Saturday, 11th January 2025

Gurpreet Gogi Bassi : ಗುಂಡು ತಗುಲಿ ʼಆಪ್‌ʼ ಶಾಸಕ ಸಾವು ; ಕೊಲೆಯೋ? ಆತ್ಮಹತ್ಯೆಯೋ ಕಾರಣ ನಿಗೂಢ

Gurpreet Gogi Bassi

ಚಂಡೀಗಢ : ಪಂಜಾಬ್‌ನ (Punjab) ಲುಧಿಯಾನ ಪಶ್ಚಿಮ ಕ್ಷೇತ್ರದ ಆಮ್ ಆದ್ಮಿ (Aam Aadmi Party) ಪಕ್ಷದ ಶಾಸಕ ಗುರುಪ್ರೀತ್ ಗೋಗಿ ಬಸ್ಸಿ (Gurpreet Gogi Bassi) ಶುಕ್ರವಾರ ತಡರಾತ್ರಿ ಗುಂಡೇಟಿನಿಂದ ಮೃತಪಟ್ಟಿದ್ದಾರೆ. ಅವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದಿಲ್ಲ. 58 ವರ್ಷದ ಎಎಪಿ ಶಾಸಕರನ್ನು ಕುಟುಂಬ ಸದಸ್ಯರು ಶುಕ್ರವಾರ ರಾತ್ರಿ 12 ಗಂಟೆಗೆ ದಯಾನಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅಷ್ಟರಲ್ಲಾಗಲೇ ಬಸ್ಸಿ ಮೃತಪಟ್ಟಿದ್ದರು.

2022 ರಲ್ಲಿ ಎಎಪಿ ಸೇರಿದ್ದ ಗುರುಪ್ರೀತ್ ಗೋಗಿ ಬಸ್ಸಿ, ಲೂಧಿಯಾನ (ಪಶ್ಚಿಮ) ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಎರಡು ಬಾರಿ ಶಾಸಕರಾದ ಭರತ್ ಭೂಷಣ್ ಆಶು ಅವರನ್ನು ಸೋಲಿಸಿ ಶಾಸಕರಾಗಿದ್ದರು. ಅವರು ಮೃತಪಟ್ಟಿರುವುದನ್ನು ಎಎಪಿ ಜಿಲ್ಲಾ ಅಧ್ಯಕ್ಷ ಶರಣಪಾಲ್ ಸಿಂಗ್ ಮಕ್ಕರ್ ಮತ್ತು ಪೊಲೀಸ್ ಕಮಿಷನರ್ ಕುಲದೀಪ್ ಸಿಂಗ್ ಚಾಹಲ್ ಖಚಿತಪಡಿಸಿದ್ದಾರೆ.

ಶಾಸಕರಿಗೆ ಗುಂಡು ತಗುಲಿದ ಸುದ್ದಿ ತಿಳಿಯುತ್ತಿದ್ದಂತೆ ಕಮಿಷನರ್ ಚಹಾಲ್ ಆಸ್ಪತ್ರೆಗೆ ಧಾವಿಸಿದ್ದರು. ಶಾಸಕ ಬಸ್ಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಆಕಸ್ಮಿಕವಾಗಿ ಗುಂಡು ಹಾರಿ ಮೃತಪಟ್ಟಿದ್ದಾರೆಯೋ ಎಂಬುದನ್ನು ಶವಪರೀಕ್ಷೆ ವರದಿಯಿಂದ ದೃಢಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಎಎಪಿ ಜಿಲ್ಲಾ ಕಾರ್ಯದರ್ಶಿ ಪರಮವೀರ್ ಸಿಂಗ್ ಮಾತನಾಡಿ, ಶಾಸಕರು ದಿನನಿತ್ಯದ ಕಾರ್ಯಕ್ರಮಗಳನ್ನು ಮುಗಿಸಿ ಘುಮರ್ ಮಂಡಿಯಲ್ಲಿರುವ ತಮ್ಮ ಮನೆಗೆ ಮರಳಿದರು. ಅವರು ತಮ್ಮ ಕೊನೆಯ ಕ್ಷಣಗಳಲ್ಲಿ ತಮ್ಮ ಕುಟುಂಬದೊಂದಿಗೆ ಇದ್ದರು. ಗೋಗಿ ಅವರು ಪತ್ನಿ, ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ ಎಂದು ಹೇಳಿದ್ದಾರೆ. ಮೃತರ ಪತ್ನಿ ಡಾ ಸುಖಚೈನ್ ಕೌರ್ ಗೋಗಿ ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತಿಯನ್ನುಭದ್ರತಾ ಸಿಬ್ಬಂದಿಯ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

ಸಾವಿಗೂ ಮುನ್ನ ಶಾಸಕ ಬಸ್ಸಿ ಶುಕ್ರವಾರ ಮುಂಜಾನೆ, ಪಂಜಾಬ್‌ ವಿಧಾನಸಭಾ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಮತ್ತು ಸಂಸದ ಸಂತ ಬಾಬಾ ಬಲ್ಬೀರ್ ಸಿಂಗ್ ಸೀಚೆವಾಲ್ ಅವರನ್ನು ಲುಧಿಯಾನದಲ್ಲಿ ಬುದ್ಧ ನುಲ್ಲಾ ಸ್ವಚ್ಛತಾ ಅಭಿಯಾನದ ಸಲುವಾಗಿ ಭೇಟಿ ಮಾಡಿದ್ದರು ಎಂದು ತಿಳಿದು ಬಂದಿದೆ. ನಂತರ ಪ್ರಾಚಿನ್ ಶೀಟ್ಲಾ ಮಾತಾ ಮಂದಿರಕ್ಕೆ ಭೇಟಿ ನೀಡಿ, ಎರಡು ದಿನಗಳ ಹಿಂದೆ ದೇವಸ್ಥಾನದಿಂದ ಬೆಳ್ಳಿ ಕಳ್ಳತನ ಮಾಡಿರುವ ಕಳ್ಳರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭಕ್ತರಿಗೆ ಭರವಸೆ ನೀಡಿದ್ದರು.

ಈ ಸುದ್ದಿಯನ್ನೂ ಓದಿ : Ramesh Pehalwan: ಬಿಜೆಪಿ ತೊರೆದು ಆಪ್‌ ಸೇರಿದ ರಮೇಶ್ ಪೆಹಲ್ವಾನ್ ದಂಪತಿ; ಚುನಾವಣೆಗೂ ಮುನ್ನ ಕಮಲ ಪಾಳಯಕ್ಕೆ ಶಾಕ್‌

Leave a Reply

Your email address will not be published. Required fields are marked *