ಕೋಲ್ಕತಾ : ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾವು ತೀವ್ರವಾಗಿದ್ದು, ಸೋಮವಾರ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಕ್ಷೇತ್ರದ ಎಲ್ಲೆಡೆ ಉದ್ವಿಗ್ನ ಸ್ಥಿತಿ ನಿರ್ಮಾಣ ವಾಗಿದ್ದು , ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿರುವ ಬಗ್ಗೆ ವರದಿಯಾಗಿದೆ.
ಟಿಎಂಸಿಯ ಭದ್ರ ಕೋಟೆ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಭರ್ಜರಿ ಪ್ರಚಾರ ಕೈಗೊಂಡಿದ್ದಿದ್ದು, ನಾಯಕರ ವಿರುದ್ಧ ಘೋಷಣೆ ಕೂಗಿರುವುದು ಮತ್ತು ಪ್ರಚಾರಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಆರೋಪಿಸಲಾಗಿದೆ. ಬಿಜೆಪಿ ನಾಯಕ ದಿಲೀಪ್ ಘೋಷ್ ಅವರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಬಿಜೆಪಿ ನಾಯಕ ಅಮಿತ್ ಮಾಳವೀಯ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರವಾಲ್ ಅವರೂ ಕ್ಷೇತ್ರದೆಲ್ಲೆಡೆ ಬಿಜೆಪಿ ಕಾರ್ಯಕರ್ತರೊಂದಿಗೆ ಬಿರುಸಿನ ಅಂತಿಮ ಹಂತದ ಪ್ರಚಾರ ನಡೆಸುತ್ತಿದ್ದಾರೆ. ಸೆ.30 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 3 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.ಕ್ಷೇತ್ರದೆಲ್ಲೆಡೆ ಬಿಗಿ ಪೋಲಿಸ್ ಭದ್ರತೆ ಕೈಗೊಳ್ಳಲಾಗಿದೆ.
2011 ಮತ್ತು 2016 ರಲ್ಲಿ ಮಮತಾ ಬ್ಯಾನರ್ಜಿ ಅವರು ಭವಾನಿಪುರ ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಿದ್ದರು. 2021 ರ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸುವೇಂದು ಅಧಿಕಾರಿ ವಿರುದ್ಧ ಮಮತಾ ಸೋಲು ಅನುಭವಿಸಿದ ಕಾರಣ ಈ ಉಪ ಚುನಾವಣಾ ನಡೆಯುತ್ತಿದೆ.