Thursday, 21st November 2024

Kolkata Horror: ಕೋಲ್ಕತ್ತಾ ವೈದ್ಯೆ ಕೊಲೆ ಹಿಂದೆ ಇದ್ಯಾ ಪೊಲೀಸ್ ಕಮಿಷನರ್ ಕೈವಾಡ? ಮಾಧ್ಯಮದೆದುರು ಆರೋಪಿ ಕಿರುಚಾಡಿದ್ದೇಕೆ? ವಿಡಿಯೊ ವೈರಲ್‌

Kolkata Horror

ಕೋಲ್ಕತ್ತಾ: ಆರ್‌ಜಿ ಕರ್ (RG Kar Hospital) ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಕೊಲೆ (Kolkata Horror) ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್‌ನನ್ನು (Sanjay Roy) ಸೋಮವಾರ ಕೋಲ್ಕತ್ತಾದ ಕೋರ್ಟ್‌ನಿಂದ ಕರೆದೊಯ್ಯುವಾಗ ಹೈ ಡ್ರಾಮಾವೊಂದು ನಡೆದಿದೆ. ಕೋಲ್ಕತ್ತಾದ ಮಾಜಿ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ತನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಪೊಲೀಸ್ ವ್ಯಾನ್ ರಾಯ್ ಒಳಗಿನಿಂದ ಜೋರಾಗಿ ಕಿರುಚಿರುವ ಘಟನೆ ವರದಿಯಾಗಿದೆ.

ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯನಿರತ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆಯು ಪ್ರಧಾನ ಆರೋಪಿ ಸಂಜಯ್ ರಾಯ್‌ನನ್ನು ಸೋಮವಾರ ಕೋಲ್ಕತ್ತಾ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮಾಧ್ಯಮದವರನ್ನು ಕಂಡ ಕೂಡಲೇ ಆರೋಪಿ ಸಂಜಯ್‌ ತನ್ನ ಮೇಲೆ ಕೊಲ್ಕತ್ತಾದ ಮಾಜಿ ಕಮಿಷನರ್‌ ಪಿತೂರಿ ನಡೆಸಿದ್ದಾರೆ ಎಂದು ಪೊಲೀಸ್‌ ವ್ಯಾನ್‌ ಒಳಗಿಂದಲೇ ಕೂಗಾಟ ನಡೆಸಿದ್ದಾನೆ.

ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 64 (ಅತ್ಯಾಚಾರ), ಸೆಕ್ಷನ್ 66 (ಸಾವಿಗೆ ಕಾರಣವಾದ ಶಿಕ್ಷೆ) ಮತ್ತು 103 (ಕೊಲೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್‌ 9ರಂದು ಕಿರಿಯ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿನಿಯಾಗಿದ್ದ ಆಕೆ, ಆಗಸ್ಟ್‌ 8ರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಮರುದಿನ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು.

ಇದನ್ನೂ ಓದಿ Kolkata Horror : ಕೊಲ್ಕತ್ತಾದ ಆರ್‌ಜಿ ಕರ್‌ ಕಾಲೇಜಿನ ಸಂತ್ರಸ್ತೆಯ ಪ್ರತಿಮೆ ಧ್ವಂಸ

ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆಗೈದಿರುವುದು ಬೆಳಕಿಗೆ ಬಂದಿತ್ತು. ಕುತ್ತಿಗೆ ಮುರಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಆಗಸ್ಟ್ 10 ರಂದು ಕೋಲ್ಕತ್ತಾ ಪೊಲೀಸರು ಪ್ರಕರಣದ ಆರೋಪಿಯನ್ನು ಬಂಧಿಸಿದ್ದರು. ನಂತರ, ಕಲ್ಕತ್ತಾ ಹೈಕೋರ್ಟ್ ಆದೇಶದ ಮೇರೆಗೆ ಸಿಬಿಐ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತು.