ಹೈದರಾಬಾದ್: ಫೆಬ್ರವರಿ 2023 ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಫಾರ್ಮುಲಾ ಇ ರೇಸ್‌ಗೆ ( Formula E race) ಸಂಬಂಧಿಸಿದ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) BRS ನಾಯಕ ಮತ್ತು ತೆಲಂಗಾಣ ಮಾಜಿ ಸಚಿವ ಕೆಟಿ ರಾಮರಾವ್ (KT Rama Rao) ಅವರಿಗೆ ಸಮನ್ಸ್ ನೀಡಿದೆ. ಹಿರಿಯ IAS ಅಧಿಕಾರಿ ಅರವಿಂದ್ ಕುಮಾರ್ ಮತ್ತು ಇದೇ ಪ್ರಕರಣದಲ್ಲಿ ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರ (HMDA) ಮಾಜಿ ಮುಖ್ಯ ಎಂಜಿನಿಯರ್ ಆಗಿದ್ದ ಬಿಎಲ್‌ಎನ್ ರೆಡ್ಡಿ ಅವರಿಗೂ ಸಮನ್ಸ್ ನೀಡಲಾಗಿದೆ.
ಜನವರಿ 7 ರಂದು ಕೆಟಿಆರ್‌ಗೆ ವಿಚಾರಣೆ ಹಾಜರಾಗುವಂತೆ ಸೂಚಿಸಲಾಗಿದ್ದು, ಜನವರಿ 2 ಮತ್ತು 3 ರಂದು ಅರವಿಂದ್ ಕುಮಾರ್ ಹಾಗೂ ಬಿಎಲ್‌ಎನ್ ರೆಡ್ಡಿ ಅವರ ವಿಚಾರಣೆಗೆ ನಿಗದಿಪಡಿಸಲಾಗಿದೆ. ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿರುವ ಎಫ್‌ಐಆರ್ ಅನ್ವಯ ತನಿಖೆ ನಡೆಸಲಾಗುತ್ತಿದೆ. ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ (IPC) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ವಿವಿಧ ಕೇಸ್ ದಾಖಲಿಸಲಾಗಿದೆ.
ಏನಿದು ಪ್ರಕರಣ?
ಹಿಂದಿನ ಬಿಆರ್‌ಎಸ್ ಆಡಳಿತದಲ್ಲಿ ಹೈದರಾಬಾದ್‌ನಲ್ಲಿ ಫಾರ್ಮುಲಾ-ಇ ರೇಸ್ ನಡೆಸಲು ಅನುಮತಿಯಿಲ್ಲದೆ ಸುಮಾರು 55 ಕೋಟಿ ರೂ.ಗಳ ವಿದೇಶಿ ಕರೆನ್ಸಿಯನ್ನು ಪಾವತಿಸಿದ್ದರು ಎಂದು ತಿಳಿದು ಬಂದಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಆಪಾದಿತ ಅಕ್ರಮಗಳ ಬಗ್ಗೆ ರಾಮರಾವ್ ವಿರುದ್ಧ ವಾಗ್ದಾಳಿ ನಡೆಸಿ, ರೇಸಿಂಗ್ ಈವೆಂಟ್‌ನ ಆಯೋಜಕರಿಗೆ ಹೆಚ್ಚಿನ ಹಣವನ್ನು ವರ್ಗಾವಣೆ ಮಾಡುವುದನ್ನು ವಿರೋಧಿಸಿ ರಾಜ್ಯ ಸರ್ಕಾರವು ಸುಮಾರು 500 ಕೋಟಿ ರೂಪಾಯಿಗಳನ್ನು ಉಳಿಸಿದೆ ಎಂದು ಹೇಳಿದ್ದರು.
ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಕುಟುಂಬಕ್ಕೆ ಸಂಬಂಧಿಸಿದ ಎರಡನೇ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದಾಗಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೆಟಿಆರ್ ಅವರ ಸಹೋದರಿ ಕೆ.ಕವಿತಾ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. EDಯ ಸಮನ್ಸ್ BRS ಪಕ್ಷಕ್ಕೆ ಮತ್ತೊಂದು ರಾಜಕೀಯ ಮತ್ತು ಕಾನೂನು ಸವಾಲಾಗಿದೆ.
ಈ ಸುದ್ದಿಯನ್ನೂ ಓದಿ :ಭ್ರಷ್ಟಾಚಾರ ಪ್ರಕರಣ: ಸಿಬಿಐನಿಂದ ಕೆ.ಕವಿತಾ ಬಂಧನ