Monday, 13th January 2025

India-China: LAC ಬಳಿ ಚೀನಾ ಸಮರಾಭ್ಯಾಸ ; ಭಾರತೀಯ ಸೇನೆ ಫುಲ್‌ ಅಲರ್ಟ್‌

India - China

ನವದೆಹಲಿ: ಚೀನಾ ಹಾಗೂ ಭಾರತದ (India-China) ನಡುವೆ ದ್ವಿಪಕ್ಷೀಯ ಸಭೆಗಳು ನಡೆದು ಪೂರ್ವ ಲಡಾಖ್‌ಗೆ ಸಂಬಂಧಿಸಿದಂತೆ ಒಪ್ಪಂದ ಏರ್ಪಟ್ಟಿದ್ದರೂ, ಚೀನಾ ತನ್ನ ಹಳೆಯ ಚಾಳಿಯನ್ನು ಬಿಡುವಂತೆ ಕಾಣಿಸುತ್ತಿಲ್ಲ. ಇದೀಗ ಮತ್ತೆ ಚೀನಾ ಸೇನೆ ಪೂರ್ವ ಲಡಾಖ್‌ನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ಬಳಿ ಯುದ್ಧಾಭ್ಯಾಸವನ್ನು ನಡೆಸಿದೆ. ಚೀನಾ ತನ್ನ ಸೇನಾ ಅಭ್ಯಾಸದಲ್ಲಿ ಸುಧಾರಿತ ತಂತ್ರಜ್ಞಾನವನ್ನು ಬಳಸುತ್ತಿದೆ ಎಂದು ತಿಳಿದು ಬಂದಿದೆ.

ಮೂಲಗಳ ಪ್ರಕಾರ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಕ್ಸಿನ್‌ಜಿಯಾಂಗ್ ಮಿಲಿಟರಿ ಕಮಾಂಡ್‌ನ ರೆಜಿಮೆಂಟ್ ನೇತೃತ್ವದ ಈ ಪ್ರಯೋಗ ಎಲ್ಲ ಭೂಪ್ರದೇಶದ ವಾಹನಗಳು, ಮಾನವರಹಿತ ವ್ಯವಸ್ಥೆಗಳು, ಡ್ರೋನ್‌ಗಳು ಮತ್ತು ಸೈನಿಕರ ಚಲನಶೀಲತೆ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಎಕ್ಸೋಸ್ಕೆಲಿಟನ್‌ಗಳನ್ನು ಹೊಂದಿದಂತೆ ಸುಧಾರಿತ ಮಿಲಿಟರಿ ತಂತ್ರಜ್ಞಾನವನ್ನು ಒಳಗೊಂಡಿದೆ.

ಚೀನಾ ಎಲ್‌ಎಸಿ ಬಳಿ ಕೇವಲ ತಂತ್ರಜ್ಞಾನ ಒಳಗೊಂಡ ಸಮರಾಭ್ಯಾಸವನ್ನು ನಡೆಸುತ್ತಿಲ್ಲ. ಬದಲಾಗಿ ಸೈನಿಕರ ಕಾರ್ಯ ಕ್ಷಮತೆ ಹೆಚ್ಚಿಸಲು ಹಾಗೂ ಯುದ್ಧತಂತ್ರವನ್ನು ರೂಪಿಸಲು ತರಬೇತಿ ನೀಡುತ್ತಿದೆ.

ಭಾರತವೂ ಸಜ್ಜು

ಚೀನಾದ ಸಮರಾಭ್ಯಾಸದ ವಿಷಯ ತಿಳಿಯುತ್ತಲೇ ಎಲ್‌ಎಸಿ ಬಳಿ  ಭಾರತೀಯ ಭದ್ರತಾ ಪಡೆಗಳು ಜಾಗರೂಕರಾಗಿವೆ. ಭಾರತೀಯ ಸೇನೆ ವಾರ್ಷಿಕ ಹಿಮ್ ವಿಜಯ್ ಡ್ರಿಲ್‌ಗಳನ್ನು ಒಳಗೊಂಡಂತೆ ಕಠಿಣ ಸಮರಾಭ್ಯಾಸಗಳನ್ನು ನಡೆಸಿದೆ. ಚೀನಾದ ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲು ಸುಧಾರಿತ ಸಿಸಿಟಿವಿ, ಡ್ರೋನ್‌  ಮತ್ತು ಉಪಗ್ರಹಗಳನ್ನು ನಿಯೋಜಿಸಲಾಗಿದೆ. K9 ವಜ್ರ ಹೊವಿಟ್ಜರ್‌ಗಳು ಮತ್ತು S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಸೇರ್ಪಡೆಯು ಭಾರತೀಯ ಸೇನೆಗೆ ಮತ್ತಷ್ಟು ಬಲವನ್ನು ಹೆಚ್ಚಿಸಿದೆ.

ಇನ್ನೂ ಬಿಕ್ಕಟ್ಟು ಇದೆ

ಈತನ್ಮಧ್ಯೆ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಸೋಮವಾರ LACಯಲ್ಲಿನ ಪರಿಸ್ಥಿತಿಯು ಸೂಕ್ಷ್ಮವಾಗಿದೆ ಆದರೆ ಸ್ಥಿರವಾಗಿದೆ ಎಂದು ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜನರಲ್ ದ್ವಿವೇದಿ, ಈ ಪ್ರದೇಶದಲ್ಲಿ ಇನ್ನೂ ಸ್ವಲ್ಪ ಮಟ್ಟದ ಬಿಕ್ಕಟ್ಟು ಇದೆ ಮತ್ತು ಭಾರತ ಮತ್ತು ಚೀನಾದ ಮಿಲಿಟರಿಗಳ ನಡುವೆ ವಿಶ್ವಾಸವನ್ನು ಪುನಃಸ್ಥಾಪಿಸಲು ಪ್ರಯತ್ನಗಳ ಅಗತ್ಯವಿದೆ ಎಂದು ತಿಳಿಸಿದ್ದಾರೆ.

2020ರ ಗಲ್ವಾನ್‌ ಕಣಿವೆಯ ಬಿಕ್ಕಟ್ಟಿನ ನಂತರ ಚೀನಾ ಹಾಗೂ ಭಾರತದ ನಡುವಿನ ರಾಜತಾಂತ್ರಿಕತೆ ಕೂಡ ಹಳಸಿ ಹೋಗಿತ್ತು. ಆದರೆ ಇತ್ತೀಚೆಗೆ ಉಭಯ ದೇಶಗಳು ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಗಸ್ತು ತಿರುಗಲು ಒಪ್ಪಂದ ಮಾಡಿಕೊಂಡಿದ್ದವು. ಆದರೆ ಕೆಲ ದಿನಗಳ ನಂತರ ಚೀನಾ ಮತ್ತದೇ ಹಳೇ ಕ್ಯಾತೆಯನ್ನು ತೆಗೆದಿತ್ತು. ಇದೀಗ ಮತ್ತೆ ಎಲ್‌ಎಸಿ ಬಳಿ ಸಮರಾಭ್ಯಾಸ ಶುರು ಮಾಡಿದೆ. ಇದಕ್ಕೆ ಭಾರತದ ಪ್ರತಿಕ್ರಿಯೆ ಏನು ಎಂಬುದು ಕಾದು ನೋಡಬೇಕು.

ಈ ಸುದ್ದಿಯನ್ನೂ ಓದಿ : China Dam: ಬ್ರಹ್ಮಪುತ್ರ ನದಿಗೆ ವಿಶ್ವದ ಅತಿ ದೊಡ್ಡ ಡ್ಯಾಂ ನಿರ್ಮಿಸಲು ಮುಂದಾದ ಚೀನಾ; ಭಾರತದ ರಿಯಾಕ್ಷನ್‌ ಏನು?

Leave a Reply

Your email address will not be published. Required fields are marked *