Monday, 25th November 2024

ಗುರುವಾಯೂರ್ ಶ್ರೀಕೃಷ್ಣ ದೇವಾಲಯ ಎರಡು ವಾರ ಬಂದ್

ತ್ರಿಶೂರ್: ಕೊರೊನಾ ಸೋಂಕು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ವಿಶ್ವಪ್ರಸಿದ್ಧ ಗುರುವಾಯೂರ್ ಶ್ರೀಕೃಷ್ಣ ದೇವಾಲಯವನ್ನು ಎರಡು ವಾರಗಳ ಮಟ್ಟಿಗೆ ಬಂದ್ ಮಾಡಲಾಗುತ್ತಿದೆ.

ದೇವಾಲಾಯದ ಸುತ್ತ ಮುತ್ತಲಿನ ಪ್ರದೇಶವನ್ನು ಕೋವಿಡ್ 19 ಬಾಂಧಿತ ವಲಯವೆಂದು ಘೋಷಿಸಿದೆ. ಸಾರ್ವಜನಿಕ ದರ್ಶನ ನಿರ್ಬಂಧಿಸುವ ನಿರ್ಧಾರವನ್ನು ಪ್ರಕಟಿಸಿದ ದೇವಸ್ವಂ ಪತ್ರಿಕಾ ಪ್ರಕಟಣೆಯಲ್ಲಿ ಎಂದಿನಂತೆ ದೇವಾಲಯ ಸಂಕೀರ್ಣದಲ್ಲಿ ಎಲ್ಲಾ ನಿಯಮಿತ ಪೂಜೆಗಳು ಮತ್ತು ಮೂಲ ವಿಧಿಗಳನ್ನು ನೆರವೇರಿಸಲಾಗುವುದು.

ಡಿ.12 ರಿಂದ ವರ್ಚುವಲ್ ಕ್ಯೂ ಮತ್ತು ನೇರ ದರ್ಶನ ಮತ್ತು ಸಮೀಪದ ದೀಪಸ್ಥಂಭ ದರ್ಶನ, ತುಕಾಭಾರ ಹಾಗೂ ಇನ್ನಿತರೆ ಸೇವೆಗಳನ್ನು ರದ್ದುಪಡಿಸಲಾಗಿದೆ.

ಶುಕ್ರವಾರ ನಡೆದ ಗುರುವಾಯೂರ್ ದೇವಸ್ವಂ ಆಡಳಿತ ಸಮಿತಿಯ ತುರ್ತು ಸಭೆಯಲ್ಲಿ ಶನಿವಾರದಿಂದ ಎರಡು ವಾರ ಕಾಲ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ದಿನಗಳಲ್ಲಿ ಎಲ್ಲಾ ದೇವಸ್ವಂ ಅಧಿಕಾರಿಗಳನ್ನು ಪ್ರತಿಜನಕ ಅಥವಾ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲು ಸಭೆ ಯಲ್ಲಿ ತೀರ್ಮಾನಿಸಲಾಗಿದೆ. ಆ ನಂತರದಲ್ಲಿ ಇಂತಹಾ ಪರೀಕ್ಷೆಗಳು ತಿಂಗಳಿಗೊಮ್ಮೆ ನಡೆಯಲಿದೆ.

ದೇವಾಲಯದ ಮೂಲಗಳ ಪ್ರಕಾರ, ಆಲಯದ 22 ಉದ್ಯೋಗಿಗಳು ಶುಕ್ರವಾರ ಸೋಂಕಿಗೆ ಧನಾತ್ಮಕ ವರದಿ ಪಡೆದಿದ್ದಾರೆ. ಶುಕ್ರವಾರ 272 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು ಗುರುವಾರ 393 ಪ್ರಕರಣಗಳು ವರದಿಯಾಗಿವೆ.

ಶನಿವಾರ ನಿಗದಿಯಾಗಿರುವ ಮದುವೆಗಾಗಿ ಈಗಾಗಲೇ ದೇವಸ್ಥಾನವನ್ನು ತಲುಪಿದ ಕುಟುಂಬದವರಿಗೆ ಕಟ್ಟುನಿಟ್ಟಾದ ಕೋವಿಡ್ ಪ್ರೊಟೋಕಾಲ್‌ಗೆ ಅನುಸಾರವಾಗಿ ಸಮಾರಂಭವನ್ನು ನಡೆಸಲು ಅವಕಾಶ ನೀಡಲಾಗುವುದು ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.