Thursday, 28th November 2024

ISKCON: ಬಾಂಗ್ಲಾದಲ್ಲಿ ಇಸ್ಕಾನ್ ನಿಷೇಧಕ್ಕೆ ಮುಸ್ಲಿಂ ಮೂಲಭೂತವಾದಿ ಶಕ್ತಿಗಳ ಸಂಚು! ಇಸ್ಕಾನ್ ಟಾರ್ಗೆಟ್ ಯಾಕೆ?

ISKCON

ಹಿಂದೂ ಸನ್ಯಾಸಿ (Hindu Monk) ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿ (Chinmoy Krishna Das Brahmachari) ಅವರನ್ನು ಬಾಂಗ್ಲಾದೇಶದ (Bangladesh ) ಢಾಕಾ ಮೆಟ್ರೋಪಾಲಿಟನ್ ಪೊಲೀಸ್ ಪತ್ತೇದಾರಿ ಶಾಖೆಯಿಂದ ಬಂಧಿಸಲಾಗಿದೆ. ಇದನ್ನು ಇಸ್ಕಾನ್ (ISKCON) ಖಂಡಿಸಿದೆ.

ಸನ್ಯಾಸಿಯ ಬಂಧನ ಬಾಂಗ್ಲಾದ ಮುಖ್ಯ ಸಲಹೆಗಾರ ಮತ್ತು ನೋಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಹೊಸ ಮಧ್ಯಂತರ ಸರ್ಕಾರ ಮತ್ತು ದೇಶದ ಹಿಂದೂ ಸಮುದಾಯದ ನಡುವಿನ ಘರ್ಷಣೆಗೆ ನಾಂದಿ ಹಾಡಿದೆ.

ಢಾಕಾದಲ್ಲಿ ಕಳೆದ ಜುಲೈ ತಿಂಗಳಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿಗೆ ಕಾರಣವಾಯಿತು. ಬಳಿಕ ಇದು ಹಸೀನಾ ಸರ್ಕಾರದ ಬೆಂಬಲಿಗರು ಎಂದು ಭಾವಿಸಲಾದ ಹಿಂದೂಗಳ ಮೇಲೆ ದಾಳಿಗೆ ಕಾರಣವಾಗಿದೆ.

ಹಿಂದೂ ಸನ್ಯಾಸಿ ಮತ್ತು ಬಾಂಗ್ಲಾದೇಶ ಸಮ್ಮಿಲಿತಾ ಸನಾತನಿ ಜಾಗರಣ ಜೋಟೆ ಅವರ ವಕ್ತಾರ ಕೃಷ್ಣ ದಾಸ್ ಅವರ ಬಂಧನವನ್ನು ಖಂಡಿಸಿರುವ ಇಂಟರ್‌ನ್ಯಾಶನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ (ISKCON) ಈಗ ಬಾಂಗ್ಲಾದೇಶ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ.

ಇದರಿಂದಾಗಿ ಇಸ್ಕಾನ್ ಗೆ ಅದರ ಅನುಯಾಯಿಗಳಿಗೆ ಬಾಂಗ್ಲಾದೇಶದಲ್ಲಿ ನಿಷೇಧದ ಭೀತಿ ಎದುರಾಗಿದೆ.

ISKCON

ಇಸ್ಕಾನ್ ಎಂದರೇನು?

1966ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಶ್ರೀಲ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು (ಜನನ ಅಭಯ್ ಚರಣ್ ದೇ) ಅವರು ಇಸ್ಕಾನ್ ಅನ್ನು ಸ್ಥಾಪಿಸಿದರು. ಭಾರತೀಯ ಆಧ್ಯಾತ್ಮಿಕ ನಾಯಕರಾದ ಅವರು ನೂರಾರು ದೇವಾಲಯಗಳನ್ನು ಸ್ಥಾಪಿಸಿ, ಹಲವಾರು ಪುಸ್ತಕಗಳನ್ನು ಬರೆದರು. ಜಗತ್ತಿಗೆ ‘ಭಕ್ತಿ’ ಮಾರ್ಗವನ್ನು ಬೋಧಿಸಿದರು. ಇಸ್ಕಾನ್ ಅನ್ನು ಸಾಮಾನ್ಯವಾಗಿ ‘ಹರೇ ಕೃಷ್ಣ’ ಚಳುವಳಿ ಎಂದು ಕರೆಯಲಾಗುತ್ತದೆ.

ಸ್ವಾಮಿ ಪ್ರಭುಪಾದರು ಇಸ್ಕಾನ್‌ನ ನಾಯಕತ್ವದ ಮೂಲಕ ಭಾರತಕ್ಕೆ ಮತ್ತು ನಿರ್ದಿಷ್ಟವಾಗಿ ಪಶ್ಚಿಮಕ್ಕೆ ಗೌಡೀಯ ವೈಷ್ಣವ ಸಂಪ್ರದಾಯದ ಖ್ಯಾತ ಸಂವಹನಕಾರರಾದರು. ಗೌಡೀಯ ವೈಷ್ಣವವು ಚೈತನ್ಯ ಮಹಾಪ್ರಭುಗಳಿಂದ ಪ್ರೇರಿತವಾದ ವೈಷ್ಣವ ಹಿಂದೂ ಧಾರ್ಮಿಕ ಚಳುವಳಿಯಾಗಿದೆ.

ಇಸ್ಕಾನ್ ಭಾರತದಲ್ಲಿ ತನ್ನ ಬೇರುಗಳನ್ನು 16ನೇ ಶತಮಾನದ ಆರಂಭದವರೆಗೆ ಗುರುತಿಸುತ್ತದೆ. 20 ನೇ ಶತಮಾನದ ಮಧ್ಯದಿಂದ ಅಮೆರಿಕ, ಯುರೋಪ್ ಮತ್ತು ಆಫ್ರಿಕಾದಲ್ಲೂ ಇದರ ಶಾಖೆಗಳನ್ನು ವಿಸ್ತರಿಸಲಾಗಿದೆ.

ಇಸ್ಕಾನ್‌ನ ಸಾಧನೆಗಳೇನು?

ಇಸ್ಕಾನ್ ಭಾರತದಲ್ಲಿ 800ಕ್ಕೂ ಹೆಚ್ಚು ದೇವಾಲಯಗಳನ್ನು ಹೊಂದಿದೆ. 12 ರಾಜ್ಯಗಳಲ್ಲಿ ಶಿಕ್ಷಣ ಸಂಸ್ಥೆಗಳು, 25ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳು ಮತ್ತು ಹಲವಾರು ಪ್ರವಾಸಿ, ತೀರ್ಥಯಾತ್ರೆ ಹೋಟೆಲ್‌ಗಳನ್ನು ಹೊಂದಿದೆ.
ಪಶ್ಚಿಮ ಬಂಗಾಳದ ಮಾಯಪುರದ ವೈದಿಕ ತಾರಾಲಯದ ದೇವಾಲಯವನ್ನು ಶ್ರೀ ಚೈತನ್ಯ ಮಹಾಪ್ರಭುಗಳ ಜನ್ಮಸ್ಥಳದಲ್ಲಿ ನಿರ್ಮಿಸಲಾಗುತ್ತಿದೆ.

ಉತ್ತರ ಪ್ರದೇಶದ ವೃಂದಾವನದ ರಾಮನ್ ರೆಟಿ ಪ್ರದೇಶದಲ್ಲಿ ಶ್ರೀ ಕೃಷ್ಣ ಬಲರಾಮ ಮಂದಿರ ಎಂದು ಕರೆಯಲ್ಪಡುವ ಇನ್ನೊಂದು ದೇವಾಲಯವನ್ನು ವೈದಿಕ ಕಾಲದಲ್ಲಿ ಕೃಷ್ಣ ಮತ್ತು ಬಲರಾಮರು ನೆಲೆಸಿದ್ದರು ಎಂದು ಹೇಳಲಾಗುವ ಮೂಲ ಗ್ರಾಮದಲ್ಲಿ ನಿರ್ಮಿಸಲಾಗಿದೆ. ರಾಯಪುರ, ದೆಹಲಿ, ಚೆನ್ನೈ, ಸೇಲಂ ಮತ್ತು ಸಿಲಿಗುರಿಯಲ್ಲಿ ಇತರ ಇಸ್ಕಾನ್ ದೇವಾಲಯಗಳಿವೆ.

ಯುರೋಪ್‌ನಲ್ಲಿ 135 ಕ್ಕೂ ಹೆಚ್ಚು ಇಸ್ಕಾನ್ ದೇವಾಲಯಗಳು ಮತ್ತು ಸಾಂಸ್ಕೃತಿಕ ಕೇಂದ್ರಗಳಿವೆ. ಇದರಲ್ಲಿ ಸ್ಪೇನ್‌ನ ನ್ಯೂವಾ ವ್ರಜಮಂಡಲ, ಫ್ರಾನ್ಸ್‌ನ ಲಾ ನೌವೆಲ್ಲೆ ಮಾಯಪುರ ಮತ್ತು ಇಟಲಿಯ ವಿಲ್ಲಾ ವೃಂದಾವನ ಸೇರಿದಂತೆ ಹಲವು ದೇವಾಲಯಗಳು ಗ್ರಾಮೀಣ ಮತ್ತು ಕೃಷಿ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿವೆ.

ರಷ್ಯಾದಲ್ಲಿ 31 ಕೇಂದ್ರಗಳಿವೆ. ಯಾಕೆಂದರೆ ಇಲ್ಲಿ ವೈಷ್ಣವ ಹಿಂದೂ ಧರ್ಮವು ಅತಿದೊಡ್ಡ ಪಂಗಡಗಳಲ್ಲಿ ಒಂದಾಗಿದೆ.

ನೇಪಾಳದ ಕಠ್ಮಂಡುವಿನ ಶಿವಪುರಿ ಪರ್ವತದಲ್ಲಿ ಇಸ್ಕಾನ್ ದೇವಾಲಯವಿದೆ. 2018 ರ ವರದಿಯ ಪ್ರಕಾರ ಜಗತ್ತಿನಾದ್ಯಂತ 5,000 ಕ್ಕೂ ಹೆಚ್ಚು ಭಕ್ತರು ನೇಪಾಳದಲ್ಲಿ ಜಗನ್ನಾಥ ರಥ ಯಾತ್ರೆಯಲ್ಲಿ ಭಾಗವಹಿಸುತ್ತಾರೆ.

ಯುನೈಟೆಡ್ ಕಿಂಗ್‌ಡಮ್ ನಲ್ಲಿ ಭಕ್ತಿವೇದಾಂತ ಮ್ಯಾನರ್ ಗಾಗಿ ದಿ ಬೀಟಲ್ಸ್‌ನ ಜಾರ್ಜ್ ಹ್ಯಾರಿಸನ್ ತಮ್ಮ ಆಸ್ತಿಯನ್ನು ದಾನ ಮಾಡಿದ್ದಾರೆ. ಇದು ಇಂಗ್ಲೆಂಡ್‌ನ ರಾಷ್ಟ್ರೀಯ ಪರಂಪರೆಯ ಪಟ್ಟಿಯಲ್ಲಿದೆ. ದೇವಾಲಯ ಸೇರಿದಂತೆ ಆಸ್ತಿಯ ಮೇಲಿನ ಮನೆಗಳನ್ನು 1800ರ ಅವಧಿಯ ಅಣಕು ಟ್ಯೂಡರ್ ಮ್ಯಾನ್ಷನ್ ಶೈಲಿಯಲ್ಲಿ ನಿರ್ಮಿಸಲಾಗಿದೆ.

ಅಮೆರಿಕದಲ್ಲಿ 56 ಕೇಂದ್ರಗಳಿವೆ. ಕೆನಡಾದಲ್ಲಿ 12 ಇಸ್ಕಾನ್ ಕೇಂದ್ರಗಳಿವೆ. ಬ್ರೆಜಿಲ್ ಮತ್ತು ಅರ್ಜೆಂಟೀನಾದಲ್ಲಿ, 60 ಇಸ್ಕಾನ್ ದೇವಾಲಯಗಳಿವೆ. ಇಂಡೋನೇಷ್ಯಾ, ಮಲೇಷಿಯಾ ಮತ್ತು ಫಿಲಿಪೈನ್ಸ್‌ನಲ್ಲಿ 80 ಕ್ಕೂ ಹೆಚ್ಚು ಇಸ್ಕಾನ್ ಕೇಂದ್ರಗಳಿವೆ.

ಆಫ್ರಿಕಾದಲ್ಲಿ 69 ಇಸ್ಕಾನ್ ಕೇಂದ್ರಗಳಿವೆ. ಅವುಗಳಲ್ಲಿ ನಾಲ್ಕು ಗ್ರಾಮೀಣ ಕೃಷಿ ಸಮುದಾಯಗಳು ಮತ್ತು ಅವುಗಳಲ್ಲಿ ಮೂರು ಶೈಕ್ಷಣಿಕ ಕೇಂದ್ರಗಳಾಗಿವೆ. ಆಸ್ಟ್ರೇಲಿಯಾದಲ್ಲಿ ಒಂದು ಕೃಷಿ ಗ್ರಾಮ ಮತ್ತು ನ್ಯೂಜಿಲೆಂಡ್‌ನಲ್ಲಿ ನಾಲ್ಕು ದೇವಾಲಯ ಕೇಂದ್ರಗಳು ಸೇರಿದಂತೆ ಆರು ಇಸ್ಕಾನ್ ಕೇಂದ್ರಗಳಿವೆ.

ಇಸ್ಕಾನ್ ಅಡಿಯಲ್ಲಿ ವಿವಿಧ ಟ್ರಸ್ಟ್‌ಗಳು ಕಾರ್ಯ ನಿರ್ವಹಿಸುತ್ತವೆ. ಇವುಗಳು ಪುಸ್ತಕ ಪೂರೈಕೆ, ಶಾಲೆಗಳಿಗೆ ಪ್ರೋತ್ಸಾಹ, ಕುಡಿಯುವ ನೀರಿನ ಯೋಜನೆಗೆ ಬೆಂಬಲ, ಕೃಷ್ಣ ದೇವಾಲಯಗಳ ನಿರ್ಮಾಣ ಮತ್ತು ನವೀಕರಣಕ್ಕೆ ಹಣಕಾಸು ಸಹಾಯವನ್ನು ಮಾಡುತ್ತವೆ.

ಇಸ್ಕಾನ್‌ನ ಪೋಷಕರು?

ಅಮೆರಿಕನ್ ಉದ್ಯಮಿ ಮತ್ತು ಹೆನ್ರಿ ಫೋರ್ಡ್ ಅವರ ಮೊಮ್ಮಗ ಆಲ್ಫ್ರೆಡ್ ಫೋರ್ಡ್, ಇಂಗ್ಲಿಷ್ ಗಿಟಾರ್ ವಾದಕ, ಗಾಯಕ, ಗೀತರಚನೆಕಾರ, ರೆಕಾರ್ಡ್ ನಿರ್ಮಾಪಕ ಮತ್ತು ಚಲನಚಿತ್ರ ನಿರ್ಮಾಪಕ, ದಿ ಬೀಟಲ್ಸ್‌ನ ಸದಸ್ಯ ಜಾರ್ಜ್ ಹ್ಯಾರಿಸನ್, ಇಂಗ್ಲಿಷ್ ಹಾಸ್ಯನಟ, ನಟ, ಅಂಕಣಕಾರ, ರೇಡಿಯೋ ಮತ್ತು ದೂರದರ್ಶನದ ಲೇಖಕ ಮತ್ತು ನಿರೂಪಕ ರಸ್ಸೆಲ್ ಬ್ರಾಂಡ್ ಇಸ್ಕಾನ್ ನ ಸದಸ್ಯರಾಗಿ, ಪೋಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಾಂಗ್ಲಾದೇಶದಲ್ಲಿ ಇಸ್ಕಾನ್ ಮೇಲೆ ದಬ್ಬಾಳಿಕೆ ಯಾಕೆ?

ಮಾಜಿ ಪ್ರಧಾನಿ ಹಸೀನಾ ಅವರನ್ನು ದೇಶದಿಂದ ಹೊರಹಾಕಿದ ಅನಂತರ ಬಾಂಗ್ಲಾದೇಶದ ಹಿಂದೂಗಳು ನಿರಂತರ ದಬ್ಬಾಳಿಕೆಯನ್ನು ಎದುರಿಸುತ್ತಿದ್ದಾರೆ. ಇದು ಇಸ್ಕಾನ್ ಬೆಂಬಲಿಗರನ್ನು ಗುರಿಯಾಗಿಸಿಕೊಂಡಿದೆ.

ಬಾಂಗ್ಲಾದೇಶದ ಹೈಕೋರ್ಟ್ ಗುರುವಾರ ದೇಶದಲ್ಲಿ ಇಸ್ಕಾನ್ ಚಟುವಟಿಕೆಗಳನ್ನು ನಿಷೇಧಿಸುವ ಕುರಿತು ಸ್ವಯಂಪ್ರೇರಿತ ಆದೇಶವನ್ನು ನೀಡಲು ನಿರಾಕರಿಸಿದೆ ಎನ್ನಲಾಗಿದೆ.

ಸುಪ್ರೀಂ ಕೋರ್ಟ್ ವಕೀಲ ಮೊನಿರುಜ್ಜಮಾನ್ ಅವರು ಹಿಂದೂ ಸಂಘಟನೆಯ ಕಾರ್ಯಾಚರಣೆಗಳನ್ನು ನಿಷೇಧಿಸುವಂತೆ ಕೋರಿದ ಬಳಿಕ ಇಸ್ಕಾನ್‌ನ ಇತ್ತೀಚಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರವು ತೆಗೆದುಕೊಂಡಿರುವ ಕ್ರಮಗಳನ್ನು ನ್ಯಾಯಾಲಯಕ್ಕೆ ತಿಳಿಸುವಂತೆ ಬಾಂಗ್ಲಾದೇಶದ ಉಚ್ಚ ನ್ಯಾಯಾಲಯವು ಈ ಹಿಂದೆ ಅಟಾರ್ನಿ ಜನರಲ್ ಎಂಡಿ ಅಸಾದುಜ್ಜಮಾನ್ ಅವರಿಗೆ ತಿಳಿಸಿತ್ತು.

ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ಕಾನ್ ಉಪಾಧ್ಯಕ್ಷ ರಾಧಾ ರಮಣ್ ದಾಸ್ ಅವರು ಈ ಬಗ್ಗೆ ಮಾತನಾಡಲು ವಿಶ್ವ ನಾಯಕರನ್ನು ಕರೆದಿದ್ದು, ಪರಿಸ್ಥಿತಿ ಕೈ ಮೀರಿದೆ. ಈಗ ನಮ್ಮ ಹಿಡಿತದಲ್ಲಿಲ್ಲ. ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳುವವರೆಗೆ ಅಂದರೆ ಜನವರಿ 20 ರವರೆಗೆ ಕಾಯುತ್ತೇವೆ ಎಂದು ಹೇಳಿದ್ದಾರೆ.

ISKCON

ಹಿಂದೂ ಸನ್ಯಾಸಿ ಬಂಧನದ ಬಗ್ಗೆ ಆಕ್ರೋಶ

ಕೃಷ್ಣ ದಾಸ್ ಬಂಧನದ ವಿಷಯದಲ್ಲಿ ಭಾರತ ಮಧ್ಯಪ್ರವೇಶಿಸಿ ಅವರ ಬಿಡುಗಡೆಗಾಗಿ ಪ್ರಯತ್ನಿಸಬೇಕು ಎಂದು ಇಸ್ಕಾನ್ ಕರೆ ನೀಡಿದೆ. ಕೃಷ್ಣ ದಾಸ್ ಅವರು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪಗಳನ್ನು ಅದು ನಿರಾಕರಿಸಿದೆ ಮತ್ತು ಅವುಗಳನ್ನು ಆಧಾರರಹಿತ ಮತ್ತು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.

ಕೃಷ್ಣ ದಾಸ್ ವಿರುದ್ಧ ಆರೋಪಗಳೇನು?

ಚಟ್ಟೋಗ್ರಾಮ್‌ನಲ್ಲಿ ಅಕ್ಟೋಬರ್‌ನಲ್ಲಿ ನಡೆದ ರಾಲಿಯಲ್ಲಿ ಕೃಷ್ಣ ದಾಸ್ ಅವರು ಬಾಂಗ್ಲಾದೇಶದ ಧ್ವಜಕ್ಕೆ ಅಗೌರವ ತೋರಿದ್ದಾರೆ. ಕೇಸರಿ ಧ್ವಜವನ್ನು ಹಾರಿಸಿದ್ದಕ್ಕಾಗಿ ದೇಶದ್ರೋಹದ ಆರೋಪ ಹೊರಿಸಲಾದ 18 ವ್ಯಕ್ತಿಗಳಲ್ಲಿ ಅವರು ಸೇರಿದ್ದಾರೆ. ಕೃಷ್ಣ ದಾಸ್ ಅವರು ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ನವೆಂಬರ್ 22 ರಂದು ಹಿಂಸಾಚಾರ ಪೀಡಿತ ರಂಗ್‌ಪುರದಲ್ಲಿ ಬೃಹತ್ ಪ್ರತಿಭಟನಾ ರಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು ಎನ್ನುವ ಆರೋಪಗಳಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಶ್ರೀ ಚಿನ್ಮೋಯ್ ಕೃಷ್ಣ ದಾಸ್ ಅವರ ಬಂಧನ ಮತ್ತು ಜಾಮೀನು ನಿರಾಕರಣೆ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

Basavaraja Bommai: ಬಾಂಗ್ಲಾದ ಹಿಂದುಗಳ ಮೇಲಿನ ದಾಳಿ ನಿಲ್ಲಿಸಲು ವಿಶ್ವಸಂಸ್ಥೆ ಮಧ್ಯಪ್ರವೇಶ; ಬೊಮ್ಮಾಯಿ ಆಗ್ರಹ

ಈ ಘಟನೆಯು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಅನೇಕ ದಾಳಿಗಳಿಗೆ ಪ್ರಚೋದನೆ ನೀಡಿದೆ. ನ್ಯಾಯಸಮ್ಮತವಾದ ಬೇಡಿಕೆಗಳನ್ನು ಪ್ರಸ್ತುತಪಡಿಸುವ ಧಾರ್ಮಿಕ ಮುಖಂಡರ ವಿರುದ್ಧ ಆರೋಪಗಳನ್ನು ಹೇರುವುದು ದುರದೃಷ್ಟಕರ. ಶಾಂತಿಯುತ ಸಭೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಸೇರಿದಂತೆ ಹಿಂದೂಗಳು ಮತ್ತು ಎಲ್ಲಾ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಬಾಂಗ್ಲಾದೇಶದ ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ ಎಂದು ತಿಳಿಸಿದೆ.