Friday, 22nd November 2024

ಸುಗಂಧ ದ್ರವ್ಯ ಉದ್ಯಮಿ ಪುಷ್ಪರಾಜ್ ಜೈನ್’ಗೆ ಐಟಿ ಶಾಕ್

ಲಖನೌ: ಸಮಾಜವಾದಿ ಪಕ್ಷದ ಸುಗಂಧ ದ್ರವ್ಯ ‘ಸೆಂಟ್ ಆಫ್ ಸೋಶಿಯಲಿಸಂ’ ತಯಾರಕ ಪುಷ್ಪರಾಜ್ ಜೈನ್ ಅವರಿಗೆ ಸೇರಿದ ಹಲವು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿ ದ್ದಾರೆ.

ಉತ್ತರ ಪ್ರದೇಶ, ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್‌), ಮುಂಬೈ ಮತ್ತು ಇನ್ನಿತರ ಪ್ರದೇಶಗಳ ಸುಮಾರು 50 ಸ್ಥಳಗಳಲ್ಲಿ ತೆರಿಗೆ ವಂಚನೆ ಆರೋಪದ ಮೇಲೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪುಷ್ಪರಾಜ್‌ ಅವರು ಎಸ್‌ಪಿಯ ವಿಧಾನ ಪರಿಷತ್‌ ಸದಸ್ಯರು. 2022ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರು, ಪಕ್ಷದ ನಾಯಕ ಅಖಿಲೇಶ್ ಯಾದವ್‌ ಅವರ ನೇತೃತ್ವದಲ್ಲಿ ಕಳೆದ ತಿಂಗಳು ‘ಸೆಂಟ್ ಆಫ್ ಸೋಶಿಯಲಿಸಂ’ ಸುಗಂಧ ದ್ರವ್ಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು.

ಕನೌಜ್ ಮೂಲದ ‘ಮೊಹ‌ಮ್ಮದ್ ಯಾಕೂಬ್‌ ಸುಗಂಧ ದ್ರವ್ಯ’ ಕಚೇರಿಯಲ್ಲೂ ಬೆಳಿಗ್ಗೆ ಶೋಧ ನಡೆಸಲಾಗಿದೆ.

ಕಾರ್ಯಾಚರಣೆಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ವಿರುದ್ಧ ಕಿಡಿಕಾರಿರುವ ಎಸ್‌ಪಿ, ಕೇಂದ್ರದ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದೆ.

ಬಿಜೆಪಿಯ ಮಿತ್ರ ಆದಾಯ ತೆರಿಗೆ ಇಲಾಖೆಯು ಕೊನೆಗೂ ವಿಧಾನ ಪರಿಷತ್ ಸದಸ್ಯ ಪುಷ್ಪರಾಜ್‌ ಜೈನ್‌ ಮತ್ತು ಕನೌಜ್‌ನ ಇತರ ಸುಗಂಧ ದ್ರವ್ಯ ಉದ್ಯಮಿಗಳ ಮೇಲೆ ದಾಳಿ ನಡೆಸಿದೆ ಎಂದು ಟ್ವಿಟರ್‌ ಮೂಲಕ ಹರಿಹಾಯ್ದಿದೆ.

ಉದ್ಯಮಿ ಪಿಯೂಷ್ ಜೈನ್, ಎಸ್‌ಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಬಿಜೆಪಿಯ ಹಲವು ನಾಯಕರು ಚುನಾವಣಾ ರ‍್ಯಾಲಿ ವೇಳೆ ಆರೋಪಿಸಿದ್ದರು. ಆದರೆ, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅದನ್ನು ಅಲ್ಲಗಳೆದಿದ್ದರು.

ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ಎಸ್‌ಪಿ ಅಧಿಕಾರದಲ್ಲಿ ಇದ್ದಾಗ ಉತ್ತರ ಪ್ರದೇಶದ ತುಂಬೆಲ್ಲಾ ‘ಭ್ರಷ್ಟಾಚಾರದ ಪರಿಮಳ’ ಹರಡಿತ್ತು ಎಂದು ಕಿಡಿಕಾರಿದ್ದರು.

ಪುಷ್ಪರಾಜ್ ಮತ್ತು ಪಿಯೂಷ್ ಜೈನ್ ಇಬ್ಬರೂ ಸುಗಂಧ ದ್ರವ್ಯ ಉದ್ಯಮಿಗಳಾಗಿದ್ದು, ನೆರೆಹೊರೆಯವರೇ ಆಗಿದ್ದಾರೆ ಎಂಬುದು ವಿಶೇಷ.