Friday, 27th December 2024

Manmohan Singh: ಅಚ್ಚರಿಯ ರೀತಿಯಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿ ಆಯ್ಕೆಯಾಗಿದ್ದು ಹೇಗೆ?

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಅವರು ಇಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ನೆಹರೂ- ಗಾಂಧಿ ಕುಟುಂಬದವರ (Nehru Family) ಹೊರತಾಗಿ ಪೂರ್ಣಾವಧಿ ಅಧಿಕಾರದಲ್ಲಿದ್ದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಹೆಚ್ಚು ಮಾತನಾಡದ, ಮಾಡಿದ್ದನ್ನು ಹೇಳಿಕೊಳ್ಳದ ಮನಮೋಹನ್‌ ಸಿಂಗ್‌ರದ್ದು ರಾಜಕಾರಣಕ್ಕೆ ಒಗ್ಗದ ವ್ಯಕ್ತಿತ್ವ. ಪ್ರಧಾನಿ ಪಿ.ವಿ ನರಸಿಂಹರಾವ್‌ ಒತ್ತಡಕ್ಕೆ ಮಣಿದು ರಾಜಕಾರಣಕ್ಕೆ ಪ್ರವೇಶಿಸಿದ್ದ ಸಿಂಗ್‌, ಅವರ ಸಂಪುಟದಲ್ಲಿ ಹಣಕಾಸು ಸಚಿವರಾದರು. ಅವರು ಪ್ರಧಾನಿಯಾದದ್ದು ಒಂದು ಆಕಸ್ಮಿಕ.

2004ರಲ್ಲಿ ಕಾಂಗ್ರೆಸ್‌ 145 ಸ್ಥಾನಗಳನ್ನು ಬಿಜೆಪಿ 138 ಸ್ಥಾನಗಳನ್ನು ಪಡೆದಿತ್ತು.ಅದನ್ನು ಬಿಜೆಪಿಯ ಸೋಲು ಎಂದು ಪರಿಗಣಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸರಕಾರ ರಚಿಸಲು ಕಾಂಗ್ರೆಸ್‌ ಪ್ರಾದೇಶಿಕ ಪಕ್ಷಗಳನ್ನು ಅವಲಂಬಿಸಿತ್ತು. ಯುಪಿಎ ಸಂಖ್ಯಾಬಲಕ್ಕೆ ಬಂದ ಬಳಿಕ ಸೋನಿಯಾ ಗಾಂಧಿ ಅವರಿಗೆ ಸ್ವತಃ ಪ್ರಧಾನಿಯಾಗುವ ಅವಕಾಶವಿತ್ತು. ಆದರೆ ಸೋನಿಯಾ ಗಾಂಧಿ ಅವರು ಅವರು ಹಾಗೆ ಮಾಡಲಿಲ್ಲ. ಇದರಿಂದ ಪ್ರಣಬ್‌ ಮುಖರ್ಜಿ ಅವರ ಹೆಸರು ಮತ್ತೆ ಮುನ್ನೆಲೆಗೆ ಬಂದಿತ್ತು. ಆದರೆ ಸೋನಿಯಾ ಅವರು ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್‌ ಸಿಂಗ್‌ ಅವರನ್ನು ಪ್ರಧಾನಿ ಹುದ್ದೆಗೆ ಅಚ್ಚರಿ ಎಂಬಂತೆ ಆಯ್ಕೆ ಮಾಡಿದ್ದರು.

ಪಿ.ವಿ.ನರಸಿಂಹರಾವ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಮನಮೋಹನ್‌ ಸಿಂಗ್‌ ಅವರು ಹಣಕಾಸು ಸಚಿವರಾಗಿದ್ದರು. ಕೇಂದ್ರ ಹಣಕಾಸು ಸಚಿವರಾದ ನಾಲ್ಕು ತಿಂಗಳ ನಂತರ ಅಕ್ಟೋಬರ್ 1991ರಲ್ಲಿ ಮೇಲ್ಮನೆ ಪ್ರವೇಶಿಸಿದರು. 2004ರಿಂದ 2014ರ ವರೆಗೆ ಪ್ರಧಾನಿಯಾಗಿದ್ದರು. ಮೇಲ್ಮನೆಯಲ್ಲಿ ಐದು ಅವಧಿಗೆ ಅಸ್ಸಾಂ ಅನ್ನು ಪ್ರತಿನಿಧಿಸಿದರು ಮತ್ತು 2019ರಲ್ಲಿ ರಾಜಸ್ಥಾನಕ್ಕೆ ಸ್ಥಳಾಂತರಗೊಂಡರು.

ಇದನ್ನೂ ಓದಿ Dr Manmohan Singh: ಮನಮೋಹನ್ ಸಿಂಗ್; ಭಾರತದ ಆರ್ಥಿಕ ಸುಧಾರಣೆಯ ಹರಿಕಾರ

ಸಿಂಗ್ ಅವರು ಇಂದಿರಾ ಗಾಂಧಿ (ಅವರ ಮೊದಲ ಅವಧಿಯಲ್ಲಿ) ಮತ್ತು ಇಂದರ್ ಕುಮಾರ್ ಗುಜ್ರಾಲ್ ನಂತರ ರಾಜ್ಯಸಭೆಯಿಂದ ಬಂದ ಮೂರನೇ ಪ್ರಧಾನಿಯಾಗಿದ್ದರು. ಭಾರತದ ಆರ್ಥಿಕ ಉದಾರೀಕರಣದ (economic liberalisation) ವಾಸ್ತುಶಿಲ್ಪಿ ಮತ್ತು 2008ರ ಇಂಡೋ-ಯುಎಸ್ ಪರಮಾಣು ಒಪ್ಪಂದದ (Indo-US nuclear agreement) ಹಿಂದಿನ ಶಕ್ತಿ ಎಂದೇ ಅವರನ್ನು ಗುರುತಿಸಲಾಗುತ್ತದೆ. ನೇರ ಲಾಭ ವರ್ಗಾವಣೆ ಸೇರಿದಂತೆ ಹಲವಾರು ಸುಧಾರಣೆಗಳನ್ನು ತಂದಿದ್ದರು. ಪ್ರಣಬ್ ಮುಖರ್ಜಿ ಅವರು ಕೇಂದ್ರದಲ್ಲಿ ಹಣಕಾಸು ಮಂತ್ರಿಯಾಗಿದ್ದಾಗ ಸಿಂಗ್ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಆಗಿದ್ದರು. ಭಾರತ ಇಂದು ವಿಶ್ವದ 5ನೇ ದೊಡ್ಡ ಆರ್ಥಿಕತೆ ಹೊಂದಿದ ಆಗಿದೆ ಎನ್ನುವುದಾದರೆ, ಅದಕ್ಕೆ ಸಿಂಗ್‌ ಹಾಕಿದ ಅಡಿಪಾಯವನ್ನು ಯಾರೂ ಮರೆಯುವಂತಿಲ್ಲ.

ಕೇಂಬ್ರಿಡ್ಜ್‌ ಮತ್ತು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಸಿಂಗ್‌, ದೇಶ ಕಂಡ ಅತ್ಯುತ್ತಮ ಅರ್ಥ ಶಾಸ್ತ್ರಜ್ಞರಾಗಿದ್ದರು. ಪಿ.ವಿ.ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ 1991ರ ಜೂನ್‌ನಲ್ಲಿ ಹಣಕಾಸು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅವರು ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.