Thursday, 19th September 2024

Haryana Polls: ಬಿಜೆಪಿ ಎರಡನೇ ಅಭ್ಯರ್ಥಿ ಪಟ್ಟಿ ರಿಲೀಸ್‌; ವಿನೇಶ್‌ ಪೋಗಟ್‌ ವಿರುದ್ಧ ಕಣಕ್ಕಿಳಿಯುವವರು ಇವರೇ ನೋಡಿ

Haryana Polls

ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆ(Haryana Polls)ಗೆ ಗರಿಗೆದರಿದ್ದು, ಈಗಾಗಲೇ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿರುವ ಬಿಜೆಪಿ (BJP) ತನ್ನ ಎರಡನೇ ಅಭ್ಯರ್ಥಿಗಳ ಪಟ್ಟಿ(Candidates List)ಯನ್ನು ಇಂದು ರಿಲೀಸ್‌ ಮಾಡಿದೆ. ಇಂದು ಒಟ್ಟು 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದ್ದು, ಇದುವರೆಗೆ ಒಟ್ಟು87 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ.

ಇನ್ನು ಇತ್ತೀಚೆಗೆ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದ ಖ್ಯಾತ ಕುಸ್ತಿಪಟು ವಿನೇಶ್‌ ಪೋಗಟ್‌ ಸ್ಪರ್ಧಿಸುತ್ತಿರುವ ಜುಲಾನ ಕ್ಷೇತ್ರದಲ್ಲಿ ಬಿಜೆಪಿ ಕ್ಯಾ. ಯೋಗೇಶ್‌ ಭೈರಾಗಿ ಅವರನ್ನು ಕಣಕ್ಕಿಳಿಸಿದೆ. ಆ ಮೂಲಕ ಎರಡು ಪಕ್ಷಗಳ ನಡುವೆ ನೆಕ್‌ ಟು ನೆಕ್‌ ಫೈಟ್‌ ಏರ್ಪಡಲಿದೆ. ಇನ್ನು ಯೋಗೇಶ್‌ ಬೈರಾಗಿ ಅವರು ರಾಜ್ಯ ಬಿಜೆಪಿ ಯುವಮೋರ್ಚಾದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಅಲ್ಲದೇ ಪಕ್ಷದ ಹರ್ಯಾಣ ಕ್ರೀಡಾ ಸೆಲ್‌ನ ಉಪಾಧ್ಯಕ್ಷರೂ ಹೌದು.

ಪಕ್ಷವು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರ ಆಪ್ತ ಪವನ್ ಸೈನಿ ಅವರನ್ನು ನಾರೈಂಗರ್ ಕ್ಷೇತ್ರದಿಂದ ಕಣಕ್ಕಿಳಿಸಿದೆ ಮತ್ತು ಸತ್ಪಾಲ್ ಜಂಬಾ ಅವರನ್ನು ಪುಂಡ್ರಿ ಕ್ಷೇತ್ರದಿಂದ ಕಣಕ್ಕಿಳಿಸಿದೆ.

ಬಲವಾದ ಆಡಳಿತ ವಿರೋಧಿ ಅಲೆಗಳ ನಡುವೆಯೂ ಬಿಜೆಪಿ ರಾಜ್ಯದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಲು ಪಣ ತೊಟ್ಟಿದ್ದು, ಅದಕ್ಕಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೊಸ ಪ್ರಯೋಗಕ್ಕೆ ಕೈ ಹಾಕಿದೆ.

ಸೆಪ್ಟೆಂಬರ್‌ 4ರಂದು ಪ್ರಕಟಿಸಲಾದ 67 ಅಭ್ಯರ್ಥಿಗಳ ಪೈಕಿ 25 ಮಂದಿ ಹೊಸಬರು ಎನ್ನುವುದು ವಿಶೇಷ. ಇದೇ ವೇಳೆ ಕೆಲವು ಶಾಸಕರಿಗೆ ಬೇರೆ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ಜತೆಗೆ ರಾಜ್ಯದಲ್ಲಿನ ತನ್ನ ಪ್ರಭಾವಿ ನಾಯಕರನ್ನು ಸಮಾಧಾನಪಡಿಸಲು ಮುಂದಾಗಿರುವ ಬಿಜೆಪಿ ವಂಶಪಾರಂಪರ್ಯ ವಿರುದ್ಧದ ನಿಲುವು ಮತ್ತು ಮತ್ತು 75ನೇ ವಯಸ್ಸಿನಲ್ಲಿ ನಿವೃತ್ತಿ ಎನ್ನುವ ಅಲಿಖಿತ ನಿಯಮವನ್ನು ಬದಿಗೊತ್ತಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

ಬಿಡುಗಡೆಗೊಂಡ ಪಟ್ಟಿಯಲ್ಲಿ 2019ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಐವರು ನಾಯಕರಿಗೆ ಮಣೆ ಹಾಕಿರುವುದು ಕಂಡು ಬಂದಿದೆ. ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಸೇರಿದಂತೆ ನಾಲ್ವರು ಶಾಸಕರ ಕ್ಷೇತ್ರಗಳನ್ನು ಬದಲಾಯಿಸಲಾಗಿದ್ದು, 8 ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Haryana Polls: ಕುಸ್ತಿಪಟು ವಿನೇಶ್‌ ಪೋಗಟ್‌ ಜೂಲಾನಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ