Thursday, 26th December 2024

Hoax Bomb: ಹುಸಿ ಬಾಂಬ್‌ ಬೆದರಿಕೆ ಹಾಕಿದ ಇಂಟಲಿಜೆನ್ಸ್ ಬ್ಯೂರೋ ಅಧಿಕಾರಿಯ ಬಂಧನ

ರಾಯಪುರ: ಇತ್ತೀಚೆಗೆ ನಾಗ್ಪುರದಿಂದ(Nagpur) ಕೋಲ್ಕತಾ (Kolkata)ಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಬಾಂಬ್‌ ಇಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದ ವ್ಯಕ್ತಿಯನ್ನು ಗುಪ್ತಚರ ಇಲಾಖೆಯ ಅಧಿಕಾರಿ (Intelligence Bureau) ಎಂದು ಗುರುತಿಸಲಾಗಿದೆ (Hoax Bomb).

ಹುಸಿ ಬಾಂಬ್‌ ಬೆದರಿಕೆಯ ಮಾಹಿತಿ ನೀಡಿದ್ದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು. ಈ ವೇಳೆ ಆತ ಗುಪ್ತಚರ ಇಲಾಖೆಯ (ಐಬಿ) ಅಧಿಕಾರಿ ಎಂದು ತಿಳಿದು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಧಿತ ವ್ಯಕ್ತಿಯು ಅನಿಮೇಶ್ ಮಂಡಲ್ ಆಗಿದ್ದು, ಅವರು ನಾಗ್ಪುರದಲ್ಲಿ ನಿಯೋಜನೆಗೊಂಡ ಉಪ ಅಧೀಕ್ಷಕ ಶ್ರೇಣಿಯ ಅಧಿಕಾರಿಯಾಗಿದ್ದರು. ಇತ್ತೀಚೆಗೆ ನಾಗ್ಪುರದಿಂದ ಕೋಲ್ಕತಾಕ್ಕೆ ಪ್ರಯಾಣ ಬೆಳೆಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಹೀಗಾಗಿ 187 ಪ್ರಯಾಣಿಕರಿದ್ದ ವಿಮಾನವನ್ನು ರಾಯಪುರಕ್ಕೆ ಮಾರ್ಗ ಬದಲಾವಣೆ ಮಾಡಲಾಯಿತು. ಬಳಿಕ ಇದೊಂದು ಹುಸಿ ಬಾಂಬ್‌ ಬೆದರಿಕೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಮಂಡಲ್ ಪರ ವಕೀಲ ಫೈಜಲ್ ರಿಜ್ವಿ ಅವರು ತಮ್ಮ ಕಕ್ಷಿದಾರರ ನಿರಪರಾಧಿ ಎಂದು ಹೇಳಿದ್ದಾರೆ. ಮಂಡಲ್ ವಿಮಾನವನ್ನು ಹತ್ತಿದ ನಂತರ ಬಾಂಬ್ ಬಗ್ಗೆ ಮಾಹಿತಿ ಸಿಕ್ಕಿದ್ದು, ಮುಂಜಾಗ್ರತೆಗಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಹುಸಿ ಬಾಂಬ್ ಬೆದರಿಕೆಯಿಂದ ಅವರಿಗೆ ಯಾವುದೇ ರೀತಿಯ ಲಾಭವಿಲ್ಲ ಎಂದಿದ್ದಾರೆ. “ಆತ IB ಅಧಿಕಾರಿ ಎಂಬುದನ್ನು ಪೊಲೀಸರು ತಕ್ಷಣ ಏಕೆ ಬಹಿರಂಗಪಡಿಸಲಿಲ್ಲ?” ಎಂದು ವಕೀಲರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಶ್ನಿಸಿದರು.

ದೆಹಲಿಯ ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ

ಇತ್ತ ಸೋಮವಾರ (ಡಿ. 9) ರಾಷ್ಟ್ರ ರಾಜಧಾನಿ ದಿಲ್ಲಿಯ 40ಕ್ಕೂ ಹೆಚ್ಚು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದವು. ದೆಹಲಿಯ ಆರ್‌ಕೆ ಪುರಂನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್, ಪಶ್ಚಿಮ ವಿಹಾರ್‌ನಲ್ಲಿರುವ ಜಿಡಿ ಗೋಯೆಂಕಾ ಪಬ್ಲಿಕ್ ಸ್ಕೂಲ್ ಸೇರಿದಂತೆ 40ಕ್ಕೂ ಬಾಂಬ್ ಬೆದರಿಕೆ ಕರೆ ಬಂದಿತ್ತು. ತಪಾಸಣೆ ನಡೆಸಿದ ದೆಹಲಿ ಪೊಲೀಸರು, ಅನುಮಾನಾಸ್ಪದವಾಗಿ ಏನು ಪತ್ತೆಯಾಗದ ಕಾರಣ ಹುಸಿ ಬೆದರಿಕೆ ಕರೆ ಎಂದು ಘೋಷಿಸಿದ್ದರು.

ದೆಹಲಿ ಪೊಲೀಸರ ಮಾಹಿತಿಗಳ ಪ್ರಕಾರ, ಭಾನುವಾರ (ಡಿ. 8) ರಾತ್ರಿ 11:30ರ ಸುಮಾರಿಗೆ ಮೇಲ್ ಕಳುಹಿಸಲಾಗಿತ್ತು. ಇಮೇಲ್‌ಗಳಲ್ಲಿ ಶಾಲಾ ಕ್ಯಾಂಪಸ್‌ನಲ್ಲಿ ಬಾಂಬ್‌ಗಳನ್ನು ಇಡಲಾಗಿದೆ. ಇದರ ಸ್ಫೋಟದಿಂದ ಕಟ್ಟಡಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಆದರೆ ವಿದ್ಯಾರ್ಥಿಗಳು, ಸಿಬ್ಬಂದಿಗೆ ಹಾನಿಯಾಬಹುದು. ಇದನ್ನು ತಡೆಯಲು 30,000 ಡಾಲರ್ ಮೊತ್ತವನ್ನು ನೀಡಬೇಕು ಎಂದು ಉಲ್ಲೇಖಿಸಿದ್ದರು.

ಈ ಬಗ್ಗೆ ಮಾತನಾಡಿದ್ದ ಆಪ್ ನಾಯಕ ಮನೀಶ್ ಸಿಸೋಡಿಯಾ (Manish Sisodia), 40 ಶಾಲೆಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದು, ನಮ್ಮ ಮಕ್ಕಳು ಸುರಕ್ಷಿತವಾಗಿಲ್ಲ ಎಂಬ ಕಾರಣಕ್ಕೆ ಆಘಾತವಾಗಿದೆ. ದೆಹಲಿಯಲ್ಲಿ ಬಿಜೆಪಿ ಭಯದ ವಾತಾವರಣವನ್ನು ನಿರ್ಮಾಣ ಮಾಡಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ರಾಷ್ಟ್ರ ರಾಜಧಾನಿ ಸುರಕ್ಷಿತವಾಗಿಲ್ಲ, ಇಂತಹ ಭಯದ ವಾತಾವರಣ ನಾನು ನೋಡಿರಲಿಲ್ಲ. ಬಿಜೆಪಿ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದರು.

ಈ ಸುದ್ದಿಯನ್ನೂ ಓದಿ:ಹುಸಿ ಬಾಂಬ್ ಬೆದರಿಕೆ: ವಿಮಾನ ತುರ್ತು ಭೂಸ್ಪರ್ಶ