Friday, 27th December 2024

IND vs AUS : ಮನಮೋಹನ್‌ ಸಿಂಗ್‌ ನಿಧನ; ಕಪ್ಪು ಪಟ್ಟಿ ಧರಿಸಿ ಗೌರವ ಸಲ್ಲಿಸಿದ ಟೀಮ್‌ ಇಂಡಿಯಾ!

IND vs AUS

ಮೆಲ್ಬರ್ನ್‌ : ಭಾರತ ಹಾಗೂ ಆಸ್ಟ್ರೇಲಿಯಾ (IND vs AUS) ನಡುವಿನ ಮೆಲ್ಬರ್ನ್‌ ಟೆಸ್ಟ್ ಪಂದ್ಯದ ಬಾಕ್ಸಿಂಗ್ ಡೇ ಟೆಸ್ಟ್‌ನ ಎರಡನೇ ದಿನದಾಟ ಆರಂಭವಾಗಿದೆ. ಗುರುವಾರ ಭಾರತದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ (Manmohan Singh) ಅವರು ನಿಧನರಾಗಿದ್ದು, ಸಿಂಗ್ ಅವರ ಗೌರವಾರ್ಥವಾಗಿ ಶುಕ್ರವಾರ ಭಾರತೀಯ ಆಟಗಾರರು (Team India) ಕಪ್ಪು ಪಟ್ಟಿಯನ್ನು ಧರಿಸಿ ಅಖಾಡಕ್ಕಿಳಿದು ಗೌರವ ಸೂಚಿಸಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 92 ವರ್ಷದ ಮನಮೋಹನ್ ಸಿಂಗ್ ಅವರನ್ನು ಗುರುವಾರ ರಾತ್ರಿ ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು, ನಂತರ ಚಿಕಿತ್ಸೆ ಫಲಕಾರಿಯಾಗಿದೆ ಕೊನೆಯುಸಿರೆಳೆದಿದ್ದಾರೆ.  ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿರುವ ಟೀಂ ಇಂಡಿಯಾ ಎರಡನೇ ದಿನದಾಟದಲ್ಲಿ ಮನಮೋಹನ್ ಸಿಂಗ್ ಅವರಿಗೆ ಗೌರವ ಸಲ್ಲಿಸಿ ಕೈಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದಿದೆ.

ಸಂತಾಪ ಸೂಚಿಸಿದ ಕ್ರೀಡಾ ಜಗತ್ತು

ಮನಮೋಹನ್‌ ಸಿಂಗ್‌ ಅವರ ನಿಧನಕ್ಕೆ ಕ್ರೀಡಾ ದಿಗ್ಗಜರು ಸಂತಾಪ ಸೂಚಿಸಿದ್ದಾರೆ . ಈ ಬಗ್ಗೆ ಟ್ವೀಟ್‌ ಮಾಡಿದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್‌ ನಮ್ಮ ಮಾಜಿ ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಮತ್ತೊಬ್ಬ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ ಸಂತಾಪ ಸೂಚಿಸಿದ್ದು, ‘ಡಾ. ಮನಮೋಹನ್ ಸಿಂಗ್ ಅವರ ನಿಧನವು ದುಃಖದ ಸುದ್ದಿ. ಭಾರತದ ಪ್ರಗತಿಗಾಗಿ ಅವಿರತವಾಗಿ ಶ್ರಮಿಸಿದ ದೂರದೃಷ್ಟಿಯ ನಾಯಕ ಮತ್ತು ನಿಜವಾದ ರಾಜಕಾರಣಿ. ಅವರ ಬುದ್ಧಿವಂತಿಕೆ ಮತ್ತು ನಮ್ರತೆ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆʼ ಎಂದು ಶ್ಲಾಘಿಸಿದ್ದಾರೆ.

ಇನ್ನುಳಿದಂತೆ ವಿನೇಶ್ ಫೋಗಟ್, ದೊಡ್ಡ ಗಣೇಶ್, ಗುಟ್ಟಾ ಜ್ವಾಲಾ ಸೇರಿದಂತೆ ಹಲವು ಕ್ರೀಡಾಪಟುಗಳು ಮನಮೋಹನ್‌ ಸಿಂಗ್‌ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಈ ಸುದ್ದಿಯನ್ನೂ ಓದಿ : Manmohan Singh: ಮನಮೋಹನ್ ಸಿಂಗ್‌ ಕುರಿತ ಕುತೂಹಲಕರ ಸಂಗತಿಗಳಿವು!