ಮುಂಬೈ: ಬ್ರಿಟಿಷ್ ಸರ್ಕಾರದಿಂದ ಇಂಡಿಯನ್ ಫಸ್ಟ್ ಲೇಡಿ ಟೀಚರ್ ಎಂದು ಪುರಸ್ಕಾರ ಪಡೆದುಕೊಂಡಿರುವ ಸಾವಿತ್ರಿಬಾಯಿ ಫುಲೆ (Savitribai Phule) ಅವರ ಹುಟ್ಟಿದ ದಿನ ಇಂದು (ಜ. 3). ಪುರುಷ ಪ್ರಧಾನ ಸಮಾಜದಲ್ಲಿ ಮೂರು ಗೋಡೆಯೊಳಗೆ ಬಂಧಿಯಾಗಿದ್ದ ಮಹಿಳೆಗೂ ಶಿಕ್ಷಣ ಪಡೆಯುವ ಹಕ್ಕಿದೆ ಎಂದು ತೋರಿಸಿಕೊಟ್ಟವರು ಇವರು. ಸಾವಿತ್ರಿಬಾಯಿ ಫುಲೆ ಅವರು 1831ರ ಜ. 3ರಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನೈಗಾಂವ್‌ನಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದರು. ಸಮಾಜದಲ್ಲಿ ಮಹಿಳೆಗೂ ತನ್ನ ಗುರಿಯನ್ನು ಸಾಧಿಸಲು ಅವಕಾಶಕ್ಕಾಗಿ ಹೋರಾಡಿದ ದಿಟ್ಟ ಮಹಿಳೆ ಇವರು. ಮಹಿಳೆಯರ ಸ್ಥಿತಿಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಮತ್ತು ಭಾರತದಲ್ಲಿ ಮಹಿಳಾ ಶಿಕ್ಷಣದ ನಾಯಕಿಯಾದರು.
ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಆಧುನಿಕ ಸ್ತ್ರೀವಾದಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. 1840 ರಲ್ಲಿ ಒಂಬತ್ತನೆಯ ವಯಸ್ಸಿನಲ್ಲಿ, 13 ವರ್ಷದ ಜ್ಯೋತಿರಾವ್ ಫುಲೆ ಅವರನ್ನು ವಿವಾಹವಾದರು. ಬಾಲ್ಯ ವಿವಾಹ, ಸತಿ ಸಹಗಮನದಂತಹ ಅನಿಷ್ಟಗಳ ವಿರುದ್ಧ ಧ್ವನಿ ಎತ್ತಿದರು. ದೇಶದ ಮೊದಲ ಮಹಿಳಾ ಶಿಕ್ಷಕಿ ಎಂಬ ಬಿರುದು ಇವರಿಗಿದೆ.
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯೊಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ ಎಂಬ ಭಾವನೆ ಹೊಂದಿದ್ದ ಸಮಾಜದಲ್ಲಿ ದಿಟ್ಟತನದಿಂದ ಶಿಕ್ಷಕ ತರಬೇತಿ ಪಡೆದ ಸಾವಿತ್ರಿಬಾಯಿ ಫುಲೆ ಎಲ್ಲರ ವಿರೋಧದ ನಡುವೆ ತಾವು ಅಂದುಕೊಂಡಿದ್ದನ್ನು ಸಾಧಿಸಿದ ಗಟ್ಟಿಗಿತ್ತಿ. ಇವರು ಈ ಸಾಧನೆಯ ಹಂತದಲ್ಲಿ ಸಾಕಷ್ಟು ನೋವುಗಳನ್ನು ಮೆಟ್ಟಿ ನಿಂತ ವೀರ ಮಹಿಳೆ. ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಕಲ್ಲು ತೂರುವುದು, ಸಗಣಿ ಎರಚುವುದು, ಮೈಮೇಲೆ ಕೆಸರು ಸುರಿಯುವುದು ಇಂತಹ ಹತ್ತು ಹಲವು ನೋವು ಕಿರುಕುಳವನ್ನು ಎದುರಿಸಿ ಮಹಿಳೆಗೂ ಸಮಾಜದಲ್ಲಿ ಶಿಕ್ಷಣವನ್ನು ಪಡೆಯುವ ಹಕ್ಕಿದೆ ಎಂದು ತೋರಿಸಿ ಕೊಟ್ಟವರು.
ಸಾವಿತ್ರಿಬಾಯಿ ಅವರು 1848ರಲ್ಲಿ ಭಿಡೆ ವಾಡಾದಲ್ಲಿ ಬಾಲಕಿಯರಿಗಾಗಿ ಭಾರತದ ಮೊದಲ ಶಾಲೆಯನ್ನು ಆರಂಭಿಸಿದರು. ಅವರ ಶಾಲೆಯಲ್ಲಿ ಗಣಿತ, ವಿಜ್ಞಾನ ಮತ್ತು ಸಾಮಾಜಿಕ ಅಧ್ಯಯನದ ವಿಷಯವನ್ನು ಹೇಳಿಕೊಡಲಾಗುತ್ತಿತ್ತು. 1851ರ ಹೊತ್ತಿಗೆ ಸಾವಿತ್ರಿಬಾಯಿ ಮತ್ತು ಜ್ಯೋತಿರಾವ್ ಫುಲೆ ಅವರು ಪುಣೆಯಲ್ಲಿ 150 ವಿದ್ಯಾರ್ಥಿನಿಯರ ಸಾಮರ್ಥ್ಯದ ಒಟ್ಟು ಮೂರು ಶಾಲೆಗಳನ್ನು ನಡೆಸಲಾರಂಭಿಸಿದ್ದರು.
ಅಸ್ಪೃಶ್ಯರೆಂದು ಪರಿಗಣಿಸಲ್ಪಟ್ಟ ಮಾಂಗ್, ಮಹಾರ್ ಸೇರಿದಂತೆ ಅನೇಕ ಕೆಳ ಜಾತಿಗಳ ಮಹಿಳೆಯರು ಮತ್ತು ಮಕ್ಕಳಿಗೆ ಸಾವಿತ್ರಿಬಾಯಿ ಅವರು ಶಿಕ್ಷಣ ನೀಡಲು ಪ್ರಾರಂಭಿಸಿದರು. ಗಂಡ-ಹೆಂಡತಿ ಇಬ್ಬರೂ ಸೇರಿಕೊಂಡು ವಿವಿಧ ಜಾತಿಯ ಮಕ್ಕಳಿಗಾಗಿ ಒಟ್ಟು 18 ಶಾಲೆಗಳನ್ನು ತೆರೆದರು. ಎರಡು ಶೈಕ್ಷಣಿಕ ಟ್ರಸ್ಟ್‌ಗಳನ್ನು ಸ್ಥಾಪಿಸಿದರು.
ಸಾವಿತ್ರಿಬಾಯಿ ಅವರು ಶಿಕ್ಷಣಕ್ಕೆ ನೀಡಿದ ಕೊಡುಗೆಯನ್ನು 1852ರಲ್ಲಿ ಬ್ರಿಟಿಷ್ ಸರ್ಕಾರ ಗೌರವಿಸಿತು. ಸಾವಿತ್ರಿಬಾಯಿ ಅವರನ್ನು ಅತ್ಯುತ್ತಮ ಶಿಕ್ಷಕಿ ಎಂದು ಸನ್ಮಾನಿಸಿತು. 1855ರಲ್ಲಿ ಸಾವಿತ್ರಿಬಾಯಿ ಮತ್ತು ಅವರ ಪತಿ ಕಾರ್ಮಿಕರು ಹಾಗೂ ರೈತರಿಗಾಗಿ ರಾತ್ರಿ ಶಾಲೆಯನ್ನು ಆರಂಭಿಸಿದರು.
ದಂಪತಿಯು 1863ರಲ್ಲಿ ಭಾರತದಲ್ಲಿ ಮೊದಲನೇ ಬಾರಿಗೆ ಶಿಶುಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ʼಬಾಲಹತ್ಯಾ ಪ್ರತಿಬಂಧಕ್ ಗೃಹʼವನ್ನು ಪ್ರಾರಂಭಿಸಿದರು. ಈ ಗೃಹದಲ್ಲಿ ಗರ್ಭಿಣಿ ಬ್ರಾಹ್ಮಣ ವಿಧವೆಯರು, ಅತ್ಯಾಚಾರ ಸಂತ್ರಸ್ತ್ರರಿಗೆ ಹೆರಿಗೆಗೆ ಸಹಾಯ ಮಾಡಲಾಯಿತು.
ಸಾವಿತ್ರಿಬಾಯಿ ಫುಲೆಯವರ ಕೃತಿಗಳು
ಕಾವ್ಯಪುಲೆ(ಕಾವ್ಯ ಅರಳಿದೆ)-1854
ಭವನ ಕಾಶಿ ಶುಭೋದ ರತ್ನಾಕರ -1891
ತಮ್ಮ ಭಾಷಣಗಳ ಸಂಪಾದಿತ ಕೃತಿ – 1892
ಕರ್ಜೆ(ಸಾಲ) ಪ್ರಬಂಧ.
ಪತಿ ಜ್ಯೋತಿರಾವ್ ಜೊತೆಗೂಡಿ 1848ರಿಂದ 1852ರ ಅವಧಿಯಲ್ಲಿ 14 ಶಾಲೆಗಳನ್ನು ತೆರೆದರು. ಇವರ ಈ ಸಾಧನೆಯಲ್ಲಿ ಅವರ ಪತಿಯೂ ಸಂಪೂರ್ಣ ಸಹಕಾರವನ್ನು ನೀಡಿದ್ದರು. ಇವರ ಈ ಸಾಧನೆಗೆ ಬ್ರಿಟಿಷ್ ಸರ್ಕಾರ ಭಾರತದ ಮೊದಲ ಶಿಕ್ಷಕಿ ಪ್ರಶಸ್ತಿಯನ್ನು ನೀಡಿತ್ತು.
ಇವರ ಮುಖ್ಯ ಗುರಿ ಹೆಣ್ಣಿಗೂ ಸಹ ಸಮಾಜದಲ್ಲಿ ಸಮಾನವಾಗಿ ಬದುಕುವ ಹಕ್ಕು ನೀಡುವುದು ಆಗಿತ್ತು. ಕೇವಲ ಶಿಕ್ಷಣ ಕೇತ್ರದಲ್ಲಿ ಮಾತ್ರವಲ್ಲದೇ ಕುಟುಂಬದಿಂದ ಶೋಷಣೆಗೆ ಒಳಗಾದ ಮಹಿಳೆಯರಿಗಾಗಿ ಶಾಲೆಗಳು, ಅಬಲಾಶ್ರಮಗಳನ್ನು ಸ್ಥಾಪಿಸಿ ಅವರಿಗೆ ಆಶ್ರಯವನ್ನು ನೀಡಿದರು. ಜತೆಗೆ ಸಮಾಜದ ಕೆಲವೊಂದು ಕಟ್ಟು ಪಾಡುಗಳು ಅಂದರೆ ಬಾಲ್ಯವಿವಾಹ, ಸತಿ ಸಹಗಮನ, ವಿಧವೆಯರಿಗೆ ಕೇಶಮುಂಡನ ಮುಂತಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ಧ್ವನಿ ಎತ್ತಿದ್ದ ದಿಟ್ಟ ಮಹಿಳೆ ಇವರು. ಸಾವಿತ್ರಿಬಾಯಿ ಫುಲೆ 1897ರ ಮಾರ್ಚ್ 10ರಂದು ನಿಧನ ಹೊಂದಿದರು.
ಈ ಸುದ್ದಿಯನ್ನು ಓದಿ: Draupadi Murmu: ಇಂದು ರಾಜ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ನಿಮ್ಹಾನ್ಸ್ ಸುತ್ತಮುತ್ತ ಏರ್‌ಕ್ರಾಫ್ಟ್ ಹಾರಾಟ ನಿರ್ಬಂಧ