Friday, 27th December 2024

Manmohan Singh: ಶುಕ್ರವಾರ ರಾಜ್ಯಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ; 7 ದಿನಗಳ ಶೋಕಾಚರಣೆ

ಬೆಂಗಳೂರು: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಅವರ ನಿಧನಕ್ಕೆ ದೇಶ, ರಾಜ್ಯಾದ್ಯಂತ 7 ದಿನ ಶೋಕಾಚರಣೆ ಹಾಗೂ ನಾಳೆ(ಶುಕ್ರವಾರ) ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ (School-College Holiday ಇರಲಿದೆ. ಜತೆಗೆ ಎಲ್ಲ ಸರ್ಕಾರಿ ಕಾರ್ಯಕ್ರಮಗಳನ್ನು ಒಂದು ವಾರ ಗಳ ಕಾಲ ರದ್ದು ಮಾಡುವುದಾಗಿ ಡಿಸಿಎಂ ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

ಮನಮೋಹನ್ ಸಿಂಗ್ ಅವರದ್ದು ತಮ್ಮ ಶಾಂತ ಸ್ವಭಾವ, ಆಳವಾದ ಜ್ಞಾನ ಮತ್ತು ಅಪ್ರತಿಮ ದೃಷ್ಟಿಕೋನದಿಂದ ದೇಶದ ಆರ್ಥಿಕತೆ ಹಾಗೂ ಆಡಳಿತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದಿದ್ದರು. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ನಾಯಕತ್ವವು ಭಾರತದ ನೆಲದಲ್ಲಿ ಅವರನ್ನು ಅಮರವಾಗಿಸಲಿದೆ. ರಾಜನೀತಿ, ಸಮಗ್ರತೆ ಮತ್ತು ಶಾಂತ ಶಕ್ತಿಯಿಂದ ವ್ಯಾಖ್ಯಾನಿಸಲಾದ ಯುಗವು ಸಿಂಗ್ ಜಿ ಅವರ ನಿಧನದೊಂದಿಗೆ ಕೊನೆಗೊಳ್ಳುತ್ತದೆ. ಅವರ ಅಗಲಿಕೆಯು ನನಗೆ ವೈಯಕ್ತಿಕ ನಷ್ಟದಂತೆ ಭಾಸವಾಗುತ್ತಿದೆʼ ಎಂದು ಡಿಕೆ ಶಿವಕುಮಾರ್‌ ಸಂತಾಪ ಸೂಚಿಸಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನವಾಗಿದ್ದರಿಂದ ನಾಳೆ (ಡಿ. 27) ಐತಿಹಾಸಿಕ ಬೆಳಗಾವಿ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮ ರದ್ದು ಮಾಡಲಾಗಿದೆ.

1924ರಲ್ಲಿ ನಡೆದ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಸಮಾರಂಭದ ಭಾಗವಾಗಿ ಬೆಳಗಾವಿಯಲ್ಲಿ ರಾಜ್ಯ ಸರ್ಕಾರದಿಂದ ಗಾಂಧಿ ಭಾರತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎರಡನೇ ದಿನವಾದ ಶುಕ್ರವಾರ ಸುವರ್ಣ ವಿಧಾನಸೌಧದ ಆವರಣದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಬೇಕಿತ್ತು. ಮಹಾತ್ಮ ಗಾಂಧಿ ಅವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್‌ ಅಧಿವೇಶನ ಇದಾಗಿದ್ದರಿಂದ ಅವರ ನೆನಪಿಗಾಗಿ ಸುವರ್ಣ ವಿಧಾನಸೌಧದ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಆದರೆ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗಿದ್ದು, ರಾಜ್ಯದ ನಾಯಕರು ಅಂತಿಮ ದರ್ಶನ ಪಡೆಯಲು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಬಿಜೆಪಿ ಪ್ರತಿಭಟನೆ, ಪತ್ರಿಕಾಗೋಷ್ಠಿ ರದ್ದು

ಮನಮೋಹನ ಸಿಂಗ್ ಅವರು ನಿಧನರಾದ ಕಾರಣದಿಂದಾಗಿ ನಾಳೆ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ನಡೆಯಬೇಕಿದ್ದ ಪತ್ರಿಕಾಗೋಷ್ಠಿ ಮತ್ತು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ನಡೆಯಬೇಕಿದ್ದ ಪ್ರತಿಭಟನೆಯನ್ನು ರದ್ದುಗೊಳಿಸಲಾಗಿದೆ.