ಮುಂಬೈ: ಬಾಲಿವುಡ್‌ನ ಖ್ಯಾತ ನಟ ಅಮಿತಾಭ್ ಬಚ್ಚನ್ (Amitabh Bachchan) ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿ ಸೀಸನ್ 16 (KBC 16) ಗಮನ ಸೆಳೆಯುತ್ತಿದೆ. ಶೋ ನಡೆಸಿಕೊಡುವ ಜತೆಗೆ ಅಮಿತಾಭ್ ವಿವಿಧ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಈ ಕಾರ್ಯಕ್ರಮಕ್ಕೆ ಅನೇಕ ಅಭಿಮಾನಿಗಳಿದ್ದಾರೆ. ಇದೀಗ ಬಿಗ್ ಬಿ ಇತ್ತೀಚೆಗೆ ನಿಧನರಾದ ಉದ್ಯಮ ಕ್ಷೇತ್ರದ ದಿಗ್ಗಜ, ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ (Ratan Tata) ಅವರ ಬಗ್ಗೆ ಆಸಕ್ತಿದಾಯಕ ವಿಚಾರವನ್ನು ಹಂಚಿಕೊಂಡಿದ್ದಾರೆ. ತಮ್ಮಿಂದ ಹಣ ಸಾಲ ಪಡೆದುಕೊಂಡ ಸಂಗತಿಯನ್ನು ಬಹಿರಂಗ ಪಡಿಸಿ, ಅಷ್ಟು ದೊಡ್ಡ ಉದ್ಯಮಿಯಾಗಿದ್ದರೂ ಟಾಟಾ ಅವರ ಸರಳತೆಯನ್ನು ಕೊಂಡಾಡಿದ್ದಾರೆ. ಸೋನಿ ವಾಹಿನಿ ಹಂಚಿಕೊಂಡಿರುವ ಈ ಕಾರ್ಯಕ್ರಮ ಪ್ರೋಮೊ ಸದ್ಯ ವೈರಲ್ ಆಗಿದೆ (Viral Video).
ಒಂದೇ ವಿಮಾನದಲ್ಲಿ ರತನ್ ಟಾಟಾ ಜತೆ ಪ್ರಯಾಣಿಸಿದ ನೆನಪನ್ನು ಅಮಿತಾಭ್ ಹಂಚಿಕೊಂಡಿದ್ದಾರೆ. ಆ ಮೂಲಕ ಟಾಟಾ ಅವರ ಸರಳತೆಯನ್ನು ಬಹಿರಂಗಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಬೋಮನ್ ಇರಾನಿ ಮತ್ತು ನಿರ್ದೇಶಕಿ ಫರ್ಹಾ ಖಾನ್ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದಾರೆ.
ʼʼರತನ್ ಟಾಟಾ ಎಂತಹ ಸರಳ ವ್ಯಕ್ತಿಯಾಗಿದ್ದರು. ಒಮ್ಮೆ ನಾನು ಮತ್ತು ಅವರು ಜತೆಯಾಗಿ ಒಂದೇ ವಿಮಾನದಲ್ಲಿ ಲಂಡನ್‌ಗೆ ಪ್ರಯಾಣಿಸಿದ್ದೆವು. ಅಲ್ಲಿಗೆ ತಲುಪಿದ ಬಳಿಕ ಅವರು ಸಂಬಂಧಿಕರಿಗೆ ಕರೆ ಮಾಡಲು ಫೋನ್ ಬೂತ್‌ಗೆ ತೆರಳಿದ್ದರು. ಕರೆ ಮಾಡಲು ನಾನು ಬೂತ್‌ನ ಹೊರಗೆ ನನ್ನ ಸರದಿಗಾಗಿ ಕಾಯುತ್ತಿದ್ದೆ.ಸ್ವಲ್ಪ ಹೊತ್ತಿನಲ್ಲಿ ಬೂತ್‌ನಿಂದ ಹೊರ ಬಂದು ಅವರು ʼಅಮಿತಾಭ್ ಸ್ವಲ್ಪ ಹಣ ಸಾಲ ಕೊಡುತ್ತೀರಾ? ಕರೆ ಮಾಡಲು ನನ್ನ ಬಳಿ ಹಣ ಇಲ್ಲʼ ಎಂಬುದಾಗಿ ತಿಳಿಸಿದ್ದರುʼʼ ಎಂದು ಬಿಗ್ ಬಿ ನೆನಪಿಸಿಕೊಂಡಿದ್ದಾರೆ. ಈ ಕ್ಷಣ ಮರೆಯಲು ಸಾಧ್ಯವೆ ಇಲ್ಲ ಎಂದು ಉದ್ಘರಿಸಿದ್ದಾರೆ.
ಇಹಲೋಕ ತ್ಯಜಿಸಿದ ರತನ್ ಟಾಟಾ
1937ರ ಡಿಸೆಂಬರ್ 28ರಂದು ಜನಿಸಿದ ರತನ್ ಟಾಟಾ ಅವರು 2024ರ ಅಕ್ಟೋಬರ್ 9ರಂದು ತಮ್ಮ 86ನೇ ವಯಸ್ಸಿನಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ವೈದ್ಯರ ಪ್ರಾಥಮಿಕ ವರದಿ ಪ್ರಕಾರ, ಎರಡು ದಿನಗಳ ಮೊದಲು ಟಾಟಾ ಅವರ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿದ್ದು, ತಕ್ಷಣ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಇದಾದ ನಂತರ ಅವರ ಆರೋಗ್ಯ ಸ್ಥಿತಿ ಬಗ್ಗೆ ಹಲವು ಊಹಾಪೋಹಗಳು ಭುಗಿಲೆದ್ದಿದ್ದವು. ಅದಕ್ಕೆ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ರತನ್ ಟಾಟಾ ವದಂತಿಗಳಿಗೆ ತೆರೆ ಎಳೆದಿದ್ದರು. ಇದಾದ ಎರಡು ದಿನಗಳಲ್ಲಿ ಮತ್ತೆ ಟಾಟಾ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದರು. ಕಡಿಮೆ ರಕ್ತದೊತ್ತಡ, ವಯೋ ಸಹಜ ಕ್ಷೀಣತೆ ಮತ್ತು ಸಂಬಂಧಿತ ಆರೋಗ್ಯ ಸಮಸ್ಯೆಗಳು ಅವರ ಸಾವಿಗೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.
Ratan Tata: ರತನ್ ಟಾಟಾ ಬಗ್ಗೆ ನೆಚ್ಚಿನ ಗೆಳೆಯ ಶಾಂತನು ಹೇಳಿದ್ದೇನು? ಭಾರೀ ವೈರಲ್ ಆಗ್ತಿದೆ ಇನ್‌ಸ್ಟಾ ಪೋಸ್ಟ್