ಲಖನೌ: ಕುಂಭಮೇಳವು (Kumbha Mela) ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಸಂಗಮದ ಅತಿ ದೊಡ್ಡ ಭಾಗವಾಗಿದ್ದು ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆ ಮಾತ್ರವಲ್ಲದೆ ಪ್ರಾಚೀನ ಸಂಪ್ರದಾಯ ಮತ್ತು ಆಚರಣೆಗಳು ಜೀವಂತವಾಗಿರುವ ಆಧ್ಯಾತ್ಮಿಕ ಆಚರಣೆ. ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. ಈ ಬಾರಿಯ ಕುಂಭ ಅತ್ಯಂತ ಶ್ರೇಷ್ಠವಾಗಿದ್ದು, ಈ ಭಾರೀ 144 ವರ್ಷಗಳ ನಂತರ ಬಂದಿರೋದ್ರಿಂದ ಇದನ್ನ ಮಹಾಪೂರ್ಣ ಕುಂಭಮೇಳ ಎಂದೂ ಕರೆಯಲಾಗುತ್ತದೆ(MahaKumbh 2025).
ಈ ಸಂಗಮದಲ್ಲಿ ನಡೆಯುವ ಮಹಾ ಕುಂಭಮೇಳದಲ್ಲಿ ದೇಶದ ವಿವಿಧ ಕಡೆಯಿಂದ ಕೋಟ್ಯಂತರ ಭಕ್ತರು ಆಗಮಿಸಲಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ಈಗಾಗಲೇ ಕುಂಭಮೇಳದ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದ್ದು 12 ವರ್ಷಕ್ಕೊಮ್ಮೆ ನಡೆಯುವ ಈ ಉತ್ಸವವನ್ನು ಕಣ್ತುಂಬಿಕೊಳ್ಳಲು ಜನರು ಉತ್ಸುಕರಾಗಿದ್ದಾರೆ.
ಕುಂಭಮೇಳದಲ್ಲಿ ಅಖಾರಾಗಳ ರಚನೆ:
ಅಖಾಡ ಎಂದರೆ ಸಾಧುಗಳ ಪಂಥವಾಗಿದೆ. ಶೈವ, ವೈಷ್ಣವ ಹಾಗೂ ಉದಾಸೀನ ಪಂಥದ ಆಧಾರದ ಮೇಲೆ ಅಖಾಡಗಳನ್ನು ವರ್ಗೀಕರಿಸಲಾಗಿದ್ದು ಅಖಾಡಗಳ ರಚನೆ ಧರ್ಮ ಮತ್ತು ಸಂಸ್ಕೃತಿಯನ್ನು ಪಸರಿಸುವ ಉದ್ದೇಶದಿಂದ ರಚಿಸ ಲಾಗಿದೆ. ಶಂಕರಾಚಾರ್ಯರು ಸನಾತನ ಧರ್ಮದ ರಕ್ಷಣೆಗಾಗಿ ಎಂಟನೇ ಶತಮಾನದಲ್ಲಿ ಎಲ್ಲ ಸಾಧು ಸಂತರನ್ನು ಒಗ್ಗೂಡಿಸಿ ಅಖಾಡಗಳನ್ನು ಸ್ಥಾಪಿಸಿದರು ಎಂಬ ಇತಿಹಾಸವು ಇದೆ.
ಯಾವೆಲ್ಲ ಅಖಾರಾಗಳಿವೆ?
ಪಂಚ ದಶನಾಮ್ ಜುನಾ ಅಖಾರಾ: 13 ಅಖಾಡಗಳ ಪೈಕಿ ಇದು ಅತೀ ದೊಡ್ಡ ಅಖಾಡ ಆಗಿದ್ದು ಜಗದ್ಗುರು ಆದಿ ಶಂಕರಾಚಾರ್ಯರು ಪರಿಚಯಿಸಿದ ಈ ಜುನಾ ಅಖಾರಾ ಶೈವ ಪಂಥಕ್ಕೆ ಸೇರಿದೆ. ಜುನಾ ಅಖಾಡದವರು ಭಗವಾನ್ ದತ್ತಾತ್ರೇಯ ಹಾಗೂ 52 ಅಡಿ ಎತ್ತರದ ಪವಿತ್ರ ಧ್ವಜವನ್ನು ಪೂಜಿಸುವರು. ಅಖಾಡದ ಆಡಳಿತ ವೈಖರಿ ನೋಡಿಕೊಳ್ಳಲು ಅರ್ಧ ಕುಂಭ ಮೇಳ ಹಾಗೂ ಪೂರ್ಣಕುಂಭಮೇಳದಲ್ಲಿ ಇವರು ಪಾಲ್ಗೊಳ್ಳುತ್ತಾರೆ.
ಪಂಚಾಯತಿ ಅಖಾರಾ: ಪಂಚಾಯತಿ ಅಖಾರಾ ಇದು ಕೂಡ ಶೈವ ಪಂಥಕ್ಕೆ ಸೇರಿದ್ದಾಗಿದೆ. ಜುನಾ ಅಖಾರಾದ ನಂತರ ಈ ಅಖಾಡವೇ ಎರಡನೇ ಅತಿದೊಡ್ಡ ಅಖಾರಾ ವೆನಿಸಿದೆ. ಇಲ್ಲೂ ಸಹ ಸಾಧುಗಳು ಅರ್ಧಕುಂಭ ಮತ್ತು ಪೂರ್ಣ ಕುಂಭ ಮೇಳಗಳಲ್ಲಿ 52 ಅಡಿ ಎತ್ತರದ ಧ್ವಜವನ್ನು ಪೂಜಿಸುವುದು ಸಂಪ್ರದಾಯವಾಗಿದೆ.
ಶಂಭು ಪಂಚಾಯತಿ ಅಟಲ್ ಅಖಾರಾ: ಹಳೆಯ ಅಖಾರಾಗಳ ಪೈಕಿ ಇದು ಒಂದಾಗಿದ್ದು ಕುಂಭಮೇಳದಲ್ಲಿ ಎರಡನೇ ಶಾಹಿಸ್ನಾನದ ಸಂದರ್ಭ ದಲ್ಲಿ ನಾಗಾ ಸಾಧುಗಳಿಗೆ ದೀಕ್ಷೆ ಕೊಡುವ ಕಾರ್ಯಕ್ರಮ ಆಯೋಜಿಸುವುದು ಇದೇ ಆಖಾರಾ ಕೂಡ ಆಗಿದೆ. ಇದರ ಕೇಂದ್ರ ಕಚೇರಿ ವಾರಾಣಸಿಯಲ್ಲಿದೆ.
ಪಂಚಾಯತಿ ಅಖಾರಾ ಮಹಾ ನಿರ್ವಾಣಿ: ಆದಿ ಶಂಕರರಿಂದ ಸ್ಥಾಪಿತವಾದ ದಶನಾಮಿ ಅಖಾರಾ ಇದಾಗಿದ್ದು ಈ ಅಖಾರಾದವರು ಕಪಿಲಮುನಿ ಮಹಾರಾಜರನ್ನು ಆರಾಧಿಸುತ್ತಾರೆ. ಈ ಅಖಾರಾಕ್ಕೆ ನಿರ್ದಿಷ್ಟ ಮುಖ್ಯಸ್ಥರಿಲ್ಲ. ಐವರು ಸದಸ್ಯರ ಮಂಡಳಿಯೇ ಜವಾಬ್ದಾರಿ ನಿರ್ವಹಿಸುತ್ತದೆ.
ಪಂಚಾಯತಿ ಅಖಾರಾ ಬಡಾ ಉದಾಸೀನ್: ಇದು ಉದಾಸೀನ ಪಂಥ ಗುರುನಾನಕ್‌ರ ಪುತ್ರ ಶ್ರೀ ಚಾಂದ್ ಬೋಧನೆಗಳಿಂದ ಹುಟ್ಟಿಕೊಂಡಿದ್ದು, ಈ ಅಖಾರಾ, ಸ್ವಾಮಿ ಯೋಗರಾಜ್ ಶ್ರೀ ನಿರ್ವಾಣ ದೇವ್‌ಜಿ ಮಹಾರಾಜ್ ಅವರಿಂದ 1825ರಲ್ಲಿ ಹರಿದ್ವಾರದಲ್ಲಿ ಸ್ಥಾಪನೆಯಾಗಿದೆ. ಜಗದ್ಗುರು ಭಗವಾನ್ ಶ್ರೀ ಚಂದ್ರಜೀ ಇವರ ಆರಾಧ್ಯ ದೈವ ಆಗಿದ್ದಾರೆ.
ಪಂಚಾಯತಿ ಅಖಾರಾ ನಯಾ ಉದಾಸೀನ್: ಇದರ ಕೇಂದ್ರ ಕಚೇರಿ ಹರಿದ್ವಾರ ದಲ್ಲಿದ್ದು ಇದು ಉದಾಸೀನ ಪಂಥವಾಗಿದೆ. ಧಾರ್ಮಿಕ ಕಟ್ಟುಪಾಡಿನ ಮೂಲಕ ರೂಪಿತವಾದ ಅಖಾರಾ ಇದಾಗಿದೆ. ಸರಳತೆಯೇ ಇವರ ಬೋಧನೆ. 15ನೇ ಶತಮಾನದ ಸಂತ ಶ್ರೀ ಚಂದ್ರ ಭಗವಾನ್ ಇವರ ದೈವ ಆಗಿದ್ದಾರೆ
ಪಂಚ ನಿರ್ಮೋಹಿ ಅಣಿ ಅಖಾರಾ: ಕೇಂದ್ರ ಕಚೇರಿ ಹರಿದ್ವಾರದಲ್ಲಿದ್ದು ಪಂಥ ವೈಷ್ಣವ ಆಗಿದೆ. ಇದರ ಮುಖ್ಯಸ್ಥರು ಪಂಚ ಸದಸ್ಯರ ಮಂಡಳಿ ಆಗಿದೆ. ಆಂಜನೇಯನನ್ನು ಆರಾಧಿಸುವ ವೈಷ್ಣವ ಪಂಥದ ಅಖಾರಾ ಇದಾಗಿದೆ. ನಾಲ್ಕು ಪಂಥ ಹಾಗೂ 18 ವೈಷ್ಣವ ಗುಂಪುಗಳು ಸೇರಿ ಈ ಅಖಾರಾ ರೂಪುಗೊಂಡಿದೆ.
ಪಂಚ ದಿಗಂಬರ ಅಣಿ ಅಖಾರಾ: ಇದರ ಪಂಥ ವೈಷ್ಣವ ಆಗಿದ್ದು ಮುಖ್ಯಸ್ಥರು ಪಂಚ ಸದಸ್ಯರ ಮಂಡಳಿ ಆಗಿದೆಪುರಾತನ ಅಸ್ತ್ರಗಳನ್ನು ಪೂಜಿಸುವ ಈ ಅಖಾರಾ ಸನಾತನ ಧರ್ಮ ಪ್ರಚಾರದಲ್ಲಿ ಮೊದಲ ಸ್ಥಾನದಲ್ಲಿದೆ.
ಪಂಚ ನಿರ್ವಾಣಿ ಅಣಿ ಅಖಾರಾ: ಕೇಂದ್ರ ಕಚೇರಿ ಹರಿದ್ವಾರದಲ್ಲಿದ್ದು ಇದರ ಪಂಥ ವೈಷ್ಣವವಾಗಿದೆ. ಇದರ ಮುಖ್ಯಸ್ಥ ಪಂಚ ಸದಸ್ಯರ ಮಂಡಳಿಯಾಗಿದ್ದು ಈ ಅಖಾರಾದ ಸಾಧುಗಳು ಹುನುಮಂತನ ವಿಗ್ರಹ ಆರಾಧಿಸುವುದು ಹೆಚ್ಚು.
ಶಂಭು ಪಂಚಾಗ್ನಿ ಅಖಾರಾ: ಕೇಂದ್ರ ಕಚೇರಿ ಜುನಾಗಢ ಗುಜರಾತ್‌ನಲ್ಲಿದ್ದು ಬ್ರಹ್ಮಚಾರಿಗಳನ್ನು ಸಂತರನ್ನಾಗಿ ನೇಮಿಸುವುದು ಇವರ ಮುಖ್ಯ ಕೆಲಸವಾಗಿದೆ. ಇವರ ಪಂಥ ಶೈವವಾಗಿದ್ದು ಈ ಅಖಾರಾ ನಾಗಾ ಸಾಧುಗಳನ್ನು ಹೊಂದಿಲ್ಲ. ಈ ಅಖಾರಾದ ಸಾಧುಗಳು ತಮ್ಮ ಆಹಾರವನ್ನು ತಾವೇ ಸಿದ್ಧಪಡಿಸಿಕೊಳ್ಳುವರು.
ಈ ಸುದ್ದಿಯನ್ನೂ ಓದಿ: Gujarat Borewell Tragedy: ಗುಜರಾತ್‌ನಲ್ಲೂ ಬೋರ್‌ವೆಲ್ ದುರಂತ; 33 ಗಂಟೆಗಳ ಕಾರ್ಯಾಚರಣೆ ನಂತರ ಹೊರಬಂದ ಯುವತಿ ಸಾವು