Monday, 6th January 2025

ಪೂಂಚ್‌ ಘಟನೆ ಮಾಸುವ ಮುನ್ನವೇ ಮತ್ತೊಂದು ಅಘಾತ; ಸೇನಾ ವಾಹನ ಅಪಘಾತಕ್ಕೀಡಾಗಿ ಇಬ್ಬರು ಯೋಧರು ಹುತಾತ್ಮ

Jammu & Kashmir

ಶ್ರೀನಗರ: ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಸೇನಾ ವಾಹನ ಅಪಘಾತವಾಗಿ ಐವರು ಯೋಧರು ಮೃತಪಟ್ಟಿದ್ದ ಘಟನೆ ಮಾಸುವ ಮುನ್ನವೇ ಇದೀಗ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರ ಜಿಲ್ಲೆಯಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಯೋಧರು (Indian Army) ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ರಸ್ತೆಯಿಂದ ಸ್ಕಿಡ್ ಆಗಿ ಈ ಅವಘಡ ಸಂಭವಿಸಿದೆ.

ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಗಾಯಗೊಂಡ ಸೈನಿಕರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಘಾತಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ.

ಡಿ. 25ರಂದು ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಸೇನಾ ವಾಹನ ಅಪಘಾತಕ್ಕೀಡಾಗಿ ಒಟ್ಟು ಐವರು ಯೋಧರು ಹುತಾತ್ಮರಾಗಿದ್ದರು. ಐವರ ಪೈಕಿ ನಾಲ್ವರು ಕರ್ನಾಟಕದವರಾಗಿದ್ದರು. ಘಟನೆಯಲ್ಲಿ 12 ಯೋಧರು ಗಾಯಗೊಂಡಿದ್ದರು. ಸೇನಾ ವಾಹನವು ಜಿಲ್ಲೆಯ ಬನೋಯ್‌ಗೆ ತೆರಳುತ್ತಿದ್ದಾಗ ಘರೋವಾ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿತ್ತು.

ನಿಲಂ ಪ್ರಧಾನ ಕಚೇರಿಯಿಂದ ಎಲ್‌ಒಸಿ ಮೂಲಕ ಬನೋಯ್ ಘರೋವಾ ಪೋಸ್ಟ್‌ಗೆ ತೆರಳುತ್ತಿದ್ದ 11 ಮರಾಠಾ ಲೈಟ್ ಇನ್‌ಫೆಂಟ್ರಿಯ ಸೇನಾ ವಾಹನವು ಅಪಘಾತಕ್ಕೀಡಾಗಿತ್ತು. ವಾಹನವು ಸುಮಾರು 150 ಅಡಿ ಆಳದ ಕಮರಿಗೆ ಬಿದ್ದಿದ್ದು ಐವರು ಸ್ಥಳದಲ್ಲಿಯೇ ಮೃತಪಟ್ಟಿದರು.

ಘಟನೆಯಲ್ಲಿ ಗಾಯಗೊಂಡಿದ್ದ ಕೊಡಗು ಮೂಲದ ಯೋಧ ದಿವಿನ್ (28) ಚಿಕಿತ್ಸೆ ಫಲಿಸದೆ ಡಿ. 30ರಂದು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ದಿವಿನ್ ಅವರನ್ನು ಶ್ರೀನಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ಗ್ರಾಮದ ಯೋಧ ದಿವಿನ್, ತಂದೆ ತಾಯಿಗೆ ಏಕೈಕ ಮಗನಾಗಿದ್ದು, 10 ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು. ದಿವಿನ್ ಅವರಿಗೆ ಇತ್ತೀಚಿಗೆ ಕೊಡಗು ಮೂಲದ ಯುವತಿ ಜತೆ ಮದುವೆಗೆ ದಿನಾಂಕ ಕೂಡ ನಿಗದಿಯಾಗಿತ್ತು.

ಈ ಸುದ್ದಿಯನ್ನೂ ಓದಿ: Jammu&Kashmir : ಸೇನಾ ವಾಹನ ಕಮರಿಗೆ ಉರುಳಿ, ಜವಾನ ಸಾವು, 6 ಮಂದಿಗೆ ಗಾಯ