Thursday, 19th September 2024

JK Election: ʼಕಲ್ಲು ತೂರಾಟಗಾರರು ಜೈಲಿನಿಂದ ರಿಲೀಸ್‌ʼ- ಜೆಡಿಯು ಪ್ರಣಾಳಿಕೆಯಲ್ಲಿ ಅಚ್ಚರಿಯ ಭರವಸೆ; ಬಿಜೆಪಿಗೆ ಶಾಕ್‌!

JK election

ಶ್ರೀನಗರ: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ಪ್ರಮುಖ ಮಿತ್ರ ಪಕ್ಷವಾಗಿರುವ ಜನತಾ ದಳ (ಯುನೈಟೆಡ್) ಜಮ್ಮು ಮತ್ತು ಕಾಶ್ಮೀರ(JK Election)ದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ(Assembly Election)ಯ ಪ್ರಣಾಳಿಕೆಯಲ್ಲಿ ಅಚ್ಚರಿಯ ಭರವಸೆಯೊಂದನ್ನು ಘೊಷಿಸಿದೆ. ಕಣಿವೆ ರಾಜ್ಯದಲ್ಲಿ ಕಲ್ಲು ತೂರಾಟಗಾರರು ಮತ್ತು ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಪ್ರಣಾಳಿಕೆ(JDU Manifesto)ಯಲ್ಲಿ ಭರವಸೆ ನೀಡಿದೆ.

ಸೆಪ್ಟೆಂಬರ್ 18 ರಂದು ನಡೆಯಲಿರುವ ಮೊದಲ ಹಂತದ ಮತದಾನಕ್ಕೆ ಪಕ್ಷವು ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದೀಗ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿರುವ ಜೆಡಿಯು ಪಕ್ಷದ ಪ್ರಮುಕ ಭರವಸೆಯೊಂದು ಬಿಜೆಪಿಯ ಹುಬ್ಬೇರುವಂತೆ ಮಾಡಿದೆ. ಪ್ರಕರಣಗಳನ್ನು ಪರಿಶೀಲಿಸಿ ಮತ್ತು ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸಲು ರಾಜಕೀಯ ಕೈದಿಗಳು ಮತ್ತು ಕಲ್ಲು ತೂರಾಟಗಾರರ ಬಿಡುಗಡೆ ಮಾಡುವುದಾಗಿ ಜೆಡಿ(ಯು) ಭರವಸೆ ನೀಡಿದೆ.

ಪಕ್ಷದ ರಾಜ್ಯ ಘಟಕವು ಕಲ್ಲು ತೂರಾಟಗಾರರ ಪ್ರಕರಣಗಳನ್ನು ಪರಿಶೀಲಿಸಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ. ಕಣಿವೆಯ ವಿವಿಧ ಭಾಗಗಳ 840 ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಅನೇಕರ ಬಗ್ಗೆ ನಮಗೆ ಮಾಹಿತಿ ಇದೆ. ಅನೇಕ ವರ್ಷಗಳಿಂದ ಅವರು ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ಅಥವಾ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಅಧಿಕಾರದಲ್ಲಿದ್ದಾಗ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜೆಡಿಯು ರಾಜ್ಯ ಅಧ್ಯಕ್ಷ ಜಿಎಂ ಶಾಹೀನ್ ಹೇಳಿದ್ದಾರೆ. ಹಿಂದಿನ ಸರ್ಕಾರಗಳು ಹಣಕ್ಕಾಗಿ ಯುವಕರನ್ನು ಬಂಧಿಸುವಲ್ಲಿ ತೊಡಗಿದ್ದವು. ಹೀಗಾಗಿ ಆ ಪ್ರಕರಣಗಳನ್ನು ಮರು ಪರಿಶೀಲನೆ ನಡೆಸಬೇಕಾದ ಅಗತ್ಯತೆ ಇದೆ ಎಂದು ಹೇಳಿದ್ದಾರೆ.

ಬಿಜೆಪಿ ವಿರುದ್ಧ ಜೆಡಿಯು ನಿಲ್ಲಲು ಹೇಗೆ ಸಾಧ್ಯ?

ಇನ್ನು ಕಣಿವೆ ರಾಜ್ಯದಲ್ಲಿ ಕಲ್ಲು ತೂರಾಟ ನಡೆಸುವವರ ವಿರುದ್ಧ ಕೆಂದ್ರ ಸರ್ಕಾರ ಕಟ್ಟುನಿಟ್ಟಾದ ಕ್ರಮಕ್ಕೆ ಮುಂದಾಗಿದೆ. ಹೀಗಿರುವಾಗ ತನ್ನದೇ ಮಿತ್ರಪಕ್ಷ ಜೆಡಿಯು ಇದಕ್ಕೆ ತದ್ವಿರುದ್ಧವಾದ್‌ ಘೋಷಣೆ ಹೊರಡಿಸಿರುವುದು ಬಿಜೆಪಿಗೆ  ಬಹುದೊಡ್ಡ ಮಟ್ಟದಲ್ಲಿ ಮುಜುಗರಕ್ಕೀಡುಮಾಡಿದೆ. ಇತ್ತೀಚೆಗೆ ಬಿಡುಗಡೆಯಾದ ಪಕ್ಷದ ಪ್ರಣಾಳಿಕೆಯಲ್ಲಿ, ಜನತಾ ದಳ (ಯುನೈಟೆಡ್) ಜಮ್ಮು ಮತ್ತು ಕಾಶ್ಮೀರವನ್ನು ಪ್ರಮುಖ ರಾಜ್ಯವಾಗಿ ಪರಿವರ್ತಿಸಲು ಬದ್ಧವಾಗಿದೆ, ಅದರ ಎಲ್ಲಾ ನಿವಾಸಿಗಳಿಗೆ ಸಮೃದ್ಧಿ ಮತ್ತು ಘನತೆಯನ್ನು ಖಾತ್ರಿಪಡಿಸುತ್ತದೆ. “ನಮ್ಮ ಪ್ರಣಾಳಿಕೆಯು ಜಮ್ಮು ಮತ್ತು ಕಾಶ್ಮೀರದ ಜನರ ಆಕಾಂಕ್ಷೆಗಳು ಮತ್ತು ಸ್ವಾಭಿಮಾನವನ್ನು ಪುನಃಸ್ಥಾಪಿಸುವ ನಮ್ಮ ಭರವಸೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಪಕ್ಷ ಹೇಳಿದೆ.

ಈ ಬಾರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಮತ್ತು ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟದ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಸೀಟು ಹಂಚಿಕೆಯಲ್ಲಿ ಇನ್ನೂ ಭಿನ್ನಾಭಿಪ್ರಾಯಗಳನ್ನು ಹೊರಹಾಕಿಲ್ಲ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ (Mehbooba Mufti) ನೇತೃತ್ವದ ಪಿಡಿಪಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ವಿಧಾನಸಭೆ ಚುನಾವಣೆಯಲ್ಲಿ ಪಿಡಿಪಿ ಅಧಿಕಾರಕ್ಕೆ ಬಂದರೆ ಉಚಿತ 200 ಯೂನಿಟ್ ವಿದ್ಯುತ್ (Free Electricity) ನೀಡುವುದಾಗಿ ಮತ್ತು ಹಳೆಯ ಪಿಂಚಣಿ ಯೋಜನೆ ಯನ್ನು ಜಾರಿಗೊಳಿಸುವುದಾಗಿ ಘೋಷಿಸಿದೆ.