Friday, 22nd November 2024

Vinesh Phogat : ವಿನೇಶ್‌ ಮಾಡಿದ್ದು ದೇಶದ್ರೋಹದ ಕೆಲಸ, ಒಲಿಂಪಿಕ್ಸ್‌ನಲ್ಲಿ 6 ಪದಕಗಳು ಸಿಗದಂತೆ ಮಾಡಿದರು; ಸಂಜಯ್ ಸಿಂಗ್

Vinesh phogat

ನವದೆಹಲಿ: ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಒಲಿಂಪಿಯನ್ ಕುಸ್ತಿಪಟುಗಳಾದ ವಿನೇಶ್ ಫೋಗಟ್ (Vinesh Phogat) ಮತ್ತು ಬಜರಂಗ್ ಪೂನಿಯಾ ಕಾಂಗ್ರೆಸ್ ಸೇರಿದ್ದಾರೆ. ಆ ಬಳಿಕ ಅವರ ವಿರುದ್ಧ ಟೀಕೆಗಳು ಬರುತ್ತಿವೆ. ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಮುಖ್ಯಸ್ಥ ಸಂಜಯ್ ಸಿಂಗ್ ಶುಕ್ರವಾರ ಅವರಿಬ್ಬರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು ಅವರು ಮಾಡಿದ್ದು ದೇಶದ್ರೋಹದ ಕೆಲಸ ಎಂದು ಆರೋಪಿಸಿದ್ದಾರೆ. ಅವರು ಕಾಂಗ್ರೆಸ್‌ ಸೇರಿದ್ದರಲ್ಲಿ ಯಾವುದೇ ಆಶ್ಚರ್ಯ ಇಲ್ಲ ಎಂದು ಹೇಳಿದ್ದಾರೆ.

ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿದ ಸಿಂಗ್, ವಿನೇಶ್ ಮತ್ತು ಪುನಿಯಾ ಇಲ್ಲಿಯವರೆಗೆ ಮೆಚ್ಚುಗೆ ಪಡೆದ ಕುಸ್ತಿಪಟುಗಳಾಗಿದ್ದರು. ಆದರೆ ಇನ್ನು ಮುಂದೆ ಅವರನ್ನು ಕಾಂಗ್ರೆಸ್‌ನ ದಾಳಗಳಾಗಿರುತ್ತಾರೆ. ರಾಷ್ಟ್ರ ರಾಜಧಾನಿಯಲ್ಲಿ ಕುಸ್ತಿಪಟುಗಳ ಪ್ರತಿಭಟನೆಗೆ ಯಾರು ತುಪ್ಪ ಸುರಿದರು ಎಂಬುದು ಈಗ ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ. ಹರಿಯಾಣದ ಇಬ್ಬರು ಕುಸ್ತಿಪಟುಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಸಿಂಗ್, ಅವರ ಪ್ರೇರಿತ ಪ್ರತಿಭಟನೆಯಿಂದಾಗಿ ರಾಷ್ಟ್ರವು ಭಾರಿ ಬೆಲೆ ತೆರಬೇಕಾಯಿತು, ಇದನ್ನು ಕಾಂಗ್ರೆಸ್ ಬೆಂಬಲಿಸಿದೆ ಎಂದು ಆರೋಪಿಸಿದರು.

ಒಲಿಂಪಿಕ್ ವರ್ಷದಲ್ಲಿ ಕಾಂಗ್ರೆಸ್ ಮತ್ತು ಈ ಕುಸ್ತಿಪಟುಗಳು ದೇಶದ್ರೋಹದ ಕೃತ್ಯ ಎಸಗಿದ್ದಾರೆ. ಅವರ ಕಾರಣದಿಂದಾಗಿ ನಾವು ಕನಿಷ್ಠ ಆರು ಪದಕಗಳನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದ ಡಬ್ಲ್ಯುಎಫ್ಐ ಮುಖ್ಯಸ್ಥರು ಅವರ ‘ಒಳಸಂಚು’ ವಿರುದ್ಧ ವಾಗ್ದಾಳಿ ನಡೆಸಿದರು. ಕುಸ್ತಿಪಟು ಜೋಡಿಯು ಕ್ರೀಡೆಗೆ ಸರಿಪಡಿಸಲಾಗದ ಹಾನಿಯನ್ನುಂಟುಮಾಡಿದ್ದಾರೆ ಎಂದು ಆರೋಪಿಸಿದ ಸಿಂಗ್, ಈಗ ತಮ್ಮ ನಿಜ ರಾಜಕೀಯ ಬಣ್ಣ ತೋರಿಸುವ ಬದಲು, ಅವರು ಅದನ್ನು ಆರಂಭದಲ್ಲಿಯೇ ಮಾಡಬೇಕಾಗಿತ್ತು ಎಂದು ಹೇಳಿದರು.

ರಾಜಕೀಯಕ್ಕೆ ಅಡಿಪಾಯ

ಅವರು ಇಂದು ಅಧಿಕೃತವಾಗಿ ತಮ್ಮ ರಾಜಕೀಯ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿರಬಹುದು. ಆದರೆ ಇದಕ್ಕಾಗಿ ಅಡಿಪಾಯವು ಬಹಳ ಸಮಯದಿಂದ ನಡೆಯುತ್ತಿದೆ. ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಕೋರಿ ಅವರ ಇಡೀ ಆಂದೋಲನವು ರಾಜಕೀಯ ಪ್ರೇರಿತವಾಗಿದೆ ಮತ್ತು ಇದರ ಹಿಂದೆ ಕಾಂಗ್ರೆಸ್ ಇದೆ. ಇದರ ಹಿಂದೆ ದೀಪೇಂದರ್ ಹೂಡಾ ಕೈವಾಡವಿದೆ. ಅವರು ಇಡೀ ಪ್ರತಿಭಟನೆಯನ್ನು ಸಂಘಟಿಸಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: Vinesh Phogat: ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ರೈಲ್ವೆ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ವಿನೇಶ್ ಫೋಗಟ್

ತಮ್ಮ ಹೋರಾಟವನ್ನು ‘ಸಡಕ್’ (ಗ್ರಾಮದಿಂದ) ನಿಂದ ‘ಸಂಸದ್’ (ಸಂಸತ್‌) ಗೆ ಕೊಂಡೊಯ್ಯುತ್ತೇವೆ ಎಂಬ ವಿನೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಂಗ್, ಕಾಂಗ್ರೆಸ್‌ನ ‘ಮೋಸದ’ ಯೋಜನೆಗಳನ್ನು ದೇಶ ಅರ್ಥಮಾಡಿಕೊಂಡಿದೆ. ಶುಕ್ರವಾರ ಕಾಂಗ್ರೆಸ್‌ಗೆ ಸೇರುವಾಗ, ವಿನೇಶ್ ಅವರು ಕಠಿಣ ಸಮಯದಲ್ಲಿ ತಮ್ಮೊಂದಿಗೆ ನಿಂತಿದ್ದಕ್ಕಾಗಿ ಪಕ್ಷಕ್ಕೆ ಧನ್ಯವಾದ ಅರ್ಪಿಸಿದ್ದಾರೆ.