Saturday, 23rd November 2024

Hombale Films : ಹೊಂಬಾಳೆ ಫಿಲಂಸ್ ನಿರ್ಮಾಣದ “ಕಾಂತಾರ” ಚಿತ್ರಕ್ಕೆ ಎರಡು ರಾಷ್ಟ್ರ ಪ್ರಶಸ್ತಿ

ಬೆಂಗಳೂರು: ಇಡೀ ವಿಶ್ವವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ಚಿತ್ರ ಹೊಂಬಾಳೆ ಫಿಲಂಸ್ (Hombale Films) ನಿರ್ಮಾಣದ “ಕಾಂತಾರ”. ರಿಷಭ್ ಶೆಟ್ಟಿ ಈ ಚಿತ್ರದ ನಾಯಕನಾಗಿ ನಟಿಸುವುದಷ್ಟೇ ಅಲ್ಲದೆ, ನಿರ್ದೇಶನವನ್ನು ಮಾಡಿದ್ದರು. 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ “ಕಾಂತಾರ (Kantara Movie)” ಚಿತ್ರಕ್ಕೆ ಎರಡು ರಾಷ್ಟ್ರೀಯ ಪ್ರಶಸ್ತಿಗಳು ಬಂದಿದೆ.

“ಕಾಂತಾರ” ಚಿತ್ರಕ್ಕೆ ಅತ್ಯುತ್ತಮ ಮನೋರಂಜನಾ ಚಿತ್ರ ಹಾಗೂ ಈ ಚಿತ್ರದ ನಟನೆಗಾಗಿ ರಿಷಭ್ ಶೆಟ್ಟಿ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ನಟ, ನಿರ್ದೇಶಕ ರಿಷಭ್ ಶೆಟ್ಟಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಇಂತಹ ಅತ್ಯುತ್ತಮ ಚಿತ್ರವನ್ನು ನಮ್ಮ ಹೊಂಬಾಳೆ ಫಿಲಂಸ್ ಗೆ ನೀಡಿದ ನಿರ್ದೇಶಕ, ನಟ ರಿಷಭ್ ಶೆಟ್ಟಿ ಅವರಿಗೆ ನಿರ್ಮಾಪಕ ವಿಜಯ್ ಕಿರಗಂದೂರು ಧನ್ಯವಾದ ತಿಳಿಸಿದ್ದಾರೆ.

ಈ ದೊಡ್ಡ ಗೌರವವನ್ನು ಸ್ವೀಕರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಿಷಬ್, ಸಮಾಜದಲ್ಲಿ ಬದಲಾವಣೆ ತರುವ ಚಲನಚಿತ್ರಗಳನ್ನು ಮಾಡುವುದು ನನ್ನ ಉದ್ದೇಶ ಎಂದು ಹೇಳಿದರು.

‘ಪ್ರತಿಯೊಂದು ಚಿತ್ರವೂ ಪ್ರಭಾವಶಾಲಿಯಾಗಿರುತ್ತದೆ. ಸಮಾಜದಲ್ಲಿ ಬದಲಾವಣೆ ಅಥವಾ ಪರಿಣಾಮವನ್ನು ತರುವ ಚಲನಚಿತ್ರಗಳನ್ನು ಮಾಡುವುದು ನಮ್ಮ ಉದ್ದೇಶ. ಅದಕ್ಕಾಗಿ ನಾನು ಪ್ರೇಕ್ಷಕರಿಗೆ ಧನ್ಯವಾದ ಹೇಳುತ್ತೇನೆ. ರಾಷ್ಟ್ರೀಯ ಪ್ರಶಸ್ತಿಗಳು ಕಲಾವಿದನಿಗೆ ಬಹಳ ಪ್ರತಿಷ್ಠಿತ ಬಹುಮಾನ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನು ಆಗಸ್ಟ್ 2024 ರಲ್ಲಿ ಘೋಷಿಸಲಾಗಿತ್ತು. ಈ ವೇಳೆ ಮಾತನಾಡಿದ್ದ ಅವರು “ಇದು ನನ್ನ ಇಡೀ ತಂಡದಿಂದಾಗಿ ಸಾಧ್ಯವಾಗಿದೆ. ನಾನು ಚಿತ್ರದ ಮುಖ ಮಾತ್ರ, ಇದೆಲ್ಲವೂ ಅವರ ಕಠಿಣ ಪರಿಶ್ರಮದಿಂದಾಗಿ. ಪ್ರೊಡಕ್ಷನ್ ಹೌಸ್, ಡಿಒಪಿ, ತಂತ್ರಜ್ಞರು, ಇದಕ್ಕೆಲ್ಲ ಅವರಿಂದಲೇ ಕಾರಣ. ಅವರು ತಮ್ಮ ಅಭಿಮಾನಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದರು.

ರಿಷಬ್ ಈ ಚಿತ್ರದಲ್ಲಿ ನಟಿಸಿದ್ದಲ್ಲದೆ, ನಿರ್ದೇಶಿಸಿದ್ದರು. ಅವರು ಈಗ ಕಾಂತಾರಾ ಪ್ರಿಕ್ವೆಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕರ್ನಾಟಕದ ಕರಾವಳಿಯ ಕಾಲ್ಪನಿಕ ಹಳ್ಳಿಯನ್ನು ಆಧರಿಸಿದ ‘ಕಾಂತಾರಾ’ ಚಿತ್ರದಲ್ಲಿ ಶೆಟ್ಟಿ ಅವಿಸ್ಮರಣೀಯ ನಟನೆ ಮಾಡಿದ್ದರು.

ತಮಿಳು ಚಿತ್ರ ತಿರುಚಾಂಬಲಂಗಾಗಿ ನಿತ್ಯಾ ಮೆನನ್ ಮತ್ತು ಗುಜರಾತಿ ಚಿತ್ರ ಕಚ್ ಎಕ್ಸ್ ಪ್ರೆಸ್ ಗಾಗಿ ಮಾನಸಿ ಪರೇಖ್ ಅತ್ಯುತ್ತಮ ನಟಿ ಪ್ರಶಸ್ತಿ ಹಂಚಿಕೊಂಡಿದ್ದಾರೆ. ಸೂರಜ್ ಆರ್ ಬರ್ಜಾತ್ಯ ಅವರು ಉಂಚೈ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದಿದ್ದಾರೆ.

ಇದನ್ನೂ ಓದಿ: Mithun Chakraborty : ಮಿಥುನ್ ಚಕ್ರವರ್ತಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ

2023 ರಲ್ಲಿ, ನಟರಾದ ಅಲ್ಲು ಅರ್ಜುನ್, ಆಲಿಯಾ ಭಟ್ ಮತ್ತು ಕೃತಿ ಸನೋನ್ ಕ್ರಮವಾಗಿ ‘ಪುಷ್ಪಾ’, ‘ಗಂಗೂಬಾಯಿ ಕಾಥಿಯಾವಾಡಿ’ ಮತ್ತು ‘ಮಿಮಿ’ ಚಿತ್ರಗಳಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದರು.