Friday, 27th December 2024

Lok Sabha Polls: ಮತದಾರರು ಹೆಚ್ಚಿದ್ದರೂ ಮತದಾನ ಕಡಿಮೆ! ಚುನಾವಣಾ ಆಯೋಗದಿಂದ ಮಾಹಿತಿ

ನವದೆಹಲಿ: ದೇಶದ ಮತದಾರರ ಸಂಖ್ಯೆ ಹೆಚ್ಚಿದ್ದರೂ ಈ ಬಾರಿಯ ಲೋಕಸಭಾ ಚುನಾವಣೆಯ ಮತದಾನ ಪ್ರಮಾಣ ಕಡಿಮೆಯಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ (Lok Sabha Polls).

2024ರ ಸಾರ್ವತ್ರಿಕ ಚುನಾವಣೆಗಳಲ್ಲಿನ (General Election) ಮತದಾರರ ಪ್ರಮಾಣವು ಶೇ. 1.3ಕ್ಕಿಂತ ಕಡಿಮೆಯಾಗಿದ್ದು, 2014ರಲ್ಲಿ ಶೇ. 67.3ರಿಂದ ಈ ವರ್ಷ ಶೇ. 65.978ಕ್ಕೆ ಇಳಿದಿದೆ. ಆದರೆ ಚಲಾವಣೆಯಾದ ಮತಗಳ ಸಂಖ್ಯೆಯು 2019ಕ್ಕಿಂತ ಈ ಬಾರಿ ಶೇ. 5.3ರಷ್ಟು ಹೆಚ್ಚಾಗಿದೆ. ಅಂದರೆ 2019ರಲ್ಲಿ 614 ಮಿಲಿಯನ್‌ (61.4 ಕೋಟಿ) ಮಂದಿ ಹಕ್ಕು ಚಲಾಯಿಸಿದ್ದರೆ. 2024ರಲ್ಲಿ 646.4 ಮಿಲಿಯನ್ (64.64 ಕೋಟಿ) ಮಂದಿ ಮತದಾನ ಮಾಡಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗ (Election Commission Of India) ಗುರುವಾರ ತಿಳಿಸಿದೆ.

ಇವಿಎಂಗಳ (Electronic Voting Machine) ಮೂಲಕ ಚಲಾವಣೆಯಾದ 6,42,139,275 ಮತಗಳಲ್ಲಿ ಶೇ. 51.29 ಮತಗಳು (3,2,9,361,948) ಪುರುಷರು, ಶೇ. 48.7% (3,12,764,269) ಮಹಿಳೆಯರು ಮತ್ತು 0.002% (13,058) ತೃತೀಯ ಲಿಂಗಿಗಳು ಎಂದು ಹೇಳಲಾಗಿದೆ. ಚುನಾವಣೆ ಆಯೋಗ ಬಿಡುಗಡೆ ಮಾಡಿದ 42 ಅಂಕಿ ಅಂಶಗಳ ವರದಿಗಳ ಪ್ರಕಾರ, ಅರ್ಹ ಮತದಾರರ ಸಂಖ್ಯೆ 2019ರಲ್ಲಿ 911.9 ಮಿಲಿಯನ್‌ (91.19 ಕೋಟಿ)ನಿಂದ 2024ರಲ್ಲಿ 979.8 ಮಿಲಿಯನ್‌ (97.98 ಕೋಟಿ)ಗೆ ಶೇ. 7.43ಕ್ಕೆ ಏರಿಕೆಯಾಗಿದೆ. ಈ ವರದಿಗಳು ಪ್ರತಿ ಲೋಕಸಭಾ ಚುನಾವಣೆ ನಡೆದ ಕೆಲವು ತಿಂಗಳ ನಂತರ ಬಿಡುಗಡೆಯಾಗುತ್ತವೆ.

2024ರಲ್ಲಿ 6,46,420,869 ಮತಗಳನ್ನು ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೂಲಕ ಚಲಾವಣೆ ಮಾಡಲಾಗಿದ್ದು, ಅದರಲ್ಲಿ 4,281,594 (ಶೇ. 0.67) ಅಂಚೆ ಮತಪತ್ರಗಳ ಮೂಲಕ ಚಲಾವಣೆಯಾಗಿದೆ ಎಂದು ವರದಿ ಹೇಳಿದೆ. ಒಟ್ಟಾರೆ ಚಲಾವಣೆಯಾದ ಮತಗಳಲ್ಲಿ (ಇವಿಎಂಗಳು ಮತ್ತು ಅಂಚೆ ಮತಪತ್ರಗಳು), 6,38,990,692 ಅನ್ನು ಮಾನ್ಯವೆಂದು ಪರಿಗಣಿಸಲಾಗಿದೆ. ಆದರೆ 1,058,338 ಮತಗಳನ್ನು ತಿರಸ್ಕರಿಸಲಾಗಿದೆ ಅಥವಾ ಎಣಿಕೆ ಮಾಡಲಾಗಿಲ್ಲ ಎಂಬ ಮಾಹಿತಿಯಿದೆ.

ಸ್ಪಷ್ಟವಾಗಿ ಹೇಳುವುದಾದರೆ ಸೂರತ್ (ಗುಜರಾತ್)ನ ಒಂದು ಸಂಸದೀಯ ಕ್ಷೇತ್ರದಲ್ಲಿ ಅಭ್ಯರ್ಥಿಯು ಅವಿರೋಧವಾಗಿ ಗೆದ್ದಿದ್ದರಿಂದ ಅಲ್ಲಿ ಯಾವುದೇ ಮತಗಳು ಚಲಾವಣೆಯಾಗಿಲ್ಲ. ಆದರೆ ಮತದಾನ ಮಾಡಿದ 542 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ ಶೇ. 50ಕ್ಕಿಂತ ಕಡಿಮೆ ಮತದಾನವಾಗಿದೆ, ಶ್ರೀನಗರವು 2014ರಲ್ಲಿ ಶೇ. 14.4ಕ್ಕೆ ಹೋಲಿಸಿದರೆ ಶೇ. 38.7ರಷ್ಟು ಕಡಿಮೆ ಮತದಾನವನ್ನು ಕಂಡಿದೆ. ಮತ್ತೊಂದೆಡೆ ಅಸ್ಸಾಂನ ಧುಬ್ರಿ ಅತಿ ಹೆಚ್ಚು ಮತದಾನವನ್ನು ಕಂಡಿದೆ. ಶೇ. 92.3ರಷ್ಟು ಮತದಾನವಾಗಿದೆ.

ಈ ಸುದ್ದಿಯನ್ನೂ ಓದಿ: Sonu Sood: ಬಾಲಿವುಡ್‌ ನಟ ಸೋನು ಸೂದ್‌ಗೆ ಸಿಎಂ ಸ್ಥಾನ ಆಫರ್? ಭಾರೀ ವೈರಲ್‌ ಆಗ್ತಿದೆ ಈ ವಿಡಿಯೊ