ನವದೆಹಲಿ: ದೇಶದೆಲ್ಲೆಡೆ ಮಕರ ಸಂಕ್ರಾಂತಿ (Makar Sankranti 2025)ಯ ಸಂಭ್ರಮ ಮನೆ ಮಾಡಿದೆ. ಮಕರ ಸಂಕ್ರಾಂತಿ ಮಂಗಳವಾರ (ಜ. 14) ನಡೆಯಲಿದ್ದು, ಅದರ ಮುನ್ನ ದಿನವಾದ ಸೋಮವಾರ ಉತ್ತರ ಭಾರತದಲ್ಲಿ ಲೋಹ್ರಿ ಹಬ್ಬ (Lohri 2025)ವನ್ನು ಆಚರಿಸಲಾಗುತ್ತಿದೆ. ವಿಶೇಷವಾಗಿ ಸಿಖ್ ಸಮುದಾಯದವರು ಈ ಲೋಹ್ರಿ ಹಬ್ಬವನ್ನು ಸಡಗರದಿಂದ ಕೊಂಡಾಡುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದಿಲ್ಲಿ ಸಮೀಪದ ನರೈನಾ (Naraina) ಹಳ್ಳಿಗೆ ತೆರಳಿದ್ದು, ಅಲ್ಲಿನ ಜನರೊಂದಿಗೆ ಬೆರೆತು ಹಬ್ಬವನ್ನು ಇನ್ನಷ್ಟು ವಿಶೇಷವಾಗಿಸಿದ್ದಾರೆ. ಪವಿತ್ರ ಲೋಹ್ರಿ ಅಗ್ನಿಯನ್ನು ಮೋದಿ ಅವರು ಬೆಳಗಿಸಿದ್ದು, ಬಳಿಕ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಸಿಖ್ ಸಮುದಾಯದ ಮುಖ್ಯ ಹಬ್ಬವಾಗಿರುವ ಲೋಹ್ರಿಯನ್ನು ಮಕರ ಸಂಕ್ರಾಂತಿಗೆ ಒಂದು ದಿನ ಮೊದಲು ಆಚರಿಸಲಾಗುತ್ತದೆ.
ಲೋಹ್ರಿಯನ್ನು ಉತ್ತರ ಭಾರತದ ಹಲವೆಡೆ ಆಚರಿಸಲಾಗುತ್ತದೆ. ಅದರಲ್ಲಿಯೂ ಪಂಜಾಬ್ ಮತ್ತು ಹರಿಯಾಣದಲ್ಲಿ ಈ ಹಬ್ಬ ಬಹಳ ವಿಶೇಷ ಎನಿಸಿಕೊಂಡಿದೆ. ಇದು ಚಳಿಗಾಲದ ಕೊನೆಯನ್ನು ಸಂಕೇತಿಸುತ್ತದೆ. ಹಬ್ಬದಂದು ಒಂದೆಡೆ ಸೇರುವ ಗ್ರಾಮಸ್ಥರು ಪವಿತ್ರ ಬೆಳಕಿನ ಸಮ್ಮುಖದಲ್ಲಿ ಬೆಲ್ಲ, ಧಾನ್ಯ, ಎಳ್ಳು ಮುಂತಾದ ವಸ್ತುಗಳನ್ನು ಪರಸ್ಪರ ಹಂಚಿ ಹಬ್ಬದ ಶುಭಾಶಯ ತಿಳಿಸುತ್ತಾರೆ.
Here are some more pictures from the Sankranti programme. Also lit the Bhogi fire. pic.twitter.com/lmD2m7vqE9
— Narendra Modi (@narendramodi) January 13, 2025
ಅಲ್ಲದೆ ಹಬ್ಬದ ಆಚರಣೆ ವೇಳೆ ಸಾಂಪ್ರದಾಯಿಕ ಜಾನಪದ ಹಾಡನ್ನು ಪ್ರಸ್ತುತ ಪಡಿಸಲಾಗುತ್ತದೆ. ಜತೆಗೆ ಬೆಂಕಿಯ ಸುತ್ತಲೂ ಭಂಗ್ರಾ ಮತ್ತು ಗಿದ್ದಾ ನೃತ್ಯ ಮಾಡಲಾಗುತ್ತದೆ.
ಮಹಾ ಕುಂಭಮೇಳ ಆರಂಭ
ಇನ್ನು ಸೋಮವಾರ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ಆರಂಭವಾಗಿದ್ದು, ಈ ಬಗ್ಗೆ ಮೋದಿ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಮಹಾ ಕುಂಭಮೇಳ 2025ರ ಮೊದಲ ಸ್ನಾನದ ಹಬ್ಬವಾದ ಪೌಶ್ ಪೂರ್ಣಿಮೆ ಇಂದು ನೆರವೇರಿದೆ. ಮಹಾಕುಂಭ 2025ರ ಮೊದಲ ಸ್ನಾನದ ಹಬ್ಬವಾದ ಪೌಶ್ ಪೂರ್ಣಿಮೆಯ ಸಂದರ್ಭದಲ್ಲಿ ಸುಮಾರು 1 ಕೋಟಿ 60 ಲಕ್ಷ ಭಕ್ತರು ಇಂದು ಸಂಜೆ 4 ಗಂಟೆಯವರೆಗೆ ಪವಿತ್ರ ಸ್ನಾನ ಮಾಡಿದ್ದಾರೆ.
“ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ನಂಬುವ ಕೋಟ್ಯಂತರ ಜನರಿಗೆ ವಿಶೇಷ ದಿನವಾದ ಮಹಾ ಕುಂಭ 2025 ಪ್ರಯಾಗ್‌ರಾಜ್‌ನಲ್ಲಿ ಪ್ರಾರಂಭವಾಗಿದೆ. ಅಸಂಖ್ಯಾತ ಜನರು ನಂಬಿಕೆಯ ಪವಿತ್ರ ಸಂಗಮದಲ್ಲಿ ಸೇರಿದ್ದಾರೆ. ಸಮರ್ಪಣೆ ಮತ್ತು ಸಂಸ್ಕೃತಿಯ ಪ್ರತೀಕ ಮಹಾಕುಂಭವು ಭಾರತದ ಶಾಶ್ವತ ಪರಂಪರೆಯ ಸಂಕೇತವಾಗಿದೆʼʼ ಎಂದು ಮೋದಿ ಹೇಳಿದ್ದಾರೆ.
“ಪವಿತ್ರ ಸ್ನಾನ ಮಾಡಲು ಮತ್ತು ಸಂತರ ಆಶೀರ್ವಾದ ಪಡೆಯಲು ಅಸಂಖ್ಯಾತ ಜನರು ಇಲ್ಲಿಗೆ ಆಗಮಿಸುತ್ತಿರುವುದನ್ನು ನೋಡಿ ನಾನು ಭಾವಪರವಶನಾಗಿದ್ದೇನೆʼʼ ಎಂದು ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: MahaKumbh 2025: ಮಹಾಕುಂಭ ಮೇಳದ ಮೊದಲ ದಿನ 1.60 ಕೋಟಿ ಭಕ್ತರಿಂದ ಪುಣ್ಯ ಸ್ನಾನ; ಭಕ್ತಿ ಭಾವದ ಪರವಶ ಕ್ಷಣ!