Wednesday, 11th December 2024

Gurpatwant Singh Pannun: ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು; ದೋವಲ್‌ ಸೇರಿ ಹಲವರಿಗೆ US ಕೋರ್ಟ್‌ ಸಮನ್ಸ್‌

Gurpatwant Singh Pannun

ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ(Khalistan Terrorist) ಗುರುಪತ್‌ವಂತ್ ಸಿಂಗ್ ಪನ್ನುನ್(Gurpatwant Singh Pannun) ತನ್ನ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ ಸಿವಿಲ್ ಮೊಕದ್ದಮೆ ದಾಖಲಿಸಿದ ನಂತರ ಯುಎಸ್ ನ್ಯಾಯಾಲಯವು ಭಾರತ ಸರ್ಕಾರಕ್ಕೆ ಸಮನ್ಸ್ ನೀಡಿದೆ. ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಯ US ಜಿಲ್ಲಾ ನ್ಯಾಯಾಲಯ ಸಮನ್ಸ್‌(Summons) ಜಾರಿಗೊಳಿಸಿದ್ದು, ಭಾರತ ಸರ್ಕಾರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್(Ajit Doval), ಮಾಜಿ R&AW ಮುಖ್ಯಸ್ಥ ಸಮಂತ್ ಗೋಯೆಲ್, R&AW ಏಜೆಂಟ್ ವಿಕ್ರಮ್ ಯಾದವ್ ಮತ್ತು ಭಾರತೀಯ ಉದ್ಯಮಿ ನಿಖಿಲ್ ಗುಪ್ತಾ ಅವರನ್ನು ಹೆಸರಿಸಲಾಗಿದೆ.

ಕೋರ್ಟ್‌ ಸಮನ್ಸ್‌ ಜಾರಿಗೊಳಿಸಿರುವ ವ್ಯಕ್ತಿಗಳು 21 ದಿನಗಳಲ್ಲಿ ಉತ್ತರವನ್ನು ನೀಡುವಂತೆ ಸೂಚನೆ ನೀಡಲಾಗಿದೆ. ಸಮನ್ಸ್‌ಗೆ ಕೇಂದ್ರ ಇನ್ನೂ ಪ್ರತಿಕ್ರಿಯಿಸಿಲ್ಲ. ಸಮನ್ಸ್‌ನ ಪ್ರತಿಯನ್ನು ಹಂಚಿಕೊಂಡ ಪನ್ನು ಅವರ ಎಕ್ಸ್ ಹ್ಯಾಂಡಲ್ ಅನ್ನು ತಡೆಹಿಡಿಯಲಾಗಿದೆ. ಅಮೆರಿಕ ಮತ್ತು ಕೆನಡಾ ದ್ವಿಪೌರತ್ವವನ್ನು ಹೊಂದಿರುವ ಪನ್ನುನ್‌ ಹತ್ಯೆಗೆ ರೂಪಿಸಲಾಗಿದ್ದ ಸಂಚನ್ನು ಅಮೆರಿಕ ವಿಫಲಗೊಳಿಸಿದೆ ಎಂದು ಅಲ್ಲಿ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

ಯಾರು ಈ ಪನ್ನುನ್‌?

ಪನ್ನುನ್ ಖಲಿಸ್ತಾನ್ ಚಳವಳಿಯಲ್ಲಿ ಪ್ರಮುಖ ನಾಯಕರಾಗಿದ್ದಾನೆ ಮತ್ತು ಪ್ರತ್ಯೇಕ ಸಿಖ್ ರಾಷ್ಟ್ರಕ್ಕಾಗಿ ಪ್ರತಿಪಾದಿಸುವ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್ (SFJ) ನ ಕಾನೂನು ಸಲಹೆಗಾರ ಮತ್ತು ವಕ್ತಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆತನನ್ನು ಭಾರತ ಸರ್ಕಾರ ಭಯೋತ್ಪಾದಕ ಎಂದು ಘೋಷಿಸಿದೆ. ಜಾಗತಿಕ ಮಟ್ಟದಲ್ಲಿ ಗಡಿಯಾಚೆಗಿನ ದಮನ ಕಾರ್ಯಾಚರಣೆಗಳಲ್ಲಿ ಹೆಚ್ಚಳ ಮತ್ತು ಅಂತಹ ಕ್ರಮಗಳನ್ನು ಅಳವಡಿಸಿಕೊಳ್ಳಲು ಭಾರತ ಮತ್ತು ಇತರ ದೇಶಗಳನ್ನು ಮುನ್ನಡೆಸುವ ಜಾಗತಿಕ ಶಕ್ತಿಗಳ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ವರದಿ ಹೇಳಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ಸಿಖ್ ಪ್ರತ್ಯೇಕತಾವಾದಿಯಾದ ಗುರುಪತ್‌ವಂತ್ ಸಿಂಗ್ ಪನ್ನುನ್ ಹತ್ಯೆಯ ವಿಫಲ ಸಂಚಿನಲ್ಲಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಎಂಬಾತ ಭಾರತೀಯ ಸರ್ಕಾರಿ ಉದ್ಯೋಗಿಯೊಂದಿಗೆ ಕೆಲಸ ಮಾಡಿದ್ದಾರೆ ಎಂದು ಅಮೆರಿಕ ಫೆಡರಲ್ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಜೆಕ್ ಗಣರಾಜ್ಯದಲ್ಲಿ ಬಂಧಿಸಲ್ಪಟ್ಟ ಗುಪ್ತಾ ಅವರನ್ನು ಜೂನ್ 14ರಂದು ಅಮೆರಿಕಕ್ಕೆ ಹಸ್ತಾಂತರಿಸಲಾಗಿದೆ.

ಈ ಸುದ್ದಿಯನ್ನೂ ಓದಿ: ಲೋಕಸಭೆಯಲ್ಲಿ ಕಲರ್‌ ಬಾಂಬ್‌ ಸಿಡಿಸಿದ ದುಷ್ಕರ್ಮಿಗಳು ಸಂಸದರ ಕಚೇರಿಯಿಂದ ಪಾಸ್‌ ಪಡೆದಿದ್ದರು..!