Sunday, 15th December 2024

ಲಖಿಂಪುರ ಖೇರಿ ಹಿಂಸಾಚಾರ: ನಾಳೆ ಸುಪ್ರೀಂಕೋರ್ಟ್‌’ನಲ್ಲಿ ವಿಚಾರಣೆ

ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಅ.3ರಂದು ನಡೆದಿದ್ದ ಹಿಂಸಾಚಾರ ಘಟನೆಗೆ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂಕೋರ್ಟ್‌ ಬುಧವಾರ ವಿಚಾರಣೆಗೆ ಎತ್ತಿಕೊಳ್ಳಲಿದೆ.

ಮುಖ್ಯನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌, ಹಿಮಾ ಕೊಹ್ಲಿ ಅವರಿದ್ದ ಪೀಠವು, ಕೃತ್ಯದ ಕುರಿತಂತೆ ಉತ್ತರಪ್ರದೇಶ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಬೇಸರ ವ್ಯಕ್ತಪಡಿ ಸಿತ್ತು. ಇದರ ವಿಚಾರಣೆ ನಡೆಸುವುದಾಗಿ ಅ.8ರಂದು ಹೇಳಿತ್ತು. ಘಟನೆಯಲ್ಲಿ ನಾಲ್ವರು ಕೃಷಿಕರು ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದರು.

ಘಟನೆಗೆ ಸಂಬಂಧಿಸಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾ ಸೇರಿದಂತೆ ಇದುವರೆಗೂ ಎಂಟು ಜನರನ್ನು ಬಂಧಿಸ ಲಾಗಿದೆ. ಘಟನೆ ಕುರಿತು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಇಬ್ಬರು ವಕೀಲರು ಪತ್ರ ಬರೆದಿದ್ದರು.

ಕೇಂದ್ರದ ನೂತನ ಕೃಷಿಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ವಿರುದ್ಧ ಪ್ರತಿಭಟಿಸುವಾಗ ಅ.3ರಂದು ಅವರ ಮೇಲೆ ವಾಹನವನ್ನು ಹರಿಸ ಲಾಗಿದ್ದು, ನಾಲ್ವರು ರೈತರು ಮೃತಪಟ್ಟಿದ್ದರು.

ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಸರ್ವೋಚ್ಛ ನ್ಯಾಯಾಲಯವು ಈ ಕಾಯ್ದೆಗಳನ್ನು ಜಾರಿಗೊಳಿಸದಂತೆ ಇದೇ ವರ್ಷದ ಜನವರಿಯಲ್ಲಿ ತಡೆಯಾಜ್ಞೆ ನೀಡಿದೆ.