Saturday, 23rd November 2024

ಇಂಡಿಗೊ ವಿಮಾನದ ಮಹಿಳಾ ಸಿಬ್ಬಂದಿಗೆ ‘ಕಿರುಕುಳ’: ಸ್ವೀಡನ್ ಪ್ರಜೆ ಬಂಧನ

ಮುಂಬೈ: ಬ್ಯಾಂಕಾಕ್‌ನಿಂದ ಬರುತ್ತಿದ್ದ ಇಂಡಿಗೊ ವಿಮಾನದ ಮಹಿಳಾ ಸಿಬ್ಬಂದಿಗೆ ನಾಲ್ಕು ಗಂಟೆ ಕಾಲ ‘ಕಿರು ಕುಳ’ ನೀಡಿದ್ದಾನೆ ಎನ್ನಲಾದ 63 ವರ್ಷದ ಸ್ವೀಡನ್ ಪ್ರಜೆಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಕ್ಲಾಸ್ ಎರಿಕ್ ಹೆರಾಲ್ಡ್ ಜೋನ್ಸ್ ವೆಸ್ಟ್‌ಬರ್ಗ್ ಎಂಬ ಪ್ರಯಾಣಿಕ ವಿಮಾನಯಾನದ ವೇಳೆ ಪಾನಮತ್ತನಾಗಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.

ಮೂವರು ವಿಮಾನ ಸಿಬ್ಬಂದಿಯ ಹೇಳಿಕೆ ಆಧರಿಸಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ. 20 ಸಾವಿರ ವೈಯಕ್ತಿಕ ಬಾಂಡ್ ಆಧಾರದಲ್ಲಿ ವೆಸ್ಟ್‌ಬರ್ಗ್‌ ನನ್ನು ನ್ಯಾಯಾಲಯ ಜಾಮೀನಿನಲ್ಲಿ ಬಿಡುಗಡೆ ಮಾಡಿದೆ. ಇದೀಗ ವೆಸ್ಟ್‌ಬರ್ಗ್ ವಿಚಾರಣೆಗೆ ಹಾಜರಾಗಬೇಕಿದೆ.

ವೆಸ್ಟ್‌ಬರ್ಗ್, ಕಳೆದ ಮೂರು ತಿಂಗಳಲ್ಲಿ ವಿಮಾನದಲ್ಲಿ ಅಸಭ್ಯ ವರ್ತನೆಗಾಗಿ ಭಾರತದಲ್ಲಿ ಬಂಧಿತನಾದ ಎಂಟನೇ ಪ್ರಯಾಣಿಕ.

ಬ್ಯಾಂಕಾಕ್‌ನಿಂದ ಹೊರಟಿದ್ದ ವಿಮಾನ (6ಇ-1052) ನಾಲ್ಕು ಗಂಟೆ ಪ್ರಯಾಣದ ಬಳಿಕ ಸಂಜೆ 6.30ಕ್ಕೆ ಮುಂಬೈ ತಲುಪಿದೆ. ವಿಮಾನ ನಿಲ್ದಾಣದಿಂದ ವೆಸ್ಟ್‌ಬರ್ಗ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 20 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಆಧಾರದಲ್ಲಿ ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆತನಿಗೆ ಜಾಮೀನು ನೀಡಿದೆ.

ವಿಮಾನದಲ್ಲಿ ಪ್ರಯಾಣಿಕರಿಗೆ ಊಟ ನೀಡುವ ವೇಳೆ ಈತ ಅಸಭ್ಯವಾಗಿ ವರ್ತಿಸಲು ಆರಂಭಿಸಿದ ಎನ್ನಲಾಗಿದೆ.