ಅಹ್ಮದಾಬಾದ್: ರಾಜ್ಯ ರಾಜಧಾನಿಯಲ್ಲಿ ಚೀನಾದ ಹೊಸ ವೈರಲ್ ಹೆಚ್‌ಎಂಪಿವಿ(HMPV Virus) ಎರಡು ಪ್ರಕರಣಗಳು ಪತ್ತೆಯಾಗಿರುವ ಬೆನ್ನಲ್ಲೇ ಗುಜರಾತ್‌ನ ಅಹ್ಮದಾಬಾದ್‌ನಲ್ಲೂ ಮಗುವಿನಲ್ಲಿ ಈ ಸೋಂಕು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಆಮೂಲಕ ದೇಶಾದ್ಯಂತ ಒಟ್ಟು ಮೂರು HMPV ಕೇಸ್ ಇದುವರೆಗೆ ಬೆಳಕಿಗೆ ಬಂದಿವೆ. ಇನ್ನು ಸೋಂಕು ಪತ್ತೆಯಾಗಿರುವ ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ವರದಿ ನೀಡಿದ್ದಾರೆ.
ಗುಜರಾತ್‌ನ ಖಾಸಗಿ ಆಸ್ಪತ್ರೆಯಲ್ಲಿ ಶೀತ ಜ್ವರದಿಂದ ಬಳಲುತ್ತಿದ್ದ ಮಗುವಿನಲ್ಲಿ ಈ ವೈರಸ್ ಪತ್ತೆಯಾಗಿದೆ. ಇನ್ನು ಮಗುವನ್ನು ತೀವ್ರ ನಿಗಾ ಘಟಕದಲ್ಲಿಡಲಾಗಿದ್ದು, ಸೋಂಕು ಹರಡದಂತೆ ವೈದ್ಯರು ಎಚ್ಚರಿಕೆ ವಹಿಸಿದ್ದಾರೆ. ಬೆಂಗಳೂರಿನಲ್ಲಿ ಇಬ್ಬರು ಹಸುಗೂಸುಗಳು ಹಾಗೂ ಗುಜರಾತ್ ನಲ್ಲಿ ಓರ್ವ ಹಸುಗೂಸಿಗೆ ಸೋಂಕು ತಗುಲಿರುವುದು ಧೃಡವಾಗಿದೆ.
ಈ ಪ್ರಳಯಾಂತಕ ವೈರಸ್ ಎಲ್ಲಿಂದ ಬಂತು, ಹೇಗೆ ಬಂತು ಅಂತ ಯಾರಿಗೂ ಗೊತ್ತಾಗ್ತಿಲ್ಲ. ಆದರೆ ಮೊದಲ ಬಾರಿಗೆ ಅದು ಹೆಚ್ಚಾಗಿ ಹಾವಳಿ ಮಾಡ್ತಾ ಇರೋದು ಚೀನಾದಲ್ಲಿ ಎಂಬುದಂತೂ ಖಂಡಿತ. ಆದ್ರೆ, ತಜ್ಞರು ಹೇಳೋ ಪ್ರಕಾರ, ಇದು ಬಹಳ ಮೊದಲಿನಿಂದಲೂ ಇದೆ. 2001ರಲ್ಲಿ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮಕ್ಕಳನ್ನು ಪರೀಕ್ಷಿಸಿ ಅವರಿಂದ ಸಂಗ್ರಹಿಸಿದ ಸ್ಯಾಂಪಲ್‌ಗಳಲ್ಲಿ ಮೊದಲ ಬಾರಿಗೆ ಡಚ್ ಸಂಶೋಧಕರು ಎಚ್‌ಎಂಪಿವಿ ಸೋಂಕನ್ನು ಪತ್ತೆ ಮಾಡಿದ್ದರು. ಕೆಲವು ಅಧ್ಯಯನಗಳ ಪ್ರಕಾರ ಈ ಸೋಂಕು ಕಳೆದ 60 ವರ್ಷಗಳಿಂದ ಅಸ್ತಿತ್ವದಲ್ಲಿದೆ. 2023ರಲ್ಲಿ ಇದು ನೆದರ್ಲೆಂಡ್, ಬ್ರಿಟನ್, ಫಿನ್ಲೆಂಡ್, ಆಸ್ಟ್ರೇಲಿಯಾ, ಕೆನಡಾ ಹಾಗೂ ಅಮೆರಿಕದಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿತ್ತು.
ಕೊರೊನಾವೈರಸ್ ಮಾದರಿಯ ಲಕ್ಷಣಗಳನ್ನೇ ಈ ವೈರಸ್ ಕೂಡಾ ಹೊಂದಿದ್ದು, ಪ್ರಮುಖವಾಗಿ ಮಕ್ಕಳಿಗೆ ಮತ್ತು ರೋಗ ನಿರೋಧಕ ಶಕ್ತಿ ಕಮ್ಮಿ ಇರುವವರಿಗೆ ವೇಗವಾಗಿ ಹರಡುತ್ತದೆ. ಕೋವಿಡ್ ವೈರಸ್ ರೀತಿಯಲ್ಲೇ ಇದು ಕೂಡ ಶ್ವಾಸಕೋಶಕ್ಕೆ ಸಂಬಂಧಿಸಿ ಸಮಸ್ಯೆ ಉಂಟುಮಾಡುತ್ತೆ. ವಿಶೇಷವಾಗಿ ಮಕ್ಕಳಿಗೆ ಅದರಲ್ಲೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ವೈರಸ್ ಬೇಗ ಹರಡುವ ಸಾಧ್ಯತೆ ಇದೆ. ವಯಸ್ಕರು ಮತ್ತು ರೋಗ ನಿರೋಧಕ ಶಕ್ತಿ ಕಮ್ಮಿ ಇರುವವರಿಗೆ ಇದು ವೇಗವಾಗಿ ಹರಡಬಹುದು.
ಈ ಹೊಸ ಕಾಯಿಲೆಯ ರೋಗ ಲಕ್ಷಣಗಳೇನು?
ಎಚ್ಎಂಪಿವಿ ವೈರಸ್‌ನ ರೋಗ ಲಕ್ಷಣಗಳು ಹೀಗಿವೆ- ಉಬ್ಬಸ, ಮೂಗು ಕಟ್ಟಿಕೊಳ್ಳುವುದು, ಕೆಮ್ಮು, ಜ್ವರ, ಉಸಿರಾಟದ ತೊಂದರೆ ಎದುರಾಗಬಹುದು ಮತ್ತು ಇದು ಗಂಭೀರವಾದರೆ ನ್ಯೂಮೋನಿಯಾಗೆ ತಿರುಗುವ ಸಾಧ್ಯತೆಯಿದೆ. ಅಸ್ತಮಾ ಮುಂತಾದ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುವವರಿಗೆ ಹೆಚ್ಚಿನ ಸಮಸ್ಯೆ ಆಗಬಹುದು. ರೋಗಕ್ಕೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ದೊರೆಯದೇ ಹೋದರೆ ಪ್ರಾಣಕ್ಕೂ ಎರವಾಗಬಹುದು. ಇದರ ತೀವ್ರತೆಯ ಆಧಾರದ ಮೇಲೆ ಇದು ಎಷ್ಟು ದಿನದ ವರೆಗೆ ಇರುತ್ತೆ ಎನ್ನುವುದು ನಿರ್ಧಾರವಾಗುತ್ತದೆ.
ಈ ಸುದ್ದಿಯನ್ನೂ ಓದಿ: HMPV ವೈರಾಣು ಸೋಂಕು; ಭಾರತದಲ್ಲಿ ಆತಂಕ ಬೇಡ; ಆರೋಗ್ಯ ಸಂಸ್ಥೆ