Thursday, 21st November 2024

Kolkata Murder Case: ಪ್ರಕರಣ ಮುಚ್ಚಿ ಹಾಕಲು ಪೊಲೀಸರಿಂದ ಹಣದ ಆಮಿಷ; ಕೋಲ್ಕತ್ತಾ ಸಂತ್ರಸ್ತೆಯ ತಂದೆಯಿಂದ ಸ್ಫೋಟಕ ಮಾಹಿತಿ

Kolkata Murder Case

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (RG Kar Medical College and Hospital)ಯಲ್ಲಿ ಕಳೆದ ತಿಂಗಳು ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷ ವಿಧಿಸಬೇಕೆಂಬ ಕೂಗು ಎಲ್ಲಡೆ ಕೇಳಿ ಬಂದಿದೆ. ಈ ಮಧ್ಯೆ ಸಂತ್ರಸ್ತೆಯ ಕುಟುಂಬಸ್ಥರು ಪೊಲೀಸ್‌ ಅಧಿಕಾರಿಯ ವಿರುದ್ಧ ಗಂಭೀರ ಆರೋಪ ಹೊರಿಸಿದ್ದು, ಕೇಸ್‌ ಇತ್ಯರ್ಥ ಪಡಿಸಲು ಹಣದ ಆಮೀಷ ಒಡ್ಡಿದ್ದಾರೆ ಎಂದು ಹೇಳಿದ್ದಾರೆ (Kolkata Murder Case).

ಆರ್‌.ಜಿ.ಕರ್‌ ಆಸ್ಪತ್ರೆಯಲ್ಲಿ ವೈದ್ಯರು ಪ್ರತಿಭಟನೆ ಮುಂದುವರಿಸಿದ್ದು, ಇದರಲ್ಲಿ ಭಾವಹಿಸಿದ ಸಂತ್ರಸ್ತೆಯ ತಂದೆ ಬುಧವಾರ (ಸೆಪ್ಟೆಂಬರ್‌ 4), ಕೋಲ್ಕತ್ತಾ ಪೊಲೀಸರು ಶವವನ್ನು ಅವಸರದಿಂದ ದಹನ ಮಾಡುವ ಮೂಲಕ ಪ್ರಕರಣವನ್ನು ಅಡಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಆಗಸ್ಟ್ 9ರಂದು ತಮ್ಮ ಮಗಳ ಶವ ಪತ್ತೆಯಾದ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಅವರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ ಮತ್ತು ಘಟನೆ ಬೆಳಕಿಗೆ ಬಂದ ನಂತರ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಲಂಚ ನೀಡಲು ಪ್ರಯತ್ನಿಸಿದ್ದಾರೆ ಎನ್ನುವ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

“ಪೊಲೀಸರು ಮೊದಲಿನಿಂದಲೂ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ನಮಗೆ ಶವವನ್ನು ನೋಡಲು ಅವಕಾಶ ನೀಡಲಿಲ್ಲ ಮತ್ತು ಮಗಳ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕರೆದೊಯ್ಯುವಾಗ ಪೊಲೀಸ್ ಠಾಣೆಯಲ್ಲಿ ತುಂಬಾ ಹೊತ್ತು ಕಾಯಿಸಿದ್ದಾರೆ. ನಂತರ ಶವವನ್ನು ನಮಗೆ ಹಸ್ತಾಂತರಿಸುವಾಗ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನಮಗೆ ಹಣವನ್ನು ನೀಡಲು ಮುಂದೆ ಬಂದರು. ಅದನ್ನು ನಾವು ನಿರಾಕರಿಸಿದ್ದೇವೆ” ಎಂದು ಸಂತ್ರಸ್ತೆಯ ತಂದೆ ವಿವರಿಸಿದ್ದಾರೆ. ಈ ಪ್ರಕರಣವನ್ನು ಕೋಲ್ಕತ್ತಾ ಹೈಕೋರ್ಟ್‌ ಸಿಬಿಐಗೆ ಹಸ್ತಾಂತರಿಸಿದೆ. ತನಿಖೆ ಪ್ರಗತಿಯಲ್ಲಿದೆ.

ಮುಂದುವರಿದ ಪ್ರತಿಭಟನೆ

ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಸಂತ್ರಸ್ತೆಯ ಹೆತ್ತವರೂ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಆಗಸ್ಟ್‌ 10ರಿಂದ ರಾಜ್ಯದ ನಾನಾ ಭಾಗಗಳಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಲೇ ಇದೆ. ಪ್ರಕರಣದ ಪ್ರಮುಖ ಆರೋಪಿ ಸಂಜಯ್‌ ರಾಯ್‌ನನ್ನು ಈಗಾಗಲೇ ಬಂಧಿಸಲಾಗಿದ್ದು, ಆತನ ವಿಚಾರಣೆ ನಡೆಸಲಾಗುತ್ತಿದೆ. ಮೃತ ವೈದ್ಯೆ ಮೃತಪಟ್ಟ ಸೆಮಿನಾರ್‌ ಹಾಲ್‌ಗೆ ಸಂಜಯ್‌ ರಾಯ್‌ ಪ್ರವೇಶಿಸುತ್ತಿರುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು ಮತ್ತು ಶವದ ಬಳಿ ಆತನ ಬ್ಯೂಟೂತ್‌ ಸಾಧನ ಪತ್ತೆಯಾಗಿರುವುದು ಕೃತ್ಯದಲ್ಲಿ ಆತ ಭಾಗಿಯಾಗಿದ್ದಾನೆ ಎನ್ನುವುದಕ್ಕೆ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Kolkata rape-murder case : ಆಸ್ಪತ್ರೆಗಳಿಗೆ ಕೊಟ್ಟಿರುವ ಭದ್ರತೆಗಳ ವರದಿ ಕೊಡಿ; ರಾಜ್ಯ ಸರ್ಕಾರಗಳಿಗೆ ಕೇಂದ್ರದ ನಿರ್ದೇಶನ

ಸೋಮವಾರ (ಸೆಪ್ಟೆಂಬರ್‌ 2) ಸಿಬಿಐ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್‌ನನ್ನು ಬಂಧಿಸಿದೆ. ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಸೆಪ್ಟೆಂಬರ್‌ 3ರಂದು ಅತ್ಯಾಚಾರಿಗಳಿಗೆ ಮರಣದಂಡನೆ ಮತ್ತು ಇತರ ಅಪರಾಧಿಗಳಿಗೆ ಪೆರೋಲ್ ಇಲ್ಲದ ಜೀವಾವಧಿ ಶಿಕ್ಷೆ ವಿಧಿಸುವ ರಾಜ್ಯ ಅತ್ಯಾಚಾರ ವಿರೋಧಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದೆ.