ಕೋಲ್ಕತ್ತಾ: ದೇಶವನ್ನೇ ಬೆಚ್ಚಿ ಬೀಳಿಸಿದ ಪಶ್ಚಿಮ ಬಂಗಾಳದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (R.G. Kar Medical College and Hospital)ಯಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ (Supreme Court)ನಲ್ಲಿ ನಡೆಯುತ್ತಿದೆ. ಈ ಮಧ್ಯೆ ವಿಚಾರಣೆಯ ನೇರ ಪ್ರಸಾರಕ್ಕೆ ಪಶ್ಚಿಮ ಬಂಗಾಳ ಸರ್ಕಾರ ಪರ ವಕೀಲ ಕಪಿಲ್ ಸಿಬಲ್ (Kapil Sibal) ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ನೇರ ಪ್ರಸಾರದಿಂದಾಗಿ 5 ದಶಕಗಳ ಗೌರವಕ್ಕೆ ಚ್ಯುತಿ ಬರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಲೈವ್ ಅನ್ನು ಕೂಡಲೇ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಅನ್ನು ಒತ್ತಾಯಿಸಿದ ಸಿಬಲ್, ಇದು ವಕೀಲರ ಪ್ರತಿಷ್ಠೆಗೆ ಕಳಂಕ ತರಲಿದೆ. ಮಾತ್ರವಲ್ಲ ಅವರ ಸುರಕ್ಷತೆ ಮೇಲೂ ಪರಿಣಾಮ ಬೀರಲಿದೆ ಎಂದಿದ್ದಾರೆ.
#WATCH | Wes Bengal: Junior Doctors stage protest against the rape and murder of a woman resident doctor at Kolkata's RG Kar Medical College and Hospital, in Kolkata pic.twitter.com/9fQd26rdEb
— ANI (@ANI) September 15, 2024
ಆರೋಪಿಗಳ ಪರ ವಾದಿಸದಿದ್ದರೂ ಬೆದರಿಕೆ ಕರೆಗಳು ಬರುತ್ತಿವೆ ಎಂದು ಸಿಬಲ್ ಹೇಳಿದ್ದಾರೆ. ತಮ್ಮ ಜತೆಗಿರುವ ಮಹಿಳಾ ವಕೀಲರೊಬ್ಬರಿಗೆ ಅತ್ಯಾಚಾರ ಬೆದರಿಕೆಯ ಕರೆ ಬಂದಿದೆ ಎಂದು ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. “ಭಾವನಾತ್ಮಕ ಪರಿಣಾಮ ಬೀರುವಂತಹ ಇಂತಹ ಪ್ರಕರಣಗಳನ್ನು ನೇರ ಪ್ರಸಾರ ಮಾಡುವುದು ಅಪಾಯಕಾರಿಯಾಗಿ ಪರಿಣಮಿಸಬಹುದು. ಇದರಿಂದ ನಾವು 50 ವರ್ಷಗಳ ಖ್ಯಾತಿಯನ್ನು ಪಣಕ್ಕಿಟ್ಟಂತಾಗುತ್ತದೆ. ನಾವು ಆರೋಪಿಗಳನ್ನು ಪ್ರತಿನಿಧಿಸುತ್ತಿಲ್ಲ. ಆದರೂ ಬೆದರಿಕೆಗಳು ಬರುತ್ತಿವೆʼʼ ಎಂದು ಕಪಿಲ್ ಸಿಬಲ್ ತಿಳಿಸಿದ್ದಾರೆ.
ಕೋರ್ಟ್ ಹೇಳಿದ್ದೇನು?
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಸಾರ್ವಜನಿಕ ಹಿತಾಸಕ್ತಿಯ ಅಂಶವನ್ನು ಒತ್ತಿ ಹೇಳಿತು. ನ್ಯಾಯಾಲಯವು ಮುಕ್ತವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಮರ್ಥಿಸಿಕೊಂಡಿತು. ನ್ಯಾಯಾಲಯವು ಇಂತಹ ಬೆದರಿಕೆಗಳ ವಿರುದ್ದ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದೆ ಆದರೆ ಪ್ರಕರಣದ ನೇರ ಪ್ರಸಾರವನ್ನು ನಿಲ್ಲಿಸಲು ನಿರಾಕರಿಸಿದೆ.
ಸಿಬಿಐಗೆ ಸೂಚನೆ
ಕೋಲ್ಕತಾ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ವಿಧಿವಿಜ್ಞಾನ ವರದಿಯ ಬಗ್ಗೆ ಅನುಮಾನ ಮೂಡಿದ್ದರಿಂದ ಹೊಸ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಕೇಂದ್ರ ತನಿಖಾ ದಳಕ್ಕೆ (CBI) ಸೂಚನೆ ನೀಡಿದೆ. ಅದರಂತ ಮಂಗಳವಾರ ಸಿಬಿಐ ತನಿಖೆಯ ಪ್ರಗತಿಯ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಗೌಪ್ಯ ಮಾಹಿತಿ ನೀಡಿದೆ. ಅತ್ಯಾಚಾರ ಮತ್ತು ಕೊಲೆಯ ತನಿಖೆಯ ಜತೆಗೆ ಆರ್ಥಿಕ ಅವ್ಯವಹಾರದ ಪ್ರಕರಣದಲ್ಲಿಯೂ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಇತರರ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದೆ.
ಹಿಂದಿನ ವಿಚಾರಣೆ ವೇಳೆ ಸಿಬಿಐ ಅನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಹೆಚ್ಚಿನ ವಿಶ್ಲೇಷಣೆಗಾಗಿ ಮಾದರಿಗಳನ್ನು ದಿಲ್ಲಿಯ ಏಮ್ಸ್ ಮತ್ತು ಇತರ ವಿಧಿವಿಜ್ಞಾನ ಪ್ರಯೋಗಾಲಯಗಳಿಗೆ ಕಳುಹಿಸುವ ಯೋಜನೆಗಳನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.
“ನಮ್ಮ ಬಳಿ ಇರುವ ವಿಧಿವಿಜ್ಞಾನ ವರದಿ ಪ್ರಕಾರ ಮತ್ತು ಬೆಳಿಗ್ಗೆ 9: 30ಕ್ಕೆ ಯುವತಿ ಪತ್ತೆಯಾದಾಗ ಜೀನ್ಸ್ ಮತ್ತು ಒಳ ಉಡುಪುಗಳನ್ನು ಪಕ್ಕದಲ್ಲೇ ಬಿದ್ದಿರುವುದನ್ನು ದೃಢಪಡಿಸಿದೆ. ಗಾಯದೊಂದಿಗೆ ಅವರು ಅರೆನಗ್ನಾವಸ್ಥೆಯಲ್ಲಿ ಪತ್ತೆಯಾಗಿದ್ದರು. ಮಾದರಿಗಳನ್ನು ಸಂಗ್ರಹಿಸಿ ಪಶ್ಚಿಮ ಬಂಗಾಳದ ಸಿಎಫ್ಎಸ್ಎಲ್ (Central Forensic Science Lab)ಗೆ ಕಳುಹಿಸಲಾಗಿತ್ತು. ಆದರೆ ಫಲಿತಾಂಶದಲ್ಲಿ ಗೊಂದಲ ಮೂಡಿರುವುದರಿಂದ ದಿಲ್ಲಿ ಏಮ್ಸ್ ಮತ್ತು ಮತ್ತೊಂದು ಪ್ರಯೋಗಾಲಯಕ್ಕೆ ಕಳುಹಿಸಲು ಸಿಬಿಐ ನಿರ್ಧರಿಸಿದೆʼʼ ಎಂದು ತುಷಾರ್ ಮೆಹ್ತಾ ತಿಳಿಸಿದ್ದರು.
ಇತ್ತೀಚಿನ ಸಿಬಿಐ ವರದಿಯನ್ನು ಪರಿಶೀಲಿಸಿದ ನಂತರ ನ್ಯಾಯಾಲಯವು ನಡೆಯುತ್ತಿರುವ ತನಿಖೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. ವಿವರಗಳನ್ನು ಬಹಿರಂಗಪಡಿಸುವುದು ಪ್ರಕ್ರಿಯೆಗೆ ಅಡ್ಡಿಯಾಗಬಹುದು ಎಂದು ಒತ್ತಿಹೇಳಿದೆ.
ಈ ಸುದ್ದಿಯನ್ನೂ ಓದಿ: Kolkata doctors protest: ಡಾಕ್ಟರ್ಸ್ ಡಿಮ್ಯಾಂಡ್‌ಗೆ ಮಣಿದ ದೀದಿ; ಕಮಿಷನರ್ ಸೇರಿ ಸರ್ಕಾರಿ ಅಧಿಕಾರಿಗಳ ಎತ್ತಂಗಡಿ