ರಾಂಚಿ: ಲಿವ್ ಇನ್ ರಿಲೇಶನ್ಶಿಪ್ನಲ್ಲಿನಲ್ಲಿದ್ದ ಗೆಳತಿ ಮೇಲೆ ಅತ್ಯಾಚಾರ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿ ದೇಹವನ್ನು 40 ತುಂಡುಗಳಾಗಿ ಕತ್ತರಿಸಿ ಪಾಗಲ್ ಪ್ರೇಮಿಯೋರ್ವ ಅರಣ್ಯ ಪ್ರದೇಶದಲ್ಲಿ ಎಸೆದಿರುವ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. ಜಾರ್ಖಂಡ್ನಲ್ಲಿ ಈ ಅಮಾನುಷ ಘಟನೆ ನಡೆದಿದ್ದು (Jharkhand Horror) ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತ ಆರೋಪಿಯನ್ನು ಜಾರ್ಖಂಡ್ನ ಖುಂಟಿ ಜಿಲ್ಲೆಯ ನರೇಶ್ ಭೆಂಗ್ರಾ ಎಂದು ಗುರುತಿಸಲಾಗಿದೆ. ಈತ ತಮಿಳುನಾಡಿನ ಕೋಳಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಏನಿದು ಘಟನೆ?
ಕಳೆದ ಎರಡು ವರ್ಷಗಳಿಂದ ತಮಿಳುನಾಡಿನಲ್ಲಿ ವಾಸವಿದ್ದ ಆರೋಪಿ ಅಲ್ಲಿಯ ಯುವತಿಯೊಬ್ಬಳ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದ. ಅದೇ ಸಮಯದಲ್ಲಿ ಜಾರ್ಖಂಡ್ನಲ್ಲಿ ಒಬ್ಬಳನ್ನು ಮದುವೆಯಾಗಿದ್ದ. ಪ್ರೇಯಸಿ ಬಳಿ ತನಗೆ ಮದುವೆಯಾಗಿರುವ ವಿಷಯವನ್ನು ಮುಚ್ಚಿಟ್ಟಿದ್ದ. ಇತ್ತೀಚೆಗೆ ಯುವತಿ ತನ್ನನ್ನು ಜಾರ್ಖಂಡ್ಗೆ ಕರೆದೊಯ್ಯಲು ತಿಳಿಸಿದ್ದಳು. ನಂತರ ಇಬ್ಬರೂ ರೈಲು ಹತ್ತಿ ಜಾರ್ಖಂಡ್ ತಲುಪಿದ್ದರು. ತನ್ನ ಪತ್ನಿಯಿರುವ ಪ್ರದೇಶಕ್ಕೆ ಪ್ರೇಯಸಿಯನ್ನು ಕರೆದೊಯ್ಯಲು ಆತನಿಗೆ ಇಷ್ಟವಿಲ್ಲದ ಕಾರಣ ಜರಿಯಾಗಢ ಪೊಲೀಸ್ ಠಾಣೆಯ ಜೋರ್ದಾಗ್ ಗ್ರಾಮದ ತನ್ನ ಮನೆಯ ಸಮೀಪವಿರುವ ಕಾಡಿಗೆ ಆಕೆಯನ್ನು ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ನಂತರ ಆಕೆಯ ದುಪ್ಪಟ್ಟಾದಿಂದ ಕತ್ತು ಹಿಸುಕಿ ಕೊಲೆ ಮಾಡಿ, ದೇಹವನ್ನು 40 ತುಂಡುಗಳಾಗಿ ಕತ್ತರಿಸಿ ಕಾಡಿಗೆ ಎಸೆದಿದ್ದಾನೆ. ನಂತರ ತನ್ನ ಪತ್ನಿ ಇರುವ ಜಾಗಕ್ಕೆ ತೆರಳಿದ್ದಾನೆ.
ಘಟನೆಯಾದ 15 ದಿನದ ನಂತರ ನವೆಂಬರ್ 24 ರಂದು ಜರಿಯಾಗಢ ಪೊಲೀಸ್ ಠಾಣೆಯ ಜೋರ್ದಾಗ್ ಗ್ರಾಮದ ಬಳಿ ಬೀದಿ ನಾಯಿಯೊಂದು ಮಾನವ ದೇಹದ ಭಾಗಗಳೊಂದಿಗೆ ಪತ್ತೆಯಾದಾಗ ಹತ್ಯೆ ವಿಷಯ ಬೆಳಕಿಗೆ ಬಂದಿದೆ. ಕೊಲೆಯಾದ ಮಹಿಳೆ ತನ್ನ ತಾಯಿಗೆ ಕರೆ ಮಾಡಿ ಸಂಗಾತಿಯ ಜೊತೆ ಜಾರ್ಖಂಡ್ಗೆ ತೆರಳುವುದಾಗಿ ಹೇಳಿದ್ದರು. ಕೊಲೆಯಾದ ಸ್ಥಳದಲ್ಲಿ ಆಕೆಯ ಬ್ಯಾಗ್, ಆಧಾರ್ ಕಾರ್ಡ್ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ. ಮಹಿಳೆಯ ತಾಯಿಯನ್ನು ಸ್ಥಳಕ್ಕೆ ಕರೆಸಿದಾಗ ಅವರು ತಮ್ಮ ಮಗಳ ವಸ್ತುಗಳನ್ನು ಗುರುತಿಸಿದ್ದಾರೆ. ಮಹಿಳೆಯ ತಾಯಿ ನೀಡಿದ ಹೇಳಿಕೆಯ ಮೇರೆಗೆ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ವಿಚಾರಣೆಯಲ್ಲಿ ಆತ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ತನ್ನ ಪತ್ನಿಗೆ ತಾನು ಇನ್ನೊಬ್ಬಳ ಜೊತೆ ಸಂಬಂಧದಲ್ಲಿ ಇರುವುದು ತಿಳಿಯುವುದು ಇಷ್ಟವಿರಲಿಲ್ಲ. ಮೃತ ಮಹಿಳೆ ತನ್ನನ್ನು ಜಾರ್ಖಂಡ್ಗೆ ಕರೆದೊಯ್ಯುವಂತೆ ಪದೇ ಪದೇ ಪೀಡಿಸುತ್ತಿದ್ದಳು. ಇದರಿಂದ ಕೊಲೆ ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ.
ಪ್ರಕರಣದ ತನಿಖೆ ನಡೆಸಿದ ಇನ್ಸ್ಪೆಕ್ಟರ್ ಅಶೋಕ್ ಸಿಂಗ್ ಅವರು ಆರೋಪಿ ತಮಿಳುನಾಡಿನ ಮಾಂಸದಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಕೋಳಿಯನ್ನು ಕತ್ತರಿಸುವುದರಲ್ಲಿ ನಿಪುಣನಾಗಿದ್ದ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : Viral Video: ದಲಿತ ಯುವಕನನ್ನು ಅಮಾನುಷವಾಗಿ ಥಳಿಸಿ ಬರ್ಬರ ಹತ್ಯೆ…ಘೋರ ದೃಶ್ಯ ಕ್ಯಾಮರಾದಲ್ಲಿ ಸೆರೆ!