Thursday, 12th December 2024

ವಧುವಿಗೆ ವೇದಿಕೆಯಲ್ಲಿಯೇ ಮುತ್ತಿಟ್ಟ ವರ: ವಿವಾಹ ರದ್ದು..!

ಸಂಭಾಲ್: ಈ ಮುತ್ತು ಎನ್ನುವುದು ಇಲ್ಲಿ ಸಂಬಂಧವನ್ನು ಗಟ್ಟಿಗೊಳಿಸಲಿಲ್ಲ. ಉತ್ತರ ಪ್ರದೇಶದಲ್ಲಿ ಇಂತದ್ದೊಂದು ಘಟನೆ ನಡೆದಿದ್ದು, ವರ ಕೊಟ್ಟ ಮುತ್ತು ಇದೀಗ ಆತನಿಗೆ ಸಂಕಷ್ಟ ತಂದಿಟ್ಟಿದೆ. ಸುಮಾರು 300 ಅತಿಥಿಗಳ ಮುಂದೆ ವರ ವೇದಿಕೆ ಯಲ್ಲಿಯೇ ತನಗೆ ಮುತ್ತು ನೀಡಿದ್ದಕ್ಕಾಗಿ ಕೋಪಗೊಂಡ ವಧು ತನ್ನ ಮದುವೆಯನ್ನು ರದ್ದುಗೊಳಿಸಿದ್ದಾಳೆ.
ದಂಪತಿ ಹಾರ ಬದಲಾಯಿಸಿಕೊಂಡ ನಂತರ ವರ ಆಕೆಗೆ ಮುತ್ತು ನೀಡಿದ್ದಾನೆ. ಈ ವೇಳೆ ತಕ್ಷಣವೇ ವಧು ವೇದಿಕೆಯಿಂದ ಹೊರ ನಡೆದಿದ್ದಾಳೆ ಮತ್ತು ನಂತರ ಪೊಲೀಸರಿಗೆ ಕರೆ ಮಾಡಿದ್ದಾಳೆ. 23 ವರ್ಷದ ಪದವೀಧರೆ ವಧು, ವರನು ತನ್ನ ಸ್ನೇಹಿತರೊಂದಿಗೆ ಮಾಡಿ ಕೊಂಡಿದ್ದ ಚಾಲೆಂಜ್ ಅನ್ನು ಗೆಲ್ಲಲು ತನಗೆ ಮುತ್ತು ನೀಡಿದರು ಮತ್ತು ಈಗ ಆತನ ನಡತೆ ಬಗ್ಗೆ ಅನುಮಾನ ಉಂಟಾಗಿದೆ’ ಎಂದು ಹೇಳಿದ್ದಾಳೆ.

ವರ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಆತ ನನಗೆ ಮುತ್ತು ನೀಡಿದಾಗ ನನಗೆ ಅವಮಾನವಾಯಿತು. ಆತ ನನ್ನ ಸ್ವಾಭಿಮಾನದ ಬಗ್ಗೆ ಯೋಚಿಸಲಿಲ್ಲ ಮತ್ತು ನೆರೆದಿದ್ದ ಹಲವಾರು ಅತಿಥಿಗಳ ಮುಂದೆ ಅನುಚಿತವಾಗಿ ವರ್ತಿಸಿದ’ ಎಂದು ಆಕೆ ಆರೋಪಿಸಿದ್ದಾಳೆ. ಪೊಲೀಸರು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದರೂ, ವಧು ಮದುವೆಗೆ ನಿರಾಕರಿಸಿದ್ದರಿಂದ ಮದುವೆಯನ್ನು ರದ್ದುಗೊಳಿಸ ಲಾಯಿತು ಮತ್ತು ಅತಿಥಿಗಳು ಮನೆಗೆ ಮರಳಿದರು.

ಘಟನೆ ಸಂಭವಿಸುವ ವೇಳೆಗೆ ವಿಧಿವಿಧಾನಗಳು ನಡೆದಿದ್ದರಿಂದ ತಾಂತ್ರಿಕವಾಗಿ ದಂಪತಿ ವಿವಾಹವಾಗಿದ್ದಾರೆ. ಒಂದೆರಡು ದಿನದ ಬಳಿಕ ಏನು ಮಾಡಬೇಕೆಂದು ನಾವು ನಿರ್ಧರಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.