ರಾಂಚಿ: ಜೆಎಂಎಂ (Jharkhand Mukti Morcha) ನಾಯಕ ಹೇಮಂತ್ ಸೊರೆನ್ (Hemant Soren) ಅವರು ಇಂದು (ನ. 28) ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ನಾಯಕತ್ವದ ʼಇಂಡಿಯಾʼ ಬ್ಲಾಕ್ (India bloc’s) ಮೈತ್ರಿಕೂಟವು ನಿರ್ಣಾಯಕ ಗೆಲುವನ್ನು ಸಾಧಿಸಿದ ಹಿನ್ನೆಲೆಯಲ್ಲಿ ಮತ್ತೆ ಸಿಎಂ ಆಗಿ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಹೇಮಂತ್ ಸೊರೆನ್ ಅವರಿಗೆ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್, ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ʼಇಂಡಿಯಾʼ ಮೈತ್ರಿಕೂಟದ ಹಲವು ನಾಯಕರು ಭಾಗವಹಿಸಿದರು. ರಾಂಚಿಯ ಮೊರಾದಾಬಾದ್ ಮೈದಾನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನೆರವೇರಿತು.
ಶನಿವಾರ (ನ. 23) ಘೋಷಣೆಯಾದ ರಾಜ್ಯ ಚುನಾವಣೆಯ ಫಲಿತಾಂಶದಲ್ಲಿ ಜೆಎಂಎಂ ನೇತೃತ್ವದ ʼಇಂಡಿಯಾʼ ಮೈತ್ರಿಕೂಟವು 81 ಸ್ಥಾನಗಳಲ್ಲಿ ಒಟ್ಟು 56 ಸ್ಥಾನಗಳನ್ನು ಗೆದ್ದಿದೆ. 41 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಹೇಮಂತ್ ಸೊರೆನ್ ನೇತೃತ್ವದ ಪಕ್ಷವು 34 ಸ್ಥಾನಗಳಲ್ಲಿ ದಾಖಲೆಯ ಗೆಲುವನ್ನು ಸಾಧಿಸಿದೆ. ಕಾಂಗ್ರೆಸ್ 30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ 16 ಸ್ಥಾನಗಳಲ್ಲಿ ಜಯಗಳಿಸಿದೆ. RJD ಮತ್ತು CPIML ಕ್ರಮವಾಗಿ 6 ಮತ್ತು 4 ಸ್ಥಾನಗಳನ್ನು ಗೆದ್ದಿವೆ.
Hemant Soren takes oath as Jharkhand Chief Minister for fourth time@prabhakarjourno reports pic.twitter.com/BDcDFiaC6R
— NDTV (@ndtv) November 28, 2024
49 ವರ್ಷದ ಹೇಮಂತ್ ಸೊರೆನ್ ಅವರು 2009ರಲ್ಲಿ ಶಾಸಕರಾಗುವ ಮೊದಲು ರಾಜ್ಯಸಭೆಯಲ್ಲಿ ಅಲ್ಪಾವಧಿಯ ರಾಜಕೀಯ ಜೀವನವನ್ನು ಆರಂಭಿಸಿದರು. ಅವರು 2010ರಿಂದ 2013ರವರೆಗೆ ರಾಜ್ಯ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಜೆಎಂಎಂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಾಗ ಅರ್ಜುನ್ ಮುಂಡಾ ರಾಜ್ಯದ ಮುಖ್ಯಮಂತ್ರಿಯಾದರು. ನಂತರ 2013ರಲ್ಲಿ ಕಾಂಗ್ರೆಸ್ ಮತ್ತು ಆರ್ಜೆಡಿ ಜತೆ ಜೆಎಂಎಂ ಮೈತ್ರಿ ಮಾಡಿಕೊಂಡು ಹೇಮಂತ್ ಸೊರೆನ್ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 2014ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಆ ಸಮಯದಲ್ಲಿ ಸೊರೆನ್ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು. 2019ರ ಅಸೆಂಬ್ಲಿ ಚುನಾವಣೆಯಲ್ಲಿ ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟವು ಗೆಲ್ಲುವುದರೊಂದಿಗೆ ಸೊರೆನ್ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.
ಈ ವರ್ಷದ ಆರಂಭದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಹೇಮಂತ್ ಸೊರೆನ್ ಅವರನ್ನು ಬಂಧಿಸಿತ್ತು. ಸೊರೆನ್ ಅವರು ತಮ್ಮ ಮೇಲಿನ ಆರೋಪಗಳನ್ನುತಳ್ಳಿ ಹಾಕಿದ್ದರು. ಬಿಜೆಪಿಯು ತನ್ನ ರಾಜಕೀಯ ದುರುದ್ದೇಶಕ್ಕಾಗಿ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಆರೋಪಿಸಿದ್ದರು. ಅವರ ಬಂಧನಕ್ಕೂ ಮೊದಲು ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸೊರೆನ್ ಅವರ ನಿಕಟವರ್ತಿ ಚಂಪೈ ಸೊರೆನ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. 6 ತಿಂಗಳ ಜೈಲುವಾಸದ ನಂತರ, ಹೇಮಂತ್ ಸೊರೆನ್ ಅವರಿಗೆ ಜಾಮೀನು ನೀಡಲಾಯಿತು. ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಮುಂದಾದಾಗ, ತನಗೆ ಅವಮಾನವಾಗಿದೆ ಎಂದು ಆರೋಪಿಸಿ ಚಂಪೈ ಸೊರೆನ್ ಜೆಎಂಎಂ ತೊರೆದರು.
ಹೇಮಂತ್ ಸೊರೆನ್ ಜೈಲಿನಲ್ಲಿದ್ದ ವೇಳೆ ಅವರ ಪತ್ನಿ ಕಲ್ಪನಾ ರಾಜಕೀಯದಲ್ಲಿ ಸಕ್ರಿಯರಾದರು. ತಮ್ಮ ಪತಿಯ ಪರ ಮತ ಪ್ರಚಾರವನ್ನೂ ಮಾಡಿ ಪ್ರಮುಖ ಸಭೆಗಳಲ್ಲಿ ಪಾಲ್ಗೊಂಡಿದ್ದರು . ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅವರು ಶಾಸಕಿಯಾಗಿಯೂ ಆಯ್ಕೆಯಾಗಿದ್ದಾರೆ.
ಜಾರ್ಖಂಡ್ನಲ್ಲಿ ಗೆಲುವು ಸಾಧಿಸಲು ಬಿಜೆಪಿ ಸಾಕಷ್ಟು ಕಸರತ್ತು ನಡೆಸಿತ್ತು. ಬಿಜೆಪಿಯ ಪ್ರಭಾವಿ ನಾಯಕರು ಚುನಾವಣಾ ಪ್ರಚಾರದ ಸಮಯದಲ್ಲಿ ಜಾರ್ಖಂಡ್ ನತ್ತ ಪ್ರಯಾಣ ಬೆಳೆಸಿದ್ದರು. ಸೊರೆನ್ ನೇತೃತ್ವದ ಪಕ್ಷವನ್ನು ನಿರಂತರವಾಗಿ ಟೀಕಿಸುತ್ತ, ಬಾಂಗ್ಲಾದೇಶ ನಿರಾಶ್ರಿತರ ಒಳನುಸುಳುವಿಕೆಗೆ ಆಡಳಿತ ಪಕ್ಷವು ಸಹಾಯ ಮಾಡುತ್ತಿದೆ ಎಂದು ಮತ ಪ್ರಚಾರದ ವೇಳೆ ಆರೋಪಿಸಿದ್ದರು. ಆದರೆ ಹೇಮಂತ್ ಸೊರೆನ್ ಸರ್ಕಾರದ ಜನ ಕಲ್ಯಾಣ ಯೋಜನೆಗಳು ಮತ್ತು ಅವರನ್ನು ಬಂಧನದ ಅನುಕಂಪದ ಅಲೆಯಲ್ಲಿ ಜೆಎಂಎಂ ದಾಖಲೆಯ ಗೆಲುವು ಸಾಧಿಸಿ ಮತ್ತೆ ರಾಜ್ಯದಲ್ಲಿ ಈಗ ಅಧಿಕಾರದ ಗದ್ದುಗೆಗೆ ಏರಿದೆ.
ಈ ಸುದ್ದಿಯನ್ನೂ ಓದಿ: Pralhad Joshi: ಯಾವ ಕಾಲಕ್ಕೂ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಪ್ರಲ್ಹಾದ್ ಜೋಶಿ