ತಿರುವನಂತಪುರಂ: ಮಹಿಳೆ ಹಾಗೂ ಆಕೆಯ 17 ದಿನದ ಅವಳಿ ಹೆಣ್ಣು ಮಕ್ಕಳನ್ನು ಕೊಲೆಗೈದು 19 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಇಬ್ಬರು ಮಾಜಿ ಸೈನಿಕರನ್ನು (Ex Servicemen) ಕೇರಳ (Kerala) ಪೊಲೀಸರು ಬಂಧಿಸಿದ್ದಾರೆ. ಪಿತೃತ್ವ ಪರೀಕ್ಷೆ ನಡೆಸಿದಲ್ಲಿ ತಾನು ಅವಳಿ ಮಕ್ಕಳ ತಂದೆ ಎನ್ನುವುದು ಸಾಬೀತಾಗುತ್ತದೆ ಎಂಬ ಭೀತಿಯಿಂದ ಸೈನಿಕನೊಬ್ಬ ಸಹೋದ್ಯೋಗಿಯ ಸಹಾಯದಿಂದ ಮಹಿಳೆ ಹಾಗೂ ಅವಳಿ ಹೆಣ್ಣುಮಕ್ಕಳನ್ನು ಅಮಾನುಷವಾಗಿ ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ. (Kerala Horror)
ಬಂಧಿತ ಆರೋಪಿಗಳನ್ನು ದಿಬಿಲ್ ಕುಮಾರ್ ಬಿ ಹಾಗೂ ರಾಜೇಶ್.ಪಿ ಎಂದು ಗುರುತಿಸಲಾಗಿದೆ. ಆರೋಪಿಗಳು ಫೆಬ್ರವರಿ 10, 2006 ರಂದು ಕೃತ್ಯ ಎಸಗಿದ್ದರು. ಪಿತೃತ್ವ ಪರೀಕ್ಷೆಯಲ್ಲಿ ಅವಳಿ ಹೆಣ್ಣುಮಕ್ಕಳ ತಂದೆ ಎಂದು ಸಾಬೀತಾಗುತ್ತದೆ ಎಂದು ಹೆದರಿ ಆರೋಪಿ ದಿಬಿಲ್ ಕುಮಾರ್ ತನ್ನ ಸಹ ಸೈನಿಕನ ಸಹಾಯದಿಂದ ಅವಳನ್ನು ಮತ್ತು ಶಿಶುಗಳನ್ನು ಕೊಲೆಗೈದಿದ್ದ. ಬಳಿಕ ಇಬ್ಬರು ಸೈನ್ಯವನ್ನು ತೊರೆದಿದ್ದರು.
ಕೇರಳದ ಕೊಲ್ಲಂ ಜಿಲ್ಲೆಯ ಆಂಚಲ್ ಬಳಿಯ ಯೆರಮ್ನಲ್ಲಿ ರಂಜಿನಿ (24) ಮತ್ತು ಅವಳ ನವಜಾತ ಹೆಣ್ಣುಮಕ್ಕಳನ್ನು ಅವರ ಬಾಡಿಗೆ ಮನೆಯಲ್ಲಿ ಹತ್ಯೆ ಮಾಡಲಾಗಿತ್ತು. ಅವಳಿ ಮಕ್ಕಳ ಜನನ ಪ್ರಮಾಣ ಪತ್ರ ಪಡೆಯಲು ಹೋಗಿದ್ದ ರಂಜಿನಿ ಅವರ ತಾಯಿ ಪಂಚಾಯತ್ ಕಚೇರಿಯಿಂದ ಹಿಂತಿರುಗಿದಾಗ ಮನೆಯಲ್ಲಿ ಶವಗಳು ಪತ್ತೆಯಾಗಿದ್ದವು.
ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದಾಗ, ಪಠಾಣ್ಕೋಟ್ನಲ್ಲಿ ಭಾರತೀಯ ಸೇನೆಯ 45 ಎಡಿ ರೆಜಿಮೆಂಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಂಚಲ್ನ ದಿಬಿಲ್ ಕುಮಾರ್ ಬಿ (28) ರಂಜಿನಿ ಅವರೊಂದಿಗೆ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿತ್ತು. ಜನವರಿ 24, 2006 ರಂದು ಅವಳಿ ಮಕ್ಕಳು ಜನಿಸಿದ ನಂತರ, ಆತ ಆಕೆಯಿಂದ ದೂರವಾಗಲು ಪ್ರಾರಂಭಿಸಿದ್ದ ಎಂದು ತಿಳಿದು ಬಂದಿತ್ತು.
ರಾಜೇಶ್.ಪಿ ಕೂಡ ಕೊಲೆಯಲ್ಲಿ ಭಾಗಿಯಾಗಿದ್ದು , ಆತನೂ ಸೇನೆಯಲ್ಲಿದ್ದ. ರಜನಿ ಮತ್ತು ಆಕೆಯ ತಾಯಿ ಜತೆ ಸ್ನೇಹ ಸಂಪಾದಿಸಿ, ರಜನಿಯನ್ನು ವಿವಾಹವಾಗುವಂತೆ ದಿವಿಲ್ ಕುಮಾರ್ ನ ಮನವೊಲಿಸುವುದಾಗಿ ಭರವಸೆ ನೀಡಿದ್ದ ಎಂದು ತಿಳಿದು ಬಂದಿದೆ.
ಕೊಲೆಯ ನಂತರ ಇಬ್ಬರೂ ತಲೆ ಮರೆಸಿಕೊಂಡಿದ್ದರು. ಇತ್ತೀಚೆಗೆ ದಿವಿಲ್ ಕುಮಾರ್ ಹಾಗೂ ರಾಜೇಶ್ ಪುದುಚೇರಿಯಲ್ಲಿ ನಕಲಿ ಹೆಸರಿನಲ್ಲಿ ವಾಸಿಸುತ್ತಿದ್ದಾರೆ ಮತ್ತು ಆಧಾರ್ ಕಾರ್ಡ್ ಸೇರಿದಂತೆ ಹೊಸ ದಾಖಲೆಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸುಳಿವು ಸಿಕ್ಕಿತ್ತು. ಅಲ್ಲದೇ ಶಿಕ್ಷಕಿಯರನ್ನು ಮದುವೆಯಾಗಿದ್ದಾರೆ ಎಂದು ತಿಳಿದು ಬಂದಿತ್ತು.
ಚೆನ್ನೈನ ಸಿಬಿಐ ಘಟಕವು ಶುಕ್ರವಾರ ಇಬ್ಬರನ್ನು ಬಂಧಿಸಿ ಕೊಚ್ಚಿಗೆ ಕರೆತಂದಿದೆ. ಅಲ್ಲಿ ಅವರನ್ನು ಶನಿವಾರ ಎರ್ನಾಕುಲಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳನ್ನು ಜ.18ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಈ ಸುದ್ದಿಯನ್ನೂ ಓದಿ : Road Accident: ಕೇರಳ ಸರ್ಕಾರಿ ಬಸ್ಸಿಗೆ ಕಾರು ಡಿಕ್ಕಿ, ಐವರು ಮೆಡಿಕಲ್ ವಿದ್ಯಾರ್ಥಿಗಳು ದುರ್ಮರಣ