ನವದೆಹಲಿ: ಮಾರಕ ಕೊರೊನಾ ವೈರಸ್ ಅನ್ನು ಜಗತ್ತಿಗೆ ಕೊಡುಗೆಯಾಗಿ ಕೊಟ್ಟು ಇಡೀ ಪ್ರಪಂಚದ ಆರ್ಥಿಕತೆಯನ್ನು ಹಳ್ಳ ಹಿಡಿಯುವಂತೆ ಮಾಡಿದ ಚೀನಾ, ಇದೀಗ ಅಂಥದೇ ಇನ್ನೊಂದು ಹೊಸ ವರ್ಷದ ʼಗಿಫ್ಟ್ʼ ಅನ್ನು ಜಗತ್ತಿಗೆ ಕೊಡ್ತಾ ಇದೆ. ನಾಲ್ಕು ವರ್ಷದ ಹಿಂದೆ ನಾವು ಅನುಭವಿಸಿದ್ದ ಮಾಸ್ಕ್, ಸ್ಯಾನಿಟೈಸರ್, ಸೋಶಿಯಲ್ ಡಿಸ್ಟೆನ್ಸ್, ಕ್ವಾರಂಟೈನ್ ಇವುಗಳನ್ನೆಲ್ಲ ಮತ್ತೊಮ್ಮೆ ಅನುಭವಿಸೋಕೆ ನಾವೀಗ ರೆಡಿಯಾಗಬೇಕಾಗಿದೆ. ನಿಜ, ಕೋವಿಡ್ ಥರದ್ದೇ ಇನ್ನೊಂದು ಸೋಂಕು ಚೀನಾವನ್ನು ಕಂಗಾಲು ಮಾಡಿದೆ. ಎಲ್ಲಿ ಈ ಮಾರಕ ವೈರಸ್ ಭಾರತಕ್ಕೂ ಲಗ್ಗೆ ಇಡುತ್ತೋ ಎಂದು ಭಯ ಪಡುವ ಮುನ್ನವೇ ರಾಜ್ಯ ರಾಜಧಾನಿ ಬೆಂಗಳೂರಿಗೆ ದಾಂಗುಡಿ ಇಟ್ಟಿದೆ. ಬನ್ನಿ, ಇದರ ಬಗ್ಗೆ ಡಿಟೇಲ್ ಆಗಿ ತಿಳಿದುಕೊಳ್ಳೋಣ(HMPV Virus).
ಹೌದು, ಕೊರೊನಾ ವೈರಸ್‌ಗೆ ಜನ್ಮ ನೀಡಿದ ಚೀನಾ ದೇಶವೇ ಈ ಹೊಸ ಮಾರಿಗೂ ತವರುಮನೆಯಾಗಿದೆ. ಕಳೆದ ಡಿಸೆಂಬರ್ ಮಧ್ಯ ಭಾಗದಲ್ಲಿ ಈ ವೈರಸಿನ ಸೋಂಕನ್ನು ಪತ್ತೆ ಮಾಡಲಾಯಿತು. ಇದರ ಹೆಸರು ಹ್ಯೂಮನ್ ಮೆಟಾನ್ಯುಮೊವೈರಸ್ ಅಥವಾ ಸಣ್ಣದಾಗಿ ಹೇಳೋದಾದ್ರೆ HMPV. ಚೀನಾದಲ್ಲಿ ಈಗ ಏನಾಗ್ತಿದೆ ಅಂದ್ರೆ, ದೇಶದ ಹಲವು ಭಾಗಗಳಲ್ಲಿ ಎಚ್‌ಎಂಪಿವಿ ಸೋಂಕು ವ್ಯಾಪಕವಾಗಿ ಹಬ್ಬುತ್ತಾ ಇದೆ. ಈ ಉಸಿರಾಟ ಸಂಬಂಧಿ ಸಮಸ್ಯೆಯಿಂದಾಗಿ ಸಾವಿರಾರು ಜನ ಆಸ್ಪತ್ರೆಗೆ ಧಾವಿಸುತ್ತಾ ಇದ್ದಾರೆ. ಪರಿಣಾಮವಾಗಿ ಆಸ್ಪತ್ರೆಗಳೆಲ್ಲಾ ತುಂಬಿ ತುಳಕುತ್ತಿವೆ. ಭಾರಿ ಪ್ರಮಾಣದಲ್ಲಿ ಸಾವುನೋವು ಕೂಡಾ ಸಂಭವಿಸಿದೆ. ಹೀಗಾಗಿ ಶವಾಗಾರಗಳು ಮತ್ತು ಸ್ಮಶಾನಗಳು ಕೂಡಾ ತುಂಬಿ ತುಳುಕುತ್ತಿವೆ. ಸೋಂಕು ನಿಗ್ರಹಕ್ಕಾಗಿ ಚೀನಾ ಸರ್ಕಾರ ಎಮರ್ಜೆನ್ಸಿ ಅಥವಾ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದೆ.
ಹಾಗಾದ್ರೆ ಈ ವೈರಸ್ ಎಲ್ಲಿಂದ ಬಂತು?
ಈ ಪ್ರಳಯಾಂತಕ ವೈರಸ್ ಎಲ್ಲಿಂದ ಬಂತು, ಹೇಗೆ ಬಂತು ಅಂತ ಯಾರಿಗೂ ಗೊತ್ತಾಗ್ತಿಲ್ಲ. ಆದರೆ ಮೊದಲ ಬಾರಿಗೆ ಅದು ಹೆಚ್ಚಾಗಿ ಹಾವಳಿ ಮಾಡ್ತಾ ಇರೋದು ಚೀನಾದಲ್ಲಿ ಎಂಬುದಂತೂ ಖಂಡಿತ. ಆದ್ರೆ, ತಜ್ಞರು ಹೇಳೋ ಪ್ರಕಾರ, ಇದು ಬಹಳ ಮೊದಲಿನಿಂದಲೂ ಇದೆ. 2001ರಲ್ಲಿ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮಕ್ಕಳನ್ನು ಪರೀಕ್ಷಿಸಿ ಅವರಿಂದ ಸಂಗ್ರಹಿಸಿದ ಸ್ಯಾಂಪಲ್‌ಗಳಲ್ಲಿ ಮೊದಲ ಬಾರಿಗೆ ಡಚ್ ಸಂಶೋಧಕರು ಎಚ್‌ಎಂಪಿವಿ ಸೋಂಕನ್ನು ಪತ್ತೆ ಮಾಡಿದ್ದರು. ಕೆಲವು ಅಧ್ಯಯನಗಳ ಪ್ರಕಾರ ಈ ಸೋಂಕು ಕಳೆದ 60 ವರ್ಷಗಳಿಂದ ಅಸ್ತಿತ್ವದಲ್ಲಿದೆ. 2023ರಲ್ಲಿ ಇದು ನೆದರ್ಲೆಂಡ್, ಬ್ರಿಟನ್, ಫಿನ್ಲೆಂಡ್, ಆಸ್ಟ್ರೇಲಿಯಾ, ಕೆನಡಾ ಹಾಗೂ ಅಮೆರಿಕದಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿತ್ತು.
ಹಾಗಾದ್ರೆ ಚೀನಾದಲ್ಲಿ ಈಗ ಇದು ಈ ಪ್ರಮಾಣದಲ್ಲಿ ಅಬ್ಬರಿಸ್ತಾ ಇರೋಕೆ ಕಾರಣ ಏನು? ಕಾರಣ ಇದೆ. ಮೊದಲನೇ ಕಾರಣದ ಅಂದ್ರೆ ಕೋವಿಡ್ ನಂತರ ಚೀನಾ ಇದೀಗ ತಾನೆ ಪೂರ್ಣ ಪ್ರಮಾಣದಲ್ಲಿ ಚೀನಾ ತನ್ನ ಸೋಶಿಯಲ್ ಬದುಕನ್ನು ತೆರೆದಿಟ್ಟಿದೆ. ಅಂದ್ರೆ ಸೋಶಿಯಲ್ ಡಿಸ್ಟೆನ್ಸ್, ಮಾಸ್ಕ್ ಧರಿಸುವಿಕೆ ಮುಂತಾದ ಕ್ರಮಗಳೆಲ್ಲ ಇತ್ತೀಚಿನವರೆಗೂ ಚೀನಾದಲ್ಲಿದ್ದವು. ಅವುಗಳನ್ನು ಲಿಫ್ಟ್ ಮಾಡಿದ್ದೇ ತಡ, ಕೊರೊನಾ ಸೇರಿದಂತೆ ಎಚ್‌ಎಂಪಿವಿ ಕೂಡ ಇಲ್ಲಿ ರುದ್ರನರ್ತನ ಮಾಡುವುದಕ್ಕೆ ಶುರು ಮಾಡಿದೆ. ಇನ್ನೊಂದು ಸಾಧ್ಯತೆ ಅಂದ್ರೆ, ಕೊರೊನಾ ವೈರಸ್‌ಗೆ ಆದ ಹಾಗೆಯೇ, ಎಚ್‌ಎಂಪಿವಿ ವೈರಸ್ ಕೂಡ ಚೀನಾದಲ್ಲಿ ಮ್ಯುಟೇಶನ್ ಆಗಿದೆ. ಇದು ಸಹಜವಾಗಿಯೂ ಆಗಿರಬಹುದು, ಲ್ಯಾಬ್‌ನಲ್ಲೂ ಇದರ ಮ್ಯುಟೇಶನ್ ನಡೆದಿರಬಹುದು. ಹೀಗೊಂದು ವೇಳೆ ಆಗಿದ್ರೆ, ಕೋವಿಡ್ ವಿಷಯದಲ್ಲಿ ಆಗಿರೋ ಹಾಗೇ ಸತ್ಯ ಏನು ಎಂಬುದು ಜಗತ್ತಿನ ಕಣ್ಣಿಗೆ ಕಾಣದ ಹಾಗೆ ನಿಗೂಢವಾಗಿ ಚೀನಾದಲ್ಲಿಯೇ ಕಣ್ಮರೆಯಾಗಲಿದೆ.
ಸದ್ಯ ಚೀನಾ ದೇಶ ದೇಶದಲ್ಲಿ ಎಮರ್ಜೆನ್ಸಿ ಘೋಷಿಸಿದೆ. ವೇಗವಾಗಿ ಹರಡುತ್ತಿರುವ ಸೋಂಕನ್ನು ತಡೆಗಟ್ಟೋಕೆ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮತ್ತು ಪ್ರತ್ಯೇಕ ಪ್ರೊಟೋಕಾಲ್ ಘೋಷಿಸಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯ ಮಾಡ್ತಾ ಇದೆ. ಸೋಶಿಯಲ್ ಡಿಸ್ಟೆನ್ಸ್ ಅನ್ನು ಮತ್ತೆ ತರೋಕೆ ಮುಂದಾಗಿದೆ. ಇಷ್ಟೆಲ್ಲಾ ಆದ್ರೂ ವಿಶ್ವ ಆರೋಗ್ಯ ಸಂಸ್ಥೆ ಮಾತ್ರ ಇನ್ನೂ ಮೆಡಿಕಲ್ ಎಮರ್ಜೆನ್ಸಿಯನ್ನು ಘೋಷಿಸಿಲ್ಲ. ಕೋವಿಡ್ ಬಂದಾಗಲೂ, ಅದು ಸೀರಿಯಸ್ ಆಗುವವರೆಗೂ ವಿಶ್ವ ಆರೋಗ್ಯ ಸಂಸ್ಥೆ ಹೊಣೆಯೇ ಇಲ್ಲದವರ ಹಾಗೆ ವರ್ತಿಸಿತ್ತು. ಜಗತ್ತಿಗೆಲ್ಲಾ ಹರಡಿದ ಮೇಲೆ ಅದು ಎಚೆತ್ತುಕೊಂಡಿತ್ತು. ಈಗ್ಲೂ ಹಾಗೇ ಆಗುತ್ತಾ ಎಂಬ ಆತಂಕ ಮೂಡಿದೆ.
ಈ ವೈರಸ್ ಅಟ್ಯಾಕ್ ಮಾಡಿದ್ರೆ ಏನಾಗುತ್ತೆ?
ಎಚ್ಎಂಪಿವಿ ಬಂದ್ರೆ ಏನಾಗುತ್ತೆ? ಡಾಕ್ಟರ್ಸ್ ಏನ್ ಹೇಳ್ತಾರೆ? ಇದು ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲಾ ವಯಸ್ಸಿನವರ ಮೇಲೆ ಪರಿಣಾಮ ಬೀರುವ ವೈರಸ್ ಎಂದು ವೈದ್ಯರು ಹೇಳ್ತಾರೆ. ಕೊರೊನಾವೈರಸ್ ಮಾದರಿಯ ಲಕ್ಷಣಗಳನ್ನೇ ಈ ವೈರಸ್ ಕೂಡಾ ಹೊಂದಿದ್ದು, ಪ್ರಮುಖವಾಗಿ ಮಕ್ಕಳಿಗೆ ಮತ್ತು ರೋಗ ನಿರೋಧಕ ಶಕ್ತಿ ಕಮ್ಮಿ ಇರುವವರಿಗೆ ವೇಗವಾಗಿ ಹರಡುತ್ತದೆ. ಕೋವಿಡ್ ವೈರಸ್ ರೀತಿಯಲ್ಲೇ ಇದು ಕೂಡ ಶ್ವಾಸಕೋಶಕ್ಕೆ ಸಂಬಂಧಿಸಿ ಸಮಸ್ಯೆ ಉಂಟುಮಾಡುತ್ತೆ. ವಿಶೇಷವಾಗಿ ಮಕ್ಕಳಿಗೆ ಅದರಲ್ಲೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ವೈರಸ್ ಬೇಗ ಹರಡುವ ಸಾಧ್ಯತೆ ಇದೆ. ವಯಸ್ಕರು ಮತ್ತು ರೋಗ ನಿರೋಧಕ ಶಕ್ತಿ ಕಮ್ಮಿ ಇರುವವರಿಗೆ ಇದು ವೇಗವಾಗಿ ಹರಡಬಹುದು.
ಈ ಹೊಸ ಕಾಯಿಲೆಯ ರೋಗ ಲಕ್ಷಣಗಳೇನು?
ಎಚ್ಎಂಪಿವಿ ವೈರಸ್‌ನ ರೋಗ ಲಕ್ಷಣಗಳು ಹೀಗಿವೆ- ಉಬ್ಬಸ, ಮೂಗು ಕಟ್ಟಿಕೊಳ್ಳುವುದು, ಕೆಮ್ಮು, ಜ್ವರ, ಉಸಿರಾಟದ ತೊಂದರೆ ಎದುರಾಗಬಹುದು ಮತ್ತು ಇದು ಗಂಭೀರವಾದರೆ ನ್ಯೂಮೋನಿಯಾಗೆ ತಿರುಗುವ ಸಾಧ್ಯತೆಯಿದೆ. ಅಸ್ತಮಾ ಮುಂತಾದ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುವವರಿಗೆ ಹೆಚ್ಚಿನ ಸಮಸ್ಯೆ ಆಗಬಹುದು. ರೋಗಕ್ಕೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ದೊರೆಯದೇ ಹೋದರೆ ಪ್ರಾಣಕ್ಕೂ ಎರವಾಗಬಹುದು. ಇದರ ತೀವ್ರತೆಯ ಆಧಾರದ ಮೇಲೆ ಇದು ಎಷ್ಟು ದಿನದ ವರೆಗೆ ಇರುತ್ತೆ ಎನ್ನುವುದು ನಿರ್ಧಾರವಾಗುತ್ತದೆ.
ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡೋದು ಹೇಗೆ?
ಗಾಳಿಯಲ್ಲಿ ಹಾರಾಡುವ ಕಣಗಳ ಮೂಲಕ ಇದು ಉಸಿರಾಟದಲ್ಲಿ ದೇಹದ ಒಳಗೆ ಸೇರಬಹುದು. ರೋಗಪೀಡಿತರ ಕೆಮ್ಮು, ಶೀತ, ಸೀನುಗಳು ಈ ವೈರಸ್ ಅಟ್ಯಾಕ್ ಮಾಡಲು ಮೂಲ ಕಾರಣವಾಗಿರುತ್ತವೆ. ಕೋವಿಡ್ ವೈರಸ್ ಹರಡಿದ ಹಾಗೇನೇ ಸೋಂಕಿತರು ಬಳಸಿದ ವಸ್ತುಗಳನ್ನು ಬಳಸುವುದು, ಕೈ ಕುಲುಕುವುದು ಅಥವಾ ಸೋಂಕಿತ ವ್ಯಕ್ತಿಯ ನಿಕಟ ಸಂಪರ್ಕ, ಕಲುಷಿತ ಮೇಲ್ಮೈಗಳನ್ನು ಸ್ಪರ್ಶಿಸುವುದು ಅಥವಾ ಮುಖದಲ್ಲಿ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಆಗಾಗ ಸ್ಪರ್ಶಿಸುವುದು ಇವೆಲ್ಲ ರೋಗ ಹರಡೋದಕ್ಕೆ ಕಾರಣವಾಗುತ್ತೆ.
ಭಾರತ ಚಿಂತಿಸಬೇಕೇ?
ಪ್ರಸ್ತುತ, ಎಚ್ಎಂಪಿವಿ ಪ್ರಕರಣಗಳು ಚೀನಾದಲ್ಲಿ ಮಾತ್ರ ವರದಿಯಾಗಿವೆ. ಭಾರತ ಅಥವಾ ಇತರ ದೇಶಗಳಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಗುರುಗ್ರಾಮದ ಸಿಕೆ ಬಿರ್ಲಾ ಆಸ್ಪತ್ರೆಯ ಕ್ರಿಟಿಕಲ್ ಕೇರ್ ಮತ್ತು ಶ್ವಾಸಕೋಶ ಶಾಸ್ತ್ರದ ಮುಖ್ಯಸ್ಥ ಡಾ. ಕುಲದೀಪ್ ಕುಮಾರ್ ಗ್ರೋವರ್ ಹೇಳುವ ಪ್ರಕಾರ, ಚೀನಾದಲ್ಲಿ ಎಚ್ಎಂಪಿವಿ ಪ್ರಕರಣಗಳು ವರದಿಯಾಗಿದ್ದರೂ, ಭಾರತದಲ್ಲಿ ಇಲ್ಲಿಯ ವರೆಗೆ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಆದರೆ ನಮ್ಮಲ್ಲಿ ಜನ ದಟ್ಟಣೆ ಇರುವುದರಿಂದ ಜನರು ನಿರ್ಲಕ್ಷ್ಯ ಮಾಡದೆಯೇ, ಪದೇ ಪದೇ ಕೈ ತೊಳೆಯುವುದು, ಜನ ಹೆಚ್ಚಾಗಿರುವ ಪ್ರದೇಶಗಳಲ್ಲಿ ಮಾಸ್ಕ್ಗಳ ಬಳಕೆ ಮತ್ತು ಯಾರ ಜೊತೆಗೆ ಆಗಲಿ ನಿಕಟ ಸಂಪರ್ಕವನ್ನು ತಪ್ಪಿಸುವುದು ಮುಂತಾದ ಕೆಲವು ಮುನ್ನೆಚ್ಚರಿಕೆ, ನೈರ್ಮಲ್ಯ ಅಭ್ಯಾಸಗಳು ಇಂತಹ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಹಾಗಾದ್ರೆ ಎಚ್‌ಎಂಪಿವಿ ಹರಡದ ಹಾಗೆ ಕಾಪಾಡಿಕೊಳ್ಳೋದು ಹೇಗೆ?
ಅದಕ್ಕೆ ಡಾಕ್ಟರ್ಸ್ ಈ ಟಿಪ್ಸ್ ಕೊಡ್ತಾರೆ- ಸ್ವಚ್ಛತೆ ಕಾಪಾಡಿಕೊಳ್ಳಿ. ಆಗಾಗ ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ಸ್ವಚ್ಛಗೊಳಿಸಿ. ಸಾರ್ವಜನಿಕ ಪ್ರದೇಶದಲ್ಲಿ ಅಥವಾ ಜನ ಜಾಸ್ತಿ ಇರುವಲ್ಲಿ ಮಾಸ್ಕ್ ಬಳಸಿ, ಸೀನುವಾಗ ಅಥವಾ ಕೆಮ್ಮುವಾಗ ಟಿಶ್ಯೂ ಬಳಸಿ. ಪಾತ್ರೆ, ಕಪ್ ಅಥವಾ ಇತರ ವಸ್ತುಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ. ಅನಾರೋಗ್ಯದಿಂದ ಬಳಲುತ್ತಿದ್ದರೆ ಮನೆಯಲ್ಲಿಯೇ ಇರಿ. ವೈರಸ್ ಇತರರಿಗೆ ಹರಡುವುದನ್ನು ತಪ್ಪಿಸಲು ಮನೆಯಲ್ಲಿಯೇ ವಿಶ್ರಾಂತಿ ಪಡೆಯಿರಿ. ಯಾವುದೇ ಆಹಾರ ಸೇವಿಸುವ ಮುನ್ನ ಸೋಪಿನಿಂದ ಚೆನ್ನಾಗಿ ಕೈ ತೊಳೆಯಿರಿ. ಸ್ಯಾನಿಟೈಸರ್ ಬಳಸಿ. ಎಲ್ಲವೂ ಕೋವಿಡ್ ಪ್ರೋಟೋಕಾಲ್ ಥರವೇ, ವ್ಯತ್ಯಾಸವೇನಿಲ್ಲ. ಒಂದು ವೇಳೆ ರಗಲಕ್ಷಣಗಳು ಕಂಡುಬಂದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ.
ಇನ್ನೀಗ ಅತಿ ಮುಖ್ಯವಾದ ಪ್ರಶ್ನೆ, ಈ ಸೋಂಕಿನಿಂದ ಭಾರತಕ್ಕೆ ಏನಾದರೂ ಅಪಾಯ ಇದೆಯಾ? ಅಂಥಾ ಯಾವುದೇ ಆತಂಕ ಇಲ್ಲ. ಭಾರತದಲ್ಲಿ ಇದು ಇನ್ನೂ ಕಂಡುಬಂದಿಲ್ಲ ಅಂತ ಕೇಂದ್ರದ ಆರೋಗ್ಯ ಇಲಾಖೆ ವಕ್ತಾರರು ಹೇಳಿದ್ದಾರೆ. ಒಂದು ವೇಳೆ ಈ ವೈರಸ್ ಇಲ್ಲಿಗೆ ಬಂದರೂ ನಾವೆಲ್ಲಾ ಕೋವಿಡ್ ಲಸಿಕೆ ಹಾಕಿಸಿಕೊಂಡಿರೋದರಿಂದ ನಮಗೇನೂ ಅಪಾಯವಿಲ್ಲ ಎಂದು ಹೇಳಲಾಗ್ತಿದೆ. ಆದರೆ ಕೊರೊನಾ ಆರಂಭಕಾಲದಲ್ಲಿಯೂ ಹೀಗೇ ಹೇಳಲಾಗ್ತಿತ್ತು. ಆದರೆ ನಂತರ ಅದು ಉಂಟುಮಾಡಿದ ಹಾವಳಿ ನಮಗೆಲ್ಲಾ ಗೊತ್ತೇ ಇದೆ. ಕೊರೊನಾ ಹಲವು ದೇಶಗಳಲ್ಲಿ ಹಬ್ಬಿ ಲಾಕ್‌ಡೌನ್ ಆಗಿತ್ತು. ಜನಜೀವನ ಸ್ತಬ್ಧವಾಗಿತ್ತು, ಆರ್ಥಿಕತೆಗೂ ಬಲವಾದ ಪೆಟ್ಟು ಬಿದ್ದಿತ್ತು. ವಿಶ್ವದ 70 ಕೋಟಿಗೂ ಹೆಚ್ಚು ಜನರಿಗೆ ಸೋಂಕು ಹಬ್ಬಿ, 70 ಲಕ್ಷಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು. 3 ವರ್ಷಗಳ ಕಾಲ ಸೋಂಕು ಇಡೀ ಜಗತ್ತನ್ನು ಕಾಡಿತ್ತು. ಮತ್ತೆ ಅಂಥ ದುಃಸ್ವಪ್ನ ಕಾಡದೇ ಇರಲಿ ಎನ್ನೋದು ಎಲ್ಲರ ಹಾರೈಕೆ.
ಈ ಸುದ್ದಿಯನ್ನೂ ಓದಿ: HMPV ವೈರಾಣು ಸೋಂಕು; ಭಾರತದಲ್ಲಿ ಆತಂಕ ಬೇಡ; ಆರೋಗ್ಯ ಸಂಸ್ಥೆ