Wednesday, 8th January 2025

ISRO Chairman: ಇಸ್ರೋದ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ; ಜ.14ಕ್ಕೆ ಅಧಿಕಾರ ಸ್ವೀಕಾರ

ISRO Chairman

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ISRO) ಮುಂದಿನ ಅಧ್ಯಕ್ಷರಾಗಿ ಡಾ. ವಿ ನಾರಾಯಣನ್ (V. Narayanan) ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ. ಹಾಲಿ ಮುಖ್ಯಸ್ಥ ಎಸ್. ಸೋಮನಾಥ್ (S Somnath) ಎರಡು ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸಿದ್ದಾರೆ. ಜನವರಿ 14ರಂದು ಅವರು ನಿವೃತ್ತರಾಗಲಿದ್ದಾರೆ. (ISRO Chairman)

ವಿ.ನಾರಾಯಣನ್ ಅವರಿಗೆ ಸುಮಾರು ನಾಲ್ಕು ದಶಕಗಳ ಅನುಭವವಿದೆ. ಅವರು ಭಾರತೀಯ ಬಾಹ್ಯಾಕಾಶ ಸಂಸ್ಥೆಯಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.  ನಾರಾಯಣನ್ ಪ್ರಸ್ತುತ ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋದ ಎಲ್‌ಪಿಎಸ್‌ಸಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಲಿಯಮಲದಲ್ಲಿರುವ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್ (LPSC) ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಇನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಇಸ್ರೋ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

GSLV Mk Ill ವಾಹನದ C25 ಕ್ರಯೋಜೆನಿಕ್ ಯೋಜನೆಗೆ ಪ್ರಾಜೆಕ್ಟ್ ಡೈರೆಕ್ಟರ್ ಆಗಿದ್ದು ಅವರ ಮಹತ್ವದ ಸಾಧನೆಗಳಲ್ಲಿ ಒಂದಾಗಿದೆ. ಅವರ ನಾಯಕತ್ವದಲ್ಲಿ, ತಂಡವು GSLV Mk III ನ ಪ್ರಮುಖ ಅಂಶವಾದ C25 ಹಂತವನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿತು.

ಇಸ್ರೋ ವಿಜ್ಞಾನಿ ಡಾ.ನಾರಾಯಣನ್ ಅವರಿಗೆ ಹಲವು ಪ್ರಶಸ್ತಿ, ಗೌರವಗಳು ಸಂದಿವೆ. ಇವುಗಳಲ್ಲಿ ಐಐಟಿ ಖರಗ್‌ಪುರದ ಬೆಳ್ಳಿ ಪದಕ, ಆಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ (ಎಎಸ್‌ಐ) ಯಿಂದ ಚಿನ್ನದ ಪದಕ ಮತ್ತು ಎನ್‌ಡಿಆರ್‌ಎಫ್‌ನಿಂದ ರಾಷ್ಟ್ರೀಯ ವಿನ್ಯಾಸ ಪ್ರಶಸ್ತಿ ಸೇರಿವೆ.

ಜನವರಿ 2022 ರಲ್ಲಿ, ಎಸ್. ಸೋಮನಾಥ್ ಅವರು ಇಸ್ರೋ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಎರಡು ವರ್ಷಗಳ ಅಧಿಕಾರಾವಧಿ ಇದೇ ತಿಂಗಳು 14ಕ್ಕೆ ಕೊನೆಗೊಳ್ಳಲಿದೆ. ಇಸ್ರೋ ಮುಖ್ಯಸ್ಥರಾಗುವ ಮೊದಲು, ಸೋಮನಾಥ್ ಅವರು ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ (ವಿಎಸ್‌ಎಸ್‌ಸಿ) ನಿರ್ದೇಶಕರಾಗಿದ್ದರು ಮತ್ತು ಇಸ್ರೋದ ಮುಖ್ಯ ವಿಜ್ಞಾನಿಯಾಗಿದ್ದರು.

ತಿರುವನಂತಪುರಂ ಮೂಲದ ವಿಎಸ್‌ಎಸ್‌ಸಿ ನಿರ್ದೇಶಕರಾಗಿದ್ದ ಎಸ್.ಸೋಮನಾಥ್ ಅವರು ದೇಶದ ಅತ್ಯುತ್ತಮ ರಾಕೆಟ್ ತಂತ್ರಜ್ಞ ಮತ್ತು ಏರೋಸ್ಪೇಸ್ ಎಂಜಿನಿಯರ್. VSSC ಮೊದಲು ಎಸ್. ಸೋಮನಾಥ್ ಅವರು ತಿರುವನಂತಪುರಂನಲ್ಲಿರುವ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್ (ಎಲ್‌ಪಿಎಸ್‌ಸಿ) ನಿರ್ದೇಶಕರೂ ಆಗಿದ್ದಾರೆ.

ಈ ಸುದ್ದಿಯನ್ನೂ ಓದಿ : ISRO missions: 2026ರಲ್ಲಿ ಗಗನಯಾನ, 2028ರಲ್ಲಿ ಚಂದ್ರಯಾನ-4; ಇಸ್ರೋದಿಂದ ಮಹತ್ವದ ಘೋಷಣೆ

Leave a Reply

Your email address will not be published. Required fields are marked *