ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯು CGST ಕಾಯಿದೆ, 2017 ರಲ್ಲಿ ಸಕ್ರಿಯಗೊಳಿಸುವ ನಿಬಂಧನೆಯನ್ನು ಸೇರಿಸಲು ತನ್ನ ಅನುಮೋದನೆಯನ್ನು ನೀಡಿದೆ.
ಈ ಸುದ್ದಿಯನ್ನೂ ಓದಿ : Electoral bonds: ನಿರ್ಮಲಾ ಸೀತಾರಾಮನ್, ವಿಜಯೇಂದ್ರ ಸೇರಿ ಹಲವು ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್