Tuesday, 7th January 2025

Jallikattu: ತಮಿಳುನಾಡಿನಲ್ಲಿ ದೇಸಿ ಕ್ರೀಡೆ ಜಲ್ಲಿಕಟ್ಟು ಆರಂಭ… 459 ಗೂಳಿಗಳು, 236 ಸ್ಪರ್ಧಿಗಳು ಭಾಗಿ

jallikattu

ಚೆನ್ನೈ: ತಮಿಳುನಾಡಿನ(Tamil Nadu) ಪುದುಕ್ಕೊಟ್ಟೈ(Pudukkottai) ಜಿಲ್ಲೆಯ ಗಂಧರ್ವಕೊಟ್ಟೈ(Gandarvakottai) ಸಮೀಪದ ತಚ್ಚಂಕುರಿಚಿ ಗ್ರಾಮದಲ್ಲಿ ಪೊಂಗಲ್(ಸಂಕ್ರಾಂತಿ) ಹಬ್ಬದ ಪೂರ್ವಭಾವಿಯಾಗಿ ಸಾಂಪ್ರದಾಯಿಕ ದೇಸಿ ಕ್ರೀಡೆಯಾದ ಜಲ್ಲಿಕಟ್ಟು(Jallikattu) ಆರಂಭವಾಗಿದ್ದು,ಗೂಳಿ ಪಳಗಿಸುವ ಕ್ರೀಡೆಗೆ ಶನಿವಾರ(ಜ.4) ವಿದ್ಯುಕ್ತ ಚಾಲನೆ ದೊರೆತಿದೆ.

ಸಚಿವರಾದ ಎಸ್ ರೇಗುಪತಿ ಮತ್ತು ವಿ ಶಿವ ಮೆಯ್ಯನಾಥನ್ ಅವರು ಸ್ಪರ್ಧೆಯನ್ನು ಉದ್ಘಾಟಿಸಿದ್ದಾರೆ. ಬರೋಬ್ಬರಿ 4,500 ಪ್ರೇಕ್ಷಕರು, 459 ಗೂಳಿಗಳೊಂದಿಗೆ 236 ಗೂಳಿ ಪಳಗಿಸುವವರು ಆಕರ್ಷಕ ಲೈನ್ ಅಪ್ ಸ್ಪರ್ಧೆಯಲ್ಲಿ ಭಾಗವಹಿಸಿದರು. ಪುದುಕೊಟ್ಟೈ, ತಂಜಾವೂರು, ತಿರುಚ್ಚಿ, ಮಧುರೈ ಮತ್ತು ಶಿವಗಂಗಾ ಜಿಲ್ಲೆಗಳ ಗೂಳಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಮಧುರೈನ ಶ್ರೀಧರ್ ಅವರು 12 ಗೂಳಿಗಳನ್ನು ಯಶಸ್ವಿಯಾಗಿ ಪಳಗಿಸುವ ಮೂಲಕ ʼಬೆಸ್ಟ್ ಬುಲ್ ಟೇಮರ್ʼ ಆಗಿ ಹೊರಹೊಮ್ಮಿದರು. ಪಲ್ಸರ್‌ ಬೈಕ್‌ ಅನ್ನು ಬಹುಮಾನವಾಗಿ ಪಡೆದಿದ್ದು,ಸಮಾರೋಪ ಸಮಾರಂಭದಲ್ಲಿ ವಿತರಿಸಲಾಗುವುದು ಎಂದು ತಿಳಿದು ಬಂದಿದೆ.

ಕರುಂಗುಲಂನಿಂದ ವಿಜಿ ಎಂಬ ತೃತೀಯ ಲಿಂಗಿ ನೇತೃತ್ವದ 10 ಸದಸ್ಯರ ತಂಡ ತನ್ನ ಮೂರು ಜಲ್ಲಿಕಟ್ಟು ಗೂಳಿಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ತೃತೀಯ ಲಿಂಗಿ ವಿಜಿ ಅವರು ಮಾತನಾಡಿ, ”ನನಗೆ ಬಾಲ್ಯದಿಂದಲೂ ಜಲ್ಲಿಕಟ್ಟು ಬಗ್ಗೆ ಅಪಾರ ಒಲವು. ಇದು ನನ್ನ ಕುಟುಂಬದಲ್ಲಿ ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ. ನಾನು ಸದ್ಯಕ್ಕೆ ಏಳು ಜಲ್ಲಿಕಟ್ಟು ಗೂಳಿಗಳನ್ನು ಸಾಕಿದ್ದೇನೆ. ಅವು ರಾಜ್ಯಾದ್ಯಂತ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿವೆ.

ಸ್ಪರ್ಧೆಯ ವೇಳೆ 23 ಗೂಳಿ ಪಳಗಿಸುವವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಜಿಲ್ಲಾಧಿಕಾರಿ ಎಂ.ಅರುಣಾ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

ಜಲ್ಲಿಕಟ್ಟು ಇತಿಹಾಸ

ಜಲ್ಲಿಕಟ್ಟುವಿಗೆ 3500 ವರ್ಷಗಳ ಇತಿಹಾಸ ಇದೆ ಎನ್ನಲಾಗುತ್ತದೆ. ಮಧುರೈ, ನೀಲಗಿರಿಯಲ್ಲಿ ಲಭ್ಯವಾಗಿರುವ ಶಿಲಾಶಾಸನಗಳಲ್ಲಿ ಮನುಷ್ಯರು ಎತ್ತುಗಳನ್ನು ಓಡಿಸುವ ಚಿತ್ರದ ಕೆತ್ತನೆ ಕಾಣಬಹುದು. ತಮಿಳರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಗೂಳಿ ಪಳಗಿಸುವ ಜಲ್ಲಿಕಟ್ಟು ಅಪ್ಪಟ ದೇಸಿ ಕ್ರೀಡೆ. ಸಂಕ್ರಾತಿ (ಪೊಂಗಲ್‌) ಅಂದರೆ ರೈತರ, ಗೂಳಿಗಳ ಮಾಲೀಕರಲ್ಲಿ ಪುಳಕ. ಒಂದು ವರ್ಷದಿಂದ ಸನ್ನದ್ಧವಾಗುವ ಹೋರಿಗಳ ರೋಮಾಂಚನಕಾರಿ ಕಾಳಗವೊಂದು ಏರ್ಪಡುವುದರ ಜತೆಗೆ ಸಂಪ್ರದಾಯವೊಂದು ಅನಾವರಣಗೊಳ್ಳುತ್ತದೆ. ತಮಿಳುನಾಡಿನಲ್ಲಿ ಸಂಕ್ರಾಂತಿ ಅಥವಾ ಪೊಂಗಲ್‌ ಮೂರು ದಿನಗಳ ಆಚರಣೆಯಾಗಿದ್ದು, ಎರಡನೇ ದಿನ ಜಲ್ಲಿಕಟ್ಟು ನಡೆಯುತ್ತದೆ.

ಸ್ಪರ್ಧೆ ಏನು?

ಯಾವುದೇ ಆಯುಧ ಬಳಸದೆ, ಹುಚ್ಚೆದ್ದು ಓಡುವ ಗೂಳಿಗಳನ್ನು ಮುಂದಕ್ಕೆ ಹೋಗದಂತೆ ತಡೆಯುವುದೇ ಸ್ಪರ್ಧೆ. ಹಿಂದೆ ಹೋರಿಗಳ ಕುತ್ತಿಗೆಗೆ ಬೆಲೆಬಾಳುವ ವಸ್ತು ಅಥವಾ ಸರ ಕಟ್ಟಿ ಬಯಲಲ್ಲಿ ಬಿಡುತ್ತಿದ್ದರು. ಓಡುವ ಗೂಳಿಯನ್ನು ಹಿಡಿದು ಅದರ ಕುತ್ತಿಗೆಯಲ್ಲಿರುವ ಬೆಲೆ ಬಾಳುವ ವಸ್ತುವನ್ನು ಕಸಿದು ತರುವವರನ್ನುಸ್ಪರ್ಧೆ ವಿಜೇತರಾಗಿ ಘೋಷಿಸಲಾಗುತ್ತಿತ್ತು.

ಆರಂಭ ಹೇಗೆ ?

ಜಲ್ಲಿಕಟ್ಟು ಗೂಳಿ ಹಿಡಿಯುವ ಸ್ಪರ್ಧೆಯಾದರೂ, ಅದನ್ನು ಹಿಡಿಯವವನು ವೀರ ಎಂದು ಭಾವಿಸಲಾಗುತ್ತಿತ್ತು. ಹಾಗೆ ನೋಡಿದರೆ ಇದು ಯುವಕನ ಶಕ್ತಿ ಪ್ರದರ್ಶನವೂ ಹೌದು. ಒಂದು ರೀತಿಯ ಸ್ವಯಂವರ ಪರೀಕ್ಷೆ ಎಂದರೂ ತಪ್ಪಾಗದು. ಹಿಂದೆ ಜಲ್ಲಿಕಟ್ಟು ಗೂಳಿಯನ್ನು ಹಿಡಿದ ವೀರನೊಂದಿಗೆ ಹೆಣ್ಣು ಮಕ್ಕಳ ವಿವಾಹ ಮಾಡಿಸುವ ಕ್ರಮವಿತ್ತು.

ಈ ಸುದ್ದಿಯನ್ನೂ ಓದಿ:Shot Himself: ಶೌಚಾಲಯದಲ್ಲಿ ಗುಂಡು ಹಾರಿಸಿಕೊಂಡು CISF ಯೋಧ ಆತ್ಮಹತ್ಯೆ!