Thursday, 24th October 2024

ಭಾರತೀಯ ವಾಯುಪಡೆಗೆ ಲಘು ಯುದ್ಧ ಹೆಲಿಕಾಪ್ಟರ್ ಸೇರ್ಪಡೆ

ಜೈಪುರ: ಪ್ರಚಂಡ್ ಹೆಸರಿನ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಲಘು ಯುದ್ಧ ಹೆಲಿಕಾಪ್ಟರ್ (ಎಲ್‌ಸಿಎಚ್‌) ಮೊದಲ ಬ್ಯಾಚ್ ಅನ್ನು ಸೋಮವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮುಖದಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆ ಗೊಳಿಸಲಾಯಿತು.

ರಾಜಸ್ಥಾನದ ಜೋಧ್‌ಪುರದಲ್ಲಿ ಸೇರ್ಪಡೆ ಸಮಾರಂಭ ನಡೆದಿದ್ದು, ಕೇಂದ್ರ ಸಚಿವರೊಂದಿಗೆ ಹೊಸದಾಗಿ ನೇಮಕಗೊಂಡ ರಕ್ಷಣಾ ಸಿಬ್ಬಂದಿ (ಸಿಡಿಎಸ್) ಅನಿಲ್ ಚೌಹಾಣ್ ಕೂಡ ಉಪಸ್ಥಿತರಿದ್ದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖ ದಲ್ಲಿ ಸ್ವದೇಶಿ ಹೆಲಿಕಾಪ್ಟರ್‌ಗಳನ್ನು ಐಎಎಫ್‌ಗೆ ಸೇರ್ಪಡೆಗೊಳಿಸಲಾಯಿತು. ಹೆಲಿಕಾಪ್ಟರ್‌ಗಳ ಸೇರ್ಪಡೆಯು ಐಎಎಫ್‌ನ ಯುದ್ಧ ಸಾಮರ್ಥ್ಯಕ್ಕೆ ದೊಡ್ಡ ಉತ್ತೇಜನ ನೀಡಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದರು.

ವಾಯುಪಡೆ ಮತ್ತು ಸೇನೆಗೆ ಈ 15 ಲಘು ಯುದ್ಧ ವಿಮಾನಗಳನ್ನು ಖರೀದಿಸಲು ಅನುಮತಿ ನೀಡಿದ ಕ್ಯಾಬಿನೆಟ್ ಸಮಿತಿಯಲ್ಲಿ ಅವರು ಉಪಸ್ಥಿತರಿದ್ದರು.

ಸಶಸ್ತ್ರ ಪಡೆಗಳ ಅವಶ್ಯಕತೆಗಳನ್ನು ಪೂರೈಸಲು ಚಾಪರ್‌ಗಳನ್ನು ಲಡಾಖ್ ಮತ್ತು ಮರುಭೂಮಿ ವಲಯದಲ್ಲಿ ವ್ಯಾಪಕವಾಗಿ ಹಾರಿಸಲಾಗಿದೆ. ಚಿನೂಕ್ಸ್, ಅಪಾಚೆ ದಾಳಿ ಹೆಲಿಕಾಪ್ಟರ್‌ಗಳು ಮತ್ತು ಈಗ ಎಲ್‌ಸಿಎಚ್‌ಗಳ ಇಂಡಕ್ಷನ್‌ನೊಂದಿಗೆ ಐಎಎಫ್ ಕಳೆದ ಮೂರರಿಂದ ನಾಲ್ಕು ವರ್ಷಗಳಲ್ಲಿ ಅನೇಕ ಹೆಲಿಕಾಪ್ಟರ್‌ಗಳನ್ನು ತನ್ನ ಬಳಗಕ್ಕೆ ಸೇರಿಸಿದೆ.