ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ನಾಯಕ ಬಾಬಾ ಸಿದ್ದಿಕಿ (Baba Siddique) ಅವರನ್ನು ಅಕ್ಟೋಬರ್ 12ರಂದು ಶನಿವಾರ ಮುಂಬೈನಲ್ಲಿ (Mumbai) ಲಾರೆನ್ಸ್ ಬಿಷ್ಣೋಯ್ (Lawrence Bishnoi) ಗ್ಯಾಂಗ್‌ನ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ದಾಳಿ ನಡೆಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಇನ್ನೊಬ್ಬನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳ ವಿಚಾರಣೆ ವೇಳೆ ಅವರು ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿರುವುದಾಗಿ ಹೇಳಿದ್ದಾರೆ. ಪಂಜಾಬ್ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಅವರ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಮುಖ ಅಪರಾಧಗಳಲ್ಲಿ ಲಾರೆನ್ಸ್ ಬಿಷ್ಣೋಯ್ ಹೆಸರು ಕೇಳಿ ಬಂದಿದೆ.
ಯಾರೀತ ಲಾರೆನ್ಸ್ ಬಿಷ್ಣೋಯ್?
ಪಂಜಾಬ್‌ನ ಫಿರೋಜ್‌ಪುರದ ಹಳ್ಳಿಯೊಂದರಲ್ಲಿ 1993ರ ಫೆಬ್ರವರಿ 12ರಂದು ಜನಿಸಿದ ಲಾರೆನ್ಸ್ ಬಿಷ್ಣೋಯ್‌ನ ತಂದೆ ಹರಿಯಾಣದಲ್ಲಿ ಪೊಲೀಸ್ ಪೇದೆಯಾಗಿದ್ದರು. ಲಾರೆನ್ಸ್ ಹುಟ್ಟಿದ ನಾಲ್ಕು ವರ್ಷಗಳ ಬಳಿಕ ಅವರು ಕೆಲಸ ಬಿಟ್ಟು ಕೃಷಿಯಲ್ಲಿ ತೊಡಗಿಕೊಂಡರು. 12ನೇ ತರಗತಿಯವರೆಗೆ ಬಿಷ್ಣೋಯ್ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ಗಡಿಯಲ್ಲಿರುವ ಅಬೋಹರ್ ಎಂಬ ಸಣ್ಣ ಪಟ್ಟಣದ ಶಾಲೆಯಲ್ಲಿ ಓದಿದ. 2010ರಲ್ಲಿ ಚಂಡೀಗಢಕ್ಕೆ ತೆರಳಿದ ಬಿಷ್ಣೋಯ್ ಡಿಎವಿ ಕಾಲೇಜಿಗೆ ಸೇರಿದ. 2011ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದ ಕ್ಯಾಂಪಸ್ ಸ್ಟೂಡೆಂಟ್ಸ್ ಕೌನ್ಸಿಲ್ ಗೆ ಸೇರಿದ ಬಳಿಕ ಮೊದಲ ಬಾರಿಗೆ ಕುಖ್ಯಾತ ದರೋಡೆಕೋರ ಗೋಲ್ಡಿ ಬ್ರಾರ್‌ನನ್ನು ಭೇಟಿಯಾದ. ಬಳಿಕ ವಿಶ್ವವಿದ್ಯಾಲಯದ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಲಾರೆನ್ಸ್, ಎಲ್‌ಎಲ್‌ಬಿಯನ್ನು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದ.
ಹಲವಾರು ಅಪರಾಧ ಚಟುವಟಿಕೆಯಲ್ಲಿ ಭಾಗಿ
ಹಲವಾರು ಕೊಲೆ ಮತ್ತು ಸುಲಿಗೆ ಸೇರಿದಂತೆ ಬಿಷ್ಣೋಯ್ ವಿರುದ್ಧ 24ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ. ಆದರೆ ಲಾರೆನ್ಸ್ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದಾನೆ. 2010 ಮತ್ತು 2012ರ ನಡುವೆ ಬಿಷ್ಣೋಯ್ ಅಪರಾಧ ಜಗತ್ತಿನಲ್ಲಿ ಹೆಚ್ಚು ಗುರುತಿಸಿಕೊಳ್ಳಲಾರಂಭಿಸಿದ್ದ. ಚಂಡೀಗಢದಲ್ಲಿ ಕೊಲೆ ಯತ್ನ, ಅತಿಕ್ರಮ ಪ್ರವೇಶ, ಹಲ್ಲೆ ಮತ್ತು ದರೋಡೆ ಸೇರಿದಂತೆ ಹಲವಾರು ಅಪರಾಧಗಳಲ್ಲಿ ಬಿಷ್ಣೋಯ್ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಚಂಡೀಗಢದಲ್ಲಿ ಆತನ ವಿರುದ್ಧ ದಾಖಲಾಗಿದ್ದ ಏಳು ಎಫ್‌ಐಆರ್‌ಗಳಲ್ಲಿ ನಾಲ್ಕು ಪ್ರಕರಣಗಳಲ್ಲಿ ಖುಲಾಸೆಗೊಳಿಸಲಾಗಿದೆ. ಇನ್ನೂ ಮೂರು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.
2012ರ ಬಳಿಕ ಹೆಚ್ಚು ಅವಧಿಯನ್ನು ಜೈಲಿನಲ್ಲಿ ಕಳೆದಿರುವ ಬಿಷ್ಣೋಯ್ ಈ ಸಂದರ್ಭದಲ್ಲಿ ಹಲವು ಅಪರಾಧಿಗಳ ನಂಟು ಬೆಳೆಸಿದ. ಜೈಲಿನಿಂದ ಹೊರ ಬಂದ ಬಳಿಕ ಆತ ಶಸ್ತ್ರಾಸ್ತ್ರ ವ್ಯಾಪಾರಿಗಳು ಮತ್ತು ಸ್ಥಳೀಯ ಅಪರಾಧಿಗಳನ್ನು ಭೇಟಿಯಾಗಿ ತನ್ನದೇ ಆದ ಗ್ಯಾಂಗ್ ರೂಪಿಸಿಕೊಂಡ.
2013ರಲ್ಲಿ ಮುಕ್ತಸರ್‌ನ ಸರ್ಕಾರಿ ಕಾಲೇಜು ಚುನಾವಣೆ ವಿಜೇತ ಅಭ್ಯರ್ಥಿ ಮತ್ತು ಲುಧಿಯಾನ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿನ ಪ್ರತಿಸ್ಪರ್ಧಿ ಅಭ್ಯರ್ಥಿಯನ್ನು ಗುಂಡಿಕ್ಕಿ ಕೊಂದ ಆರೋಪ ಈತನ ಮೇಲಿದೆ. 2014ರಲ್ಲಿ ರಾಜಸ್ಥಾನ ಪೊಲೀಸರು ಎನ್‌ಕೌಂಟರ್ ನಡೆಸಿ ಬಿಷ್ಣೋಯ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ ಜೈಲಿನಲ್ಲೇ ಈತ ಅನೇಕ ಕೊಲೆಗಳಿಗೆ ಸಂಚು ರೂಪಿಸಿದ. 2016ರಲ್ಲಿ ದರೋಡೆಕೋರ ಜೈಪಾಲ್ ಭುಲ್ಲರ್ ಮೇಲೆ ಗುಂಡಿನ ದಾಳಿ ನಡೆಸಿದ.
ಜೈಲಿನಲ್ಲಿದ್ದರೂ ಬಿಷ್ಣೋಯ್ ತನ್ನ ಸಹಚರರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ. 2021ರಲ್ಲಿ ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (MCOCA) ಅಡಿಯಲ್ಲಿ ಈತನ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯ ತಿಹಾರ್ ಜೈಲಿಗೆ ಕಳುಹಿಸಲಾಯಿತು. ಯಾವುದೇ ಜೈಲಿನಲ್ಲಿದ್ದರೂ ಬಿಷ್ಣೋಯ್ ಜೈಲಿನ ಹೊರಗೆ ತನ್ನ ಜನರೊಂದಿಗೆ ಸಂವಹನ ನಡೆಸಲು ಒಂದಲ್ಲ ಒಂದು ರೀತಿಯ ಮಾರ್ಗವನ್ನು ಬಳಸಿದ್ದಾನೆ ಎನ್ನುತ್ತಾರೆ ಜೈಲು ಅಧಿಕಾರಿಗಳು. ಪೊಲೀಸ್ ಅಧಿಕಾರಿಗಳ ಪ್ರಕಾರ, ಬಿಷ್ಣೋಯ್ ಗ್ಯಾಂಗ್‌ನ 700ಕ್ಕೂ ಹೆಚ್ಚು ಸದಸ್ಯರು ಬೇರೆ ಬೇರೆ ದೇಶಗಳಲ್ಲಿ ಅಕ್ರಮ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜೈಲಿನಿಂದ ಈತ ಕೊಡುವ ಸಂದೇಶವನ್ನು ಅವರು ಚಾಚೂತಪ್ಪದೇ ಪಾಲಿಸಿ ಪಾತಕ ಕೃತ್ಯ ಎಸಗುತ್ತಾರೆ.
ನಟ ಸಲ್ಮಾನ್ ಖಾನ್‌ನನ್ನು ಕೊಲ್ಲುವ ಶಪಥ
ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಭಾಗಿಯಾಗಿರುವ ಕಾರಣ ನಟ ಸಲ್ಮಾನ್ ಖಾನ್ ಹತ್ಯೆಗೆ ಬಿಷ್ಣೋಯ್ ಹಲವು ಬಾರಿ ಪ್ರಯತ್ನಿಸಿದ್ದ. 2018ರಲ್ಲಿ ಬಿಷ್ಣೋಯ್‌ನ ಸಹವರ್ತಿ ಸಂಪತ್ ನೆಹ್ರಾ ಎಂಬಾತ ಸಲ್ಮಾನ್ ಖಾನ್ ಮನೆಯ ಮೇಲೆ ಕಣ್ಣಿಟ್ಟಿದ್ದ. ಸುಲಿಗೆ ಪ್ರಕರಣದ ವಿಚಾರಣೆಗಾಗಿ ರಾಜಸ್ಥಾನದ ಜೋಧ್‌ಪುರ ನ್ಯಾಯಾಲಯಕ್ಕೆ ಸಾಗಿಸುವಾಗ ಬಿಷ್ಣೋಯ್, “”ಸಲ್ಮಾನ್ ಖಾನ್ ಅವರನ್ನು ಜೋಧ್‌ಪುರದಲ್ಲಿ ಕೊಲ್ಲಲಾಗುವುದು. ಅನಂತರ ನಮ್ಮ ನಿಜವಾದ ಗುರುತು ಅವನಿಗೆ ತಿಳಿಯುತ್ತದೆʼʼ ಎಂದು ಬೆದರಿಕೆ ಹಾಕಿದ್ದ.
2024ರ ಜೂನ್‌ನಲ್ಲಿ ಸಲ್ಮಾನ್ ಖಾನ್ ಕಾರಿನ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಬಿಷ್ಣೋಯ್ ಗ್ಯಾಂಗ್‌ನ ನಾಲ್ವರನ್ನು ನವಿ ಮುಂಬೈ ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿಗಳನ್ನು ಧನಂಜಯ್ ತಪೇಸಿಂಗ್ ಅಲಿಯಾಸ್ ಅಜಯ್ ಕಶ್ಯಪ್, ಗೌರವ್ ಭಾಟಿಯಾ ಅಲಿಯಾಸ್ ನಹ್ವಿ, ವಾಸ್ಪಿ ಖಾನ್ ಅಲಿಯಾಸ್ ವಾಸಿಂ ಚಿಕ್ನಾ ಮತ್ತು ರಿಜ್ವಾನ್ ಖಾನ್ ಅಲಿಯಾಸ್ ಜಾವೇದ್ ಖಾನ್ ಎಂದು ಗುರುತಿಸಲಾಗಿದೆ.
ಸಿದ್ದು ಮೂಸೆವಾಲಾ ಹತ್ಯೆ
2022ರ ಮೇ 29ರಂದು ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಪಂಜಾಬ್‌ನ ಮಾನ್ಸಾದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಕೊಲೆಯ ಹೊಣೆಯನ್ನು ದರೋಡೆಕೋರ ಗೋಲ್ಡಿ ಬ್ರಾರ್ ವಹಿಸಿಕೊಂಡಿದ್ದ. ಆ ಸಮಯದಲ್ಲಿ ಬಿಷ್ಣೋಯ್ ನನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. ಘಟನೆಯ ಅನಂತರ ದೆಹಲಿ ಪೊಲೀಸರು ತನಿಖೆಗಾಗಿ ಆತನನ್ನು 5 ದಿನಗಳ ಕಸ್ಟಡಿಗೆ ತೆಗೆದುಕೊಂಡಿದ್ದರು.
ಮೂಸೆವಾಲಾ ಹತ್ಯೆಯ ಅನಂತರ ಬಿಷ್ಣೋಯ್ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಪಂಜಾಬ್ ಪೊಲೀಸರು ತನ್ನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಬಹುದು ಎಂದು ಹೇಳಿದ್ದ. ಹೀಗಾಗಿ ತನ್ನ ಸುರಕ್ಷತೆಗಾಗಿ ದೆಹಲಿ ಪೊಲೀಸರು ಮತ್ತು ತಿಹಾರ್ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಇದೇ ರೀತಿಯ ಮನವಿಯನ್ನು ಸಲ್ಲಿಸಿದ್ದ.
ಖಲಿಸ್ತಾನಿ ಭಯೋತ್ಪಾದಕ ಸುಖದೂಲ್ ಸಿಂಗ್ ಹತ್ಯೆ
2021ರ ಸೆಪ್ಟೆಂಬರ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ, ದವೀಂದರ್ ಬಾಂಬಿಹಾ ಗ್ಯಾಂಗ್‌ನ ದರೋಡೆಕೋರ ಸುಖದೂಲ್ ಸಿಂಗ್ ಅಲಿಯಾಸ್ ಸುಖ ಡುನೆಕೆಯನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದರು. ಸುಖ್ದೂಲ್ ಸಿಂಗ್‌ನನ್ನು ‘ಸುಖಾ ದುನೆಕೆ’ ಎಂದೂ ಕರೆಯಲಾಗುತ್ತಿತ್ತು. ಈತ ಭಾರತದ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದ.
Baba Siddique: ಬಾಬಾ ಸಿದ್ದಿಕಿ ಹಂತಕರ ಕುಟುಂಬಸ್ಥರು ಹೇಳೋದೇನು? ಇಲ್ಲಿದೆ ವಿಡಿಯೋ
ಸುಖದೇವ್ ಸಿಂಗ್ ಗೊಗಮೆಡಿ ಹತ್ಯೆ
ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೇಡಿ ಅವರನ್ನು 2023ರ ಡಿಸೆಂಬರ್ 5ರಂದು ರಾಜಸ್ಥಾನದ ಜೋಧ್‌ಪುರದಲ್ಲಿ ಅವರ ಮನೆಯ ಕೋಣೆಯಲ್ಲಿ ಗುಂಡಿನ ದಾಳಿ ನಡೆಸಿ ಕೊಲ್ಲಲಾಗಿತ್ತು.
ಈ ಘಟನೆಯ ಸಿಸಿಟಿವಿ ವಿಡಿಯೋದಲ್ಲಿ ದಾಖಲಾಗಿದೆ. ಬಿಷ್ಣೋಯ್ ಗ್ಯಾಂಗ್ ಸದಸ್ಯ ರೋಹಿತ್ ಗೋಡಾರಾ ಈ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ. ಹೀಗೆ ದೇಶಾದ್ಯಂತ ನಡೆಯುವ ಹಲವು ಹತ್ಯೆ ಪ್ರಕರಣಗಳಲ್ಲಿ ಈತನ ಕೈವಾಡವಿದೆ.