Sunday, 6th October 2024

Iran israel war : ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿಗೆ ಭಾರತ ಕಳವಳ; ನಾಗರಿಕರ ಹಕ್ಕು ಕಾಪಾಡಲು ಸಲಹೆ

Iran israel war

ನವದೆಹಲಿ: ಇಸ್ರೇಲ್ ಮೇಲೆ ಇರಾನ್‌ ಮಾಡಿರುವ ಕ್ಷಿಪಣಿ ದಾಳಿಯ (Iran israel war) ನಂತರ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿಯ ಬಗ್ಗೆ ಭಾರತ ಬುಧವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಸಂಘರ್ಷವು ಮುಂದುವರಿಬಾರದು ಹಾಗೂ ಪ್ರಾದೇಶಿಕ ಆಯಾಮದಲ್ಲ ನಡೆಯಬಾರದು ಎಂದು ಹೇಳಿದೆ.

ಎಲ್ಲಾ ಸಂಘರ್ಷಗಳನ್ನು ಪರಿಹರಿಸಲು “ಮಾತುಕತೆ ಮತ್ತು ರಾಜತಾಂತ್ರಿಕ” ವಿಧಾನವೇ ಸೂಕ್ತ ಎಂಬುದಾಗಿ ವಿದೇಶಾಂಗ ಸಚಿವಾಲಯ (ಎಂಇಎ) ಹೇಳಿಕೆಯಲ್ಲಿ ಒತ್ತಿಹೇಳಿದೆ.

ಪಶ್ಚಿಮ ಏಷ್ಯಾದಲ್ಲಿನ ಭದ್ರತಾ ಪರಿಸ್ಥಿತಿಯ ಉಲ್ಬಣದ ಬಗ್ಗೆ ನಾವು ತೀವ್ರ ಕಳವಳ ವ್ಯಕ್ತಪಡಿಸಿದ್ದೇವೆ. ಸಂಬಂಧಪಟ್ಟ ಎಲ್ಲರೂ ಸಂಯಮದಿಂದ ವರ್ತಿಸಬೇಕು ಹಾಗೂ ನಾಗರಿಕರ ರಕ್ಷಣೆಗೆ ಮುಂದಾಗಬೇಕು. ಸಂಘರ್ಷವು ವಿಶಾಲವಾದ ಪ್ರಾದೇಶಿಕ ಆಯಾಮವನ್ನು ತೆಗೆದುಕೊಳ್ಳಬಾರದು. ಎಲ್ಲಾ ಸಮಸ್ಯೆಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕತೆ ವಿಧಾನದ ಮೂಲಕ ಪರಿಹರಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಎಂಇಎ ಹೇಳಿಕೆಯಲ್ಲಿ ತಿಳಿಸಿದೆ.

ಇಸ್ರೇಲ್ ಮೇಲೆ ಭೀಕರ ದಾಳಿ ನಡೆಸಿದ ಇರಾನ್ ಪ್ರತಿಕಾರ ತೀರಿಸಿಕೊಂಡಿದ್ದೇವೆ ಎಂದು ಹೇಳಿದೆ. ಯಹೂದಿ ರಾಷ್ಟ್ರದ ಮೇಲೆ 180 ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ ಒಂದು ದಿನದ ನಂತರ ಭಾರತದ ಹೇಳಿಕೆ ಬಿಡುಗಡೆ ಮಾಡಿದೆ.

ಇದನ್ನೂ ಓದಿ: Israel Airstrike: ಇರಾನ್‌ ಕ್ಷಿಪಣಿ ದಾಳಿಗೆ ತಿರುಗೇಟು- ಹೆಜ್ಬುಲ್ಲಾ ನೆಲೆಗಳನ್ನು ಪುಡಿಗಟ್ಟಿದ ಇಸ್ರೇಲ್‌

ಕ್ಷಿಪಣಿ ದಾಳಿ ನಡೆಯುತ್ತಿದ್ದಂತೆ ಇಸ್ರೇಲ್‌ನಾದ್ಯಂತ ಸೈರನ್‌ಗಳು ಮೊಳಗಿದವು. ಜೆರುಸಲೇಮ್ ಮತ್ತು ಜೋರ್ಡಾನ್ ನದಿ ಕಣಿವೆಯಲ್ಲಿ ಸ್ಫೋಟಗಳು ಕೇಳಿಬಂದವು. ಇಸ್ರೇಲಿಗಳು ಬಾಂಬ್ ಶೆಲ್ಟರ್ ಗಳಲ್ಲಿ ಅವಿತುಕೊಂಡರು. ಇರಾನಿನ ರೆವಲ್ಯೂಷನರಿ ಗಾರ್ಡ್ಸ್ ಪ್ರಕಾರ, ಹೈಪರ್ಸಾನಿಕ್ ಫತಾಹ್ ಕ್ಷಿಪಣಿಗಳನ್ನು ಮೊದಲ ಬಾರಿಗೆ ಬಳಸಲಾಗಿದೆ. ಅದು 90 ಪ್ರತಿಶತದಷ್ಟು ಇಸ್ರೇಲ್‌ ಗುರಿಗಳ ಮೇಲೆ ದಾಳಿ ಮಾಡಿದೆ ಎಂದಿದೆ.

ಕ್ಷಿಪಣಿಗಳನ್ನು ಇಸ್ರೇಲ್ ಮತ್ತು ಅಮೆರಿಕ ನೇತೃತ್ವದ ಸೇನಾ ಒಕ್ಕೂಟವು ತಡೆದಿದೆ ಎಂದು ಇಸ್ರೇಲ್ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದ್ದಾರೆ. ಇರಾನ್ ದಾಳಿಯು ತೀವ್ರ ಮತ್ತು ಅಪಾಯಕಾರಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಘಟನೆಯಲ್ಲಿ ಇಸ್ರೇಲ್‌ನಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ, ಆದರೆ ಪಶ್ಚಿಮ ದಂಡೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಮಾಸ್ ಉಗ್ರು ಇಸ್ರೇಲ್ ಮೇಲೆ ದಾಳಿ ನಡೆಸಿ ಸುಮಾರು 1,200 ಜನರನ್ನು ಕೊಂದು 200ಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳನ್ನಾಗಿ ತೆಗೆದುಕೊಂಡ ನಂತರ ಮಧ್ಯಪ್ರಾಚ್ಯವು ಸುಮಾರು ಒಂದು ವರ್ಷದಿಂದ ಪ್ರಕ್ಷುಬ್ಧ ಸ್ಥಿತಿಯಲ್ಲಿದೆ. ಈ ದಾಳಿಯು ಗಾಝಾದಲ್ಲಿ ಯುದ್ಧಕ್ಕೆ ಕಾರಣವಾಗಿದೆ. ಈ ಪ್ರದೇಶದ 41,000 ಕ್ಕೂ ಹೆಚ್ಚು ಜನರ ಮೃತಪಟ್ಟಿದ್ದಾರೆ.