ಹೊಸದಿಲ್ಲಿ: ಭಾರತೀಯ ನೌಕಾಪಡೆಯು ಬುಧವಾರ (ನ. 27) ಇತ್ತೀಚೆಗಷ್ಟೇ ಸೇರ್ಪಡೆಗೊಂಡ ಭಾರತದ ಜಲಾಂತರ್ಗಾಮಿ ನೌಕೆ ಐಎನ್ಎಸ್ ಅರಿಘಾಟ್ (INS Arighaat)ನಿಂದ 3,500 ಕಿ.ಮೀ. ವ್ಯಾಪ್ತಿಯ ಪರಮಾಣು ಸಾಮರ್ಥ್ಯದ ಕೆ-4 ಬ್ಯಾಲಿಸ್ಟಿಕ್ ಕ್ಷಿಪಣಿ (K-4 Ballistic Missile)ಯನ್ನು ವಿಶಾಖಪಟ್ಟಣಂ ಕರಾವಳಿಯಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಬಂಗಾಳ ಕೊಲ್ಲಿಯಲ್ಲಿ ನಡೆಸಲಾದ ಈ ಪರೀಕ್ಷೆಯು ಭಾರತದ ರಕ್ಷಣಾ ಸಾಮರ್ಥ್ಯಗಳಲ್ಲಿ ಮಹತ್ವದ ಮೈಲಿಗಲ್ಲು ಎಂದೇ ವಿಶ್ಲೇಷಿಸಲಾಗುತ್ತಿದೆ.
”ಪರೀಕ್ಷಾ ಫಲಿತಾಂಶಗಳನ್ನು ವಿಶ್ಲೇಷಿಸಲಾಗುತ್ತಿದೆ. ನಂತರ ಸಂಬಂಧಿಸಿದ ಅಧಿಕಾರಿಗಳು ಉನ್ನತ ಮಿಲಿಟರಿ ಮತ್ತು ರಾಜಕೀಯ ನಾಯಕರಿಗೆ ಮಾಹಿತಿ ನೀಡಲಿದ್ದಾರೆ” ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ. ಭಾರತದ ಪರಮಾಣು ಶಕ್ತಿಯನ್ನು ಬಲಪಡಿಸಲು, ಪರಮಾಣು ದಾಳಿಯ ಸಂದರ್ಭದಲ್ಲಿ ದೇಶದ ಸಾಮರ್ಥ್ಯವನ್ನು ಹೆಚ್ಚಿಸಲು ಈ ಪ್ರಯೋಗವು ನಿರ್ಣಾಯಕವಾಗಿದೆ ಎನ್ನಲಾಗಿದೆ.
🚨Breaking News :
— 🇮🇳Tanmay Kulkarni🇮🇳 (@Tanmaycoolkarni) November 28, 2024
The Indian Navy successfully tested a 'K-4', 3,500-km range nuclear-capable submarine-launched ballistic missile (SLBM) on Wednesday.
The test was conducted from the newly commissioned nuclear-powered SSBN submarine, INS Arighaat. 🇮🇳⚓ #K4 #INSArighaat pic.twitter.com/hxmtR5834i
ನೀರೊಳಗಿನಿಂದ ಉಡಾಯಿಸಲು ವಿನ್ಯಾಸಗೊಳಿಸಲಾದ ಕೆ -4 ಬ್ಯಾಲಿಸ್ಟಿಕ್ ಕ್ಷಿಪಣಿ ಭಾರತದ ಶಸ್ತ್ರಾಗಾರದಲ್ಲಿ ಪ್ರಮುಖ ಆಯುಧ ಎನಿಸಿಕೊಳ್ಳಲಿದೆ. ನೌಕಾಪಡೆಯು ಇನ್ನು ಕ್ಷಿಪಣಿ ವ್ಯವಸ್ಥೆಯ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಿದೆ.
ಈ ಯಶಸ್ವಿ ಪರೀಕ್ಷೆಯು 2024ರ ಆಗಸ್ಟ್ನಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾದ ಐಎನ್ಎಸ್ ಅರಿಘಾಟ್ನ ಕಾರ್ಯಾಚರಣೆಯನ್ನು ಹೆಚ್ಚಿಸಲಿದೆ. ಈ ಜಲಾಂತರ್ಗಾಮಿ ನೌಕೆ ಐಎನ್ಎಸ್ ಅರಿಘಾಟ್ ಈ ಹಿಂದಿನ ಐಎನ್ಎಸ್ ಅರಿಹಂತ್ (INS Arighaat)ಗಿಂತ ಶಕ್ತಿಶಾಲಿ ಕ್ಷಿಪಣಿ ವ್ಯವಸ್ಥೆ ಸೇರಿದಂತೆ ಸುಧಾರಿತ ತಂತ್ರಜ್ಞಾನವನ್ನು ಹೊಂದಿದೆ.
ವೈಶಿಷ್ಟ್ಯ
ಐಎನ್ಎಸ್ ಅರಿಘಾಟ್ ಕೆ -4 ಕ್ಷಿಪಣಿಯನ್ನು ಹೊಂದಿದ್ದು, 3,500 ಕಿ.ಮೀ. ದೂರದಲ್ಲಿರುವ ಗುರಿಗಳನ್ನು ಹೊಡೆಯುವ ಸಾಮರ್ಥ್ಯ ಇದೆ. ಇದು ಐಎನ್ಎಸ್ ಅರಿಹಂತ್ನ ಕೆ -15 ಕ್ಷಿಪಣಿಗಳ ವ್ಯಾಪ್ತಿಯನ್ನೂ ಮೀರಿಸುತ್ತದೆ. ಅರಿಹಂತ್ ಸುಮಾರು 750 ಕಿ.ಮೀ. ದಾಳಿ ವ್ಯಾಪ್ತಿಯನ್ನು ಹೊಂದಿದೆ. ಐಎನ್ಎಸ್ ಅರಿಘಾಟ್ ದೇಶದ ರಕ್ಷಣಾ ಕ್ಷೇತ್ರಕ್ಕೆ ಇನ್ನಷ್ಟು ಶಕ್ತಿಯನ್ನು ತುಂಬಲಿದೆ.
ಭಾರತದ ಪರಮಾಣು ಜಲಾಂತರ್ಗಾಮಿ ನೌಕೆ
ಭಾರತದ ಪರಮಾಣು ಜಲಾಂತರ್ಗಾಮಿ ನೌಕಾಪಡೆಯಾದ ಐಎನ್ಎಸ್ ಅರಿಹಂತ್ ಮೊದಲ ದೇಶೀಯ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆಯನ್ನು ಒಳಗೊಂಡಿದೆ. ಇದನ್ನು 2018ರಲ್ಲಿ ಸೇರ್ಪಡೆಗೊಳಿಸಲಾಯಿತು. ಇದೀಗ 3ನೇ ನೌಕೆ ಸಿದ್ದವಾಗುತ್ತಿದ್ದು, ಮುಂದಿನ ವರ್ಷ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ. ಆ ಮೂಲಕ ರಾಷ್ಟ್ರದ ಪ್ರತಿರೋಧ ಸಾಮರ್ಥ್ಯವನ್ನು ಮತ್ತಷ್ಟು ಎತ್ತರಕ್ಕೆ ಏರಿಸಲಿದೆ.
ಐಎನ್ಎಸ್ ಅರಿಘಾಟ್ ಅನ್ನು ದೇಶಕ್ಕಾಗಿ ಸಮರ್ಪಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಈ ಜಲಾಂತರ್ಗಾಮಿ ನೌಕೆಯು ಭಾರತದ ತಾಂತ್ರಿಕ ಪರಾಕ್ರಮ ಮತ್ತು ಸರ್ಕಾರದ ‘ಆತ್ಮನಿರ್ಭರ’ಕ್ಕೆ ಸಾಕ್ಷಿ ಎಂದು ಒತ್ತಿ ಹೇಳಿದ್ದರು. ಐಎನ್ಎಸ್ ಅರಿಘಾಟ್ ತಯಾರಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗಿದೆ. ಇದಕ್ಕಾಗಿ ಹಲವು ವರ್ಷಗಳ ಸಂಶೋಧನೆಯನ್ನೂ ನಡೆಸಲಾಗಿದೆ. ನುರಿತ ಕಾರ್ಮಿಕರು ಇದಕ್ಕಾಗಿ ಶ್ರಮಿಸಿದ್ದಾರೆ. ಇದು ಭಾರತೀಯ ವಿಜ್ಞಾನಿಗಳು, ಕೈಗಾರಿಕಾ ಮತ್ತು ನೌಕಾ ಸಿಬ್ಬಂದಿಯ ಪರಿಕಲ್ಪನೆ, ವಿನ್ಯಾಸ ಮತ್ತು ಸಂಯೋಜಿಸಲ್ಪಟ್ಟ ದೇಶೀಯ ವ್ಯವಸ್ಥೆಗಳು ಮತ್ತು ಉಪಕರಣಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಸುದ್ದಿಯನ್ನೂ ಓದಿ: Hypersonic Missile: ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ