ತಿರುವನಂತಪುರಂ: ಚಿಕ್ಕ ಮಕ್ಕಳು ಸಾಮಾನ್ಯವಾಗಿ ಹಾಸಿಗೆಯ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾಗಿ ಯಾರು ಕೂಡ ಚಿಕ್ಕ ಮಕ್ಕಳು ಹಾಸಿಗೆ ಮೇಲೆ ಮೂತ್ರ ಮಾಡಿದರೆ ಹೊಡೆಯವುದು, ಬೈಯುವುದು ಮಾಡುವುದಿಲ್ಲ. ಆದರೆ ತಿರುವನಂತಪುರಂನ ಸರ್ಕಾರಿ ಶಿಶು ಪಾಲನಾ ಕೇಂದ್ರದಲ್ಲಿ ಎರಡೂವರೆ ವರ್ಷದ ಮಗು ಮಲಗಿದ್ದಾಗ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ಸಿಟ್ಟಾದ ಮೂವರು ಸಿಬ್ಬಂದಿ ಮಗುವಿನ(Kids Harassment Case) ಯೋನಿಯ ಭಾಗಕ್ಕೆ ಥಳಿಸಿ ಗಾಯ ಮಾಡಿದ್ದಾರೆ. ಹೀಗಾಗಿ ಅವರನ್ನು ಅರೆಸ್ಟ್ ಮಾಡಲಾಗಿದೆ.
ಕೇರಳ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿ ನಡೆಸುತ್ತಿರುವ ಈ ಶಿಶುಪಾಲನಾ ಕೇಂದ್ರದಲ್ಲಿ ಘಟನೆ ನಡೆದಿದ್ದು, ಇಂತಹ ದುಷ್ಟ ಕೆಲಸ ಮಾಡಿದ ಮೂವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಬಾಲಕಿಯ ಖಾಸಗಿ ಭಾಗಗಳಲ್ಲಿ ಬೆರಳಿನ ಉಗುರು ಗುರುತುಗಳು ಕಂಡುಬಂದಿವೆ ಎನ್ನಲಾಗಿದೆ.
ವರದಿ ಪ್ರಕಾರ, ಮಗುವಿನ ಆರೋಗ್ಯ ಹದಗೆಟ್ಟ ಕಾರಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯದಾಗ ಆಸ್ಪತ್ರೆಯ ವೈದ್ಯರು ಮಗುವಿನ ಖಾಸಗಿ ಭಾಗದಲ್ಲಾದ ಗಾಯಗಳನ್ನು ಗಮನಿಸಿದ್ದಾರೆ. ಗಾಯದ ಗುರುತುಗಳು ಸುಮಾರು ಏಳರಿಂದ ಎಂಟು ದಿನಗಳಷ್ಟು ಹಳೆಯವು ಎಂದು ವೈದ್ಯರು ಕಂಡುಕೊಂಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ವೈದ್ಯರು ಈ ವಿಷಯವನ್ನು ಪೊಲೀಸರಿಗೆ ಹಾಗೂ ಶಿಶು ಪಾಲನಾ ಕೇಂದ್ರದ ಮೇಲಾಧಿಕಾರಿಗೆ ವರದಿ ಮಾಡಿದ್ದಾರೆ. ನಂತರ ಪೊಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ್ದಾಗ ಮಗು ಮಲಗಿದ್ದಾಗ ಹಾಸಿಗೆಯನ್ನು ಒದ್ದೆ ಮಾಡಿದ್ದರಿಂದ ಸಿಬ್ಬಂದಿ ಮಗುವಿಗೆ ಥಳಿಸಿ ಖಾಸಗಿ ಭಾಗವನ್ನು ಗಾಯಗೊಳಿಸಿದ್ದಾರೆ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ.
ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ ಮತ್ತು ಬಾಲನ್ಯಾಯ (ಜೆಜೆ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಮೂವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಮತ್ತು ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ತಿರುವನಂತಪುರಂ ನಗರ ಪೊಲೀಸ್ ಆಯುಕ್ತ ಜಿ ಸ್ಪರ್ಜನ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ:ಕಾಳುಗಳನ್ನು ಖರೀದಿಸೋ ಮುನ್ನ ಎಚ್ಚರ… ಎಚ್ಚರ! ಈ ವಿಡಿಯೋ ನೋಡಿದ್ರೆ ಶಾಕ್ ಆಗುತ್ತೆ
ತಾಯಿ ಮೃತಪಟ್ಟು ತಂದೆ ಆತ್ಮಹತ್ಯೆ ಮಾಡಿಕೊಂಡ ನಂತರ ಮಗು ಮತ್ತು ಆಕೆಯ ಐದು ವರ್ಷದ ಸಹೋದರಿಯನ್ನು 10 ದಿನಗಳ ಹಿಂದೆ ಈ ಶಿಶು ಪಾಲನಾ ಕೇಂದ್ರಕ್ಕೆ ಹಸ್ತಾಂತರಿಸಲಾಗಿತ್ತು ಎನ್ನಲಾಗಿದೆ. ಇಂತಹ ಘೋರ ಕೃತ್ಯ ಎಸಗಿದ ಬಂಧಿತರನ್ನು ಪೋತೆನ್ಕೋಡ್ ನಿವಾಸಿ ಅಜಿತಾ (49), ಮಹೇಶ್ವರಿ (43) ಮತ್ತು ನವಯಿಕುಲಂನ 47 ವರ್ಷದ ಸಿಂಧು ಎಂದು ಗುರುತಿಸಲಾಗಿದೆ. ಈಗ ಇವರು ಪೊಲೀಸರ ಅತಿಥಿಗಳಾಗಿದ್ದಾರೆ.