ಚೆನ್ನೈ: ನಟ ಹಾಗೂ ಮಕ್ಕಳ ನೀತಿ ಮಯ್ಯಂ ಪಕ್ಷದ ಮುಖಂಡ ಕಮಲ್ ಹಾಸನ್ ಶುಕ್ರವಾರ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಪ್ರಮುಖವಾಗಿ ಗೃಹಿಣಿಯರ ಕೌಶಲ್ಯವನ್ನು ಗೌರವಿಸುವ ಮೂಲಕ ಆದಾಯದ ಗಳಿಕೆಯ ಭರವಸೆ ನೀಡಿದ್ದಾರೆ.
ಕೌಶಲ್ಯ ಅಭಿವೃದ್ಧಿಯಂಥ ಯೋಜನೆಗಳಿಂದ ಮಹಿಳೆಯರು ತಿಂಗಳಿಗೆ ಹತ್ತರಿಂದ ಹದಿನೈದು ಸಾವಿರದವರೆಗೂ ದುಡಿಯ ಬಹುದು. ಹೀಗಾಗಿಯೇ “ಗೃಹಿಣಿಯರಿಗೆ ಸಂಬಳ” ಎಂದು ಕರೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕಮಲ್ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ತಮ್ಮ ಆಸ್ತಿಘೋಷಣೆ ಮಾಡಿದ್ದು, ಅವರ ಬಳಿ ಒಟ್ಟಾರೆ 176.9 ಕೋಟಿ ರೂ ಆಸ್ತಿಯಿದೆ ಎಂದು ಘೋಷಿಸಿದ್ದಾರೆ. ಇದರಲ್ಲಿ ಚರಾಸ್ತಿ 45 ಕೋಟಿ ರೂ ಹಾಗೂ ಸ್ಥಿರಾಸ್ತಿ 131.8 ಕೋಟಿ ರೂ ಇದೆ.
ತಮಿಳುನಾಡಿನಲ್ಲಿ ಚುನಾವಣಾ ಕಣದಲ್ಲಿರುವ ಇತರ ಪಕ್ಷಗಳಾದ ಎಐಎಡಿಎಂಕೆ ಹಾಗೂ ಡಿಎಂಕೆ ಕೂಡ ತಮ್ಮ ಪ್ರಣಾಳಿಕೆ ಯಲ್ಲಿ ಗೃಹಿಣಿಯರಿಗೆ 1000ದಿಂದ 1500ರೂವರೆಗೂ ನೆರವು ನೀಡುವುದಾಗಿ ಘೋಷಿಸಿತ್ತು. 234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗವು ಪ್ರಕಟಿಸಿದೆ.
ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.