ಹೊಸದಿಲ್ಲಿ: ಕರ್ತಾರ್ಪುರ್ ಸಾಹಿಬ್ ಕಾರಿಡಾರ್ (Kartarpur Sahib Corridor) ಕುರಿತ ಒಪ್ಪಂದವನ್ನು ಭಾರತ ಮತ್ತು ಪಾಕಿಸ್ತಾನ ಇನ್ನೂ 5 ವರ್ಷಗಳವರೆಗೆ ವಿಸ್ತರಿಸಿವೆ ಎಂದು ವಿದೇಶಾಂಗ ಸಚಿವಾಲಯ ಮಂಗಳವಾರ (ಅಕ್ಟೋಬರ್ 22) ಹೇಳಿಕೆಯಲ್ಲಿ ತಿಳಿಸಿದೆ. ಇದರಿಂದ ಭಾರತದ ಸಾವಿರಾರು ಸಿಖ್ ಯಾತ್ರಾರ್ಥಿ (Sikh pilgrims)ಗಳಿಗೆ ಅನುಕೂಲವಾಗಲಿದೆ.
ಸಿಖ್ ಧರ್ಮ ಸಂಸ್ಥಾಪಕ ಗುರು ನಾನಕ್ (Guru Nanak) ಅವರ ಸಮಾಧಿ ಇರುವ ಗುರುದ್ವಾರ ಶ್ರೀ ಕರ್ತಾರ್ಪುರ್ ಸಾಹಿಬ್ ಸಿಖ್ ಸಮುದಾಯದವರಿಗೆ ಬಹಳ ಪವಿತ್ರ ಸ್ಥಳ. ಇದು ಪಾಕಿಸ್ತಾನದ ನಾರೇವಾಲ್ ಜಿಲ್ಲೆಯಲ್ಲಿದೆ. ರಾವಿ ನದಿಯ ಪಶ್ಚಿಮ ದಂಡೆಯಲ್ಲಿರುವ ಈ ಕರ್ತಾರ್‌ಪುರ ಗ್ರಾಮದಲ್ಲಿ ಶ್ರೀ ಗುರುನಾನಕ್ ದೇವ್ ತಮ್ಮ ಜೀವನದ ಕೊನೆಯ 18 ವರ್ಷಗಳನ್ನು ಕಳೆದಿದ್ದರು.
India and Pakistan have renewed the agreement on Sri Kartarpur Sahib Corridor for the next five years.
— Dr. S. Jaishankar (@DrSJaishankar) October 22, 2024
PM @narendramodi’s government will continue to facilitate our Sikh community’s access to their holy sites.
🔗 : https://t.co/0fr3WTBhnc
“ಶ್ರೀ ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ಒಪ್ಪಂದದ ಸಿಂಧುತ್ವವನ್ನು ಇನ್ನೂ 5 ವರ್ಷಗಳ ಅವಧಿಗೆ ವಿಸ್ತರಿಸಲು ಭಾರತ ಮತ್ತು ಪಾಕಿಸ್ತಾನ ರಾಜತಾಂತ್ರಿಕ ಮಾರ್ಗಗಳ ಮೂಲಕ ಒಪ್ಪಿಗೆ ನೀಡಿದೆ. ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ಮೂಲಕ ಭಾರತದಿಂದ ಪಾಕಿಸ್ತಾನದ ನಾರೇವಾಲ್‌ನ ಗುರುದ್ವಾರ ದರ್ಬಾರ್ ಸಾಹಿಬ್ ಕರ್ತಾರ್ಪುರಕ್ಕೆ ಯಾತ್ರಾರ್ಥಿಗಳ ಭೇಟಿಗೆ ಅನುಕೂಲವಾಗುವಂತೆ 2019ರ ಅಕ್ಟೋಬರ್ 24ರಂದು ಸಹಿ ಹಾಕಲಾಗಿತ್ತು. ಈ ಒಪ್ಪಂದವನ್ನು 5 ವರ್ಷಗಳ ಅವಧಿಗಾಗಿ ಮಾಡಲಾಗಿತ್ತುʼʼ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
“ಈ ಒಪ್ಪಂವನ್ನು ವಿಸ್ತರಿಸುವುದರಿಂದ ಭಾರತದಿಂದ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ. ಪ್ರತಿ ಯಾತ್ರಾರ್ಥಿಗೆ ಪಾಕಿಸ್ತಾನ ವಿಧಿಸುವ 20 ಡಾಲರ್ ಸೇವಾ ಶುಲ್ಕವನ್ನು ತೆಗೆದುಹಾಕುವ ಬಗ್ಗೆ ನಿರಂತರ ಮನವಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳಿಗೆ ಯಾವುದೇ ಶುಲ್ಕ ವಿಧಿಸದಂತೆ ಭಾರತ ಮತ್ತೊಮ್ಮೆ ಪಾಕಿಸ್ತಾನವನ್ನು ಒತ್ತಾಯಿಸಿದೆʼʼ ಎಂದು ಸಚಿವಾಲಯ ತಿಳಿಸಿದೆ.
ಭಾರತ ಮತ್ತು ಪಾಕಿಸ್ತಾನ ಮುಂದಿನ 5 ವರ್ಷಗಳವರೆಗೆ ಶ್ರೀ ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ಒಪ್ಪಂದವನ್ನು ನವೀಕರಿಸಿವೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೂ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ʼʼಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಸಿಖ್ ಸಮುದಾಯಕ್ಕೆ ಅವರ ಪವಿತ್ರ ಸ್ಥಳಗಳಿಗೆ ತೆರಳುವ ಅವಕಾಶವನ್ನು ಸುಗಮಗೊಳಿಸಿದೆ” ಎಂದು ಅವರು ಬರೆದುಕೊಂಡಿದ್ದಾರೆ. ಈ ಮೂಲಕ ಗುರುನಾನಕ್ ಜಯಂತಿಗೂ ಕೆಲ ದಿನಗಳ ಮೊದಲೇ ಸಿಖ್ ಸಮುದಾಯಕ್ಕೆ ಸಿಹಿ ಸುದ್ದಿ ಲಭಿಸಿದೆ.
ಕರ್ತಾರ್ಪುರ್ ಸಾಹಿಬ್ ಕಾರಿಡಾರ್
ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ಅವರು ಬಾಬಾ ಮೆಹ್ತಾ ಕಾಲು ಮತ್ತು ಮಾತಾ ತ್ರಿಪ್ತಾ ದಂಪತಿಗೆ ಪಾಕಿಸ್ತಾನದ ನಂಕಾನಾ ಸಾಹಿಬ್‌ನಲ್ಲಿ ಜನಿಸಿದರು. 1539ರ ಸೆಪ್ಟೆಂಬರ್ 22ರಂದು ಅವರು ನಿಧನರಾದರು. ಗುರುನಾನಕ್ ಅವರು ರಾವಿ ನದಿಯ ದಡದಲ್ಲಿರುವ ಕರ್ತಾರ್ಪುರ ಗುರುದ್ವಾರದಲ್ಲಿ 18 ವರ್ಷಗಳಿಗೂ ಹೆಚ್ಚು ಕಾಲ ಜೀವಿಸಿದ್ದರು. ಹೀಗಾಗಿ ಕರ್ತಾರ್ಪುರ್ ಸಾಹಿಬ್ ಸಿಖ್ ಸಮುದಾಯದವರಿಗೆ ಬಹು ಪವಿತ್ರ ಸ್ಥಳವಾಗಿದೆ. ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ಭಾರತದ ಪಂಜಾಬ್‌ನ ಡೇರಾ ಬಾಬಾ ನಾನಕ್ ದೇವಾಲಯವನ್ನು ಪಾಕಿಸ್ತಾನದ ಕರ್ತಾರ್ಪುರದ ಗುರುದ್ವಾರದೊಂದಿಗೆ ಸಂಪರ್ಕಿಸುತ್ತದೆ.
ಈ ಸುದ್ದಿಯನ್ನೂ ಓದಿ: Waqf Bill Meeting: ಸಂಸದೀಯ ಸಮಿತಿ ಸಭೆಯಲ್ಲಿ ಭಾರೀ ಹೈಡ್ರಾಮಾ; ಬಾಟಲಿ ಒಡೆದು ಅಬ್ಬರಿಸಿದ ಸಂಸದ; ವಿಡಿಯೋ ಇದೆ