ತಿರುವನಂತಪುರಂ: ವಿಶ್ವ ಶಾಂತಿ (World peace)ಗಾಗಿ ಪ್ರಾರ್ಥಿಸಿ ಕೇರಳದ ಕಾಸರಗೋಡು ಮೂಲದ ಇಬ್ಬರು ಅಯ್ಯಪ್ಪ ಭಕ್ತರು (Lord Ayyappa Devotees) ಉತ್ತರ ಭಾರತದಿಂದ 8,000 ಕಿ.ಮೀ. ದೂರದ ಶಬರಿಮಲೆಗೆ ಕಾಲ್ನಡಿಗೆಯಲ್ಲಿ ಆಗಮಿಸಿದ್ದಾರೆ. ಈ ಗುರಿಯನ್ನು ಇವರು ಸುಮಾರು 223 ದಿನಗಳಲ್ಲಿ ತಲುಪಿದ್ದಾರೆ ಎಂದು ಟ್ರಾವಂಕೂರು ದೇವಸ್ವಂ ಬೋರ್ಡ್ (TDB) ತಿಳಿಸಿದೆ. ಕಾಸರಗೋಡಿನ ಕೂಡ್ಲು ರಾಮ್‌ದಾಸ್ ನಗರದ ಸನತ್ ಕುಮಾರ್ ನಾಯಕ್ ಮತ್ತು ಸಂಪತ್ ಕುಮಾರ್ ಶೆಟ್ಟಿ ಈ ಸಾಹಸ ಮೆರೆದವರು.
ಸನತ್ ಕುಮಾರ್ ನಾಯಕ್ ಮತ್ತು ಸಂಪತ್ ಕುಮಾರ್ ಶೆಟ್ಟಿ ಕೇರಳದಿಂದ ರೈಲಿನಲ್ಲಿ ಹೊರಟು 2024ರ ಮೇ 26ರಂದು ಭದ್ರಿನಾಥ್‌ಗೆ ತಲುಪಿದ್ದರು. ಬಳಿಕ ಅವರು ತಮ್ಮ ‘ಇರುಮುಡಿ ಕಟ್ಟು’ (ಭಕ್ತರು ಅಯ್ಯಪ್ಪ ದೇಗುಲಕ್ಕೆ ತರುವ ಸಾಂಪ್ರದಾಯಿಕ ಕಟ್ಟು) ಅನ್ನು ಭರ್ತಿ ಮಾಡಿ ಜೂನ್ 3ರಂದು ಶಬರಿಮಲೆಗೆ ಕಾಲ್ನಡಿಗೆಯಲ್ಲಿ ಹೊರಟಿದ್ದರು ಎಂದು ಟಿಡಿಬಿ ಪ್ರಕಟಣೆಯಲ್ಲಿ ತಿಳಿಸಿದೆ.
ತಮ್ಮ ಪ್ರಯಾಣದಲ್ಲಿ ಅವರು ಶಂಕರಾಚಾರ್ಯರು ಸ್ಥಾಪಿಸಿದ 4 ಮಠಗಳು ಸೇರಿದಂತೆ ವಿವಿಧ ಯಾತ್ರಾ ಸ್ಥಳಗಳು ಮತ್ತು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ ಮತ್ತು ಅಯೋಧ್ಯೆ, ಉಜ್ಜಯಿನಿ, ದ್ವಾರಕಾ, ಪುರಿ, ಜಗನ್ನಾಥ, ರಾಮೇಶ್ವರಂ, ಅಚಂಕೋವಿಲ್ ಮತ್ತು ಎರುಮೇಲಿ ಮೂಲಕ ಸನ್ನಿಧಾನ ತಲುಪಿದ್ದಾರೆ.
ʼʼಕಾಲ್ನಡಿ ಯಾತ್ರೆಯ ವೇಳೆ ನಾವು ವಿವಿಧ ದೇಗುಲಗಳಿಗೆ ಭೇಟಿ ನೀಡಿದ್ದೇವೆ. ಕೆಲವೊಮ್ಮೆ ನಾವೇ ಅಡುಗೆ ತಯಾರಿಸಿದ್ದೇವೆ. ಈ ಮೂಲಕ 8,000 ಕಿ.ಮೀ. ದೂರವನ್ನು ಸುಮಾರು 7 ತಿಂಗಳಲ್ಲಿ ಕ್ರಮಿಸಿದ್ದೇವೆʼʼ ಎಂದು ಅವರು ಮಾಹಿತಿ ನೀಡಿದ್ದಾರೆ.
ಶನಿವಾರ (ಜ. 11) ಶಬರಿಮಲೆ ದೇಗುಲಕ್ಕೆ ತಲುಪಿದ ಇವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಚುಕ್ಕು ವೆಳ್ಳಂ (ಒಣ ಶುಂಠಿ ಹಾಕಿ ತಯಾರಿಸಿದ ನೀರು) ನೀಡಿ ವಿಶೇಷ ಅಧಿಕಾರಿಗಳಾದ ಪ್ರವೀಣ್ ಮತ್ತು ಗೋಪಕುಮಾರ್ ಬರಮಾಡಿಕೊಂಡರು.
ಸನತ್ ವೃತ್ತಿಯಲ್ಲಿ ಫ್ರಿಲ್ಯಾನ್ಸ್ ಫೋಟೊಗ್ರಾಫರ್ ಆಗಿದ್ದರೆ ಸಂಪತ್ ಸೋಫಾ ಕಾರ್ಮಿಕರು. ಪ್ರತಿವರ್ಷ ಇವರು ಕಾಸರಗೋಡಿನಿಂದ ಸುಮಾರು 484 ಕಿ.ಮೀ. ದೂರದ ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಈ ಬಾರಿ ಇದಕ್ಕಿಂತ ದೊಡ್ಡದಾಗಿ ಏನಾದರೂ ಮಾಡಬೇಕೆಂದು ಯೋಜನೆ ರೂಪಿಸಿ ಈ ಸಾಹಸಕ್ಕೆ ಕೈ ಹಾಕಿದ್ದರು.
ವ್ಯಾಪಕ ಪ್ರಶಂಸೆ
ʼʼಅಯೋಧ್ಯೆ ರಾಮ ಮಂದಿರ, ಗುಜರಾತ್‌ನ ದ್ವಾರಕ, ಒಡಿಶಾದ ಪುರಿ ಹೀಗೆ ವಿವಿಧ ದೇಗುಲಗಳಿಗೆ ಭೇಟಿ ನೀಡಿದ ಅವರು ತಮಿಳುನಾಡಿನ ರಾಮೇಶ್ವರಂ ಮೂಲಕ ಕೇತರ ಪ್ರವೇಶಿಸಿದ್ದಾರೆʼʼ ಎಂದು ಮೂಲಗಳು ತಿಳಿಸಿವೆ. ಇವರು ಪ್ರತಿ ದಿನ ಕನಿಷ್ಠ 25 ಕಿ.ಮೀ. ಮತ್ತು ಗರಿಷ್ಠ 50 ಕಿ.ಮೀ. ನಡೆದಿದ್ದಾರೆ. ಜತೆಗೆ ರಾತ್ರಿ ದೇಗುಲಗಳಲ್ಲಿ ತಂಗಿ ಪ್ರಯಾಣ ಮುಂದುವರಿಸಿದ್ದಾರೆ. ಮಹತ್ಕಾರ್ಯಕ್ಕಾಗಿ ಬಹುದೊಡ್ಡ ಸಾಹಸ ಮೆರೆದ ಸನತ್ ಕುಮಾರ್ ನಾಯಕ್ ಮತ್ತು ಸಂಪತ್ ಕುಮಾರ್ ಶೆಟ್ಟಿ ಅವರ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಈ ಸುದ್ದಿಯನ್ನೂ ಓದಿ: Clean Air: ಮಡಿಕೇರಿ ದೇಶದಲ್ಲೇ ಅತ್ಯಂತ ಸ್ವಚ್ಛ ಗಾಳಿಯ ನಗರ: ಅಧ್ಯಯನ ವರದಿ