Monday, 13th January 2025

Mahakumbh 2025: ಮಹಾ ಕುಂಭಮೇಳಕ್ಕೆ ಚಾಲನೆ– ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಭಕ್ತರು; ಮೊದಲ ಶಾಹಿ ಸ್ನಾನ ಅವಕಾಶ ಯಾವ ಅಖಾಡಕ್ಕೆ?

ಪ್ರಯಾಗ್ ರಾಜ್: ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳಕ್ಕೆ (Maha kumbh Mela) ಕ್ಷಣಗಣನೆ ಪ್ರಾರಂಭಗೊಂಡಿದ್ದು ಇಂದಿನಿಂದ (ಜ.13) ಪ್ರಯಾಗ್ ರಾಜ್ ನ (Prayagraj) ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಪ್ರಾರಂಭಗೊಳ್ಳಲಿದೆ. ಉತ್ತರಪ್ರದೇಶದ (Uttar Pradesh) ಪ್ರಯಾಗ್ ರಾಜ್ ನಲ್ಲಿ ನಡೆಯುವ ಈ ಮಹಾ ಧಾರ್ಮಿಕ ಮೇಳದಲ್ಲಿ (Mahakumbh 2025) ಪಾಲ್ಗೊಳ್ಳುವುದಕ್ಕಾಗಿ ವಿವಿಧ ಅಖಾಡಗಳ ಸನ್ಯಾಸಿಗಳ ಸಹಿತ ಆಸ್ತಿಕ ಗಡಣವೇ ಇಲ್ಲಿ ಬಿಡುಬಿಟ್ಟಿದೆ. ಗಂಗಾ (Ganga), ಯಮುನಾ (Yamuna) ಮತ್ತು ಸರಸ್ವತಿ (Saraswati) ನದಿಗಳ ತ್ರಿವೇಣಿ ಸಂಗಮದಲ್ಲಿ (Triveni Sangam) ಈ ಪುಣ್ಯಸ್ನಾನ (Shahi Snan) ನಡೆಯಲಿದೆ.

ಹಾಗಾದ್ರೆ ಈ ಮಹಾಕುಂಭ ಮೇಳದಲ್ಲಿ ಯಾವೆಲ್ಲಾ ದಿನಗಳಲ್ಲಿ ಶಾಹಿ ಸ್ನಾನ (ಪುಣ್ಯ ಸ್ನಾನ) ನಡೆಯಲಿದೆ ಎಂಬ ಮಾಹಿತಿ ಇಲ್ಲಿದೆ. ಜ.13ರ ಪೌಷ ಪೌರ್ಣಮಿಯಂದು ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ಮೇಳಕ್ಕೆ ಚಾಲನೆ ದೊರೆಯಲಿದ್ದು, ಫ.26ರ ಮಹಾಶಿವರಾತ್ರಿಯಂದು ಈ ಮಹಾಮೇಳ ಸಂಪನ್ನಗೊಳ್ಳಲಿದೆ.

ಜ.13ರಿಂದ ಪ್ರಾರಂಭಗೊಳ್ಳಲಿರುವ ಮಹಾಕುಂಭ ಮೇಳದಲ್ಲಿ ಪುಣ್ಯ ಸ್ನಾನಗಳು ನಡೆಯುವ ದಿನಾಂಕಗಳು ಹೀಗಿದೆ:

ಜ.13, 2025 – ಪೌಷ ಪೌರ್ಣಮಿ

ಜ.14, 2025 – ಮಕರ ಸಂಕ್ರಾಂತಿ (Makar Sankranti) (ಪ್ರಥಮ ಪುಣ್ಯ ಸ್ನಾನ)

ಜ.29, 2025 – ಮೌನಿ ಅಮವಾಸ್ಯೆ (ಎರಡನೇ ಪುಣ್ಯ ಸ್ನಾನ)

ಫೆ.03, 2025 – ವಸಂತ ಪಂಚಮಿ ) ಮೂರನೇ ಪುಣ್ಯ ಸ್ನಾನ

ಫೆ.12, 2025 : ಮಾಘಿ ಪೌರ್ಣಮಿ

ಫೆ.26, 2025 : ಮಹಾಶಿವರಾತ್ರಿ (Mahashivratri) (ಅಂತಿಮ ಪುಣ್ಯ ಸ್ನಾನ)

ಮಹಾಕುಂಭ ಮೇಳದಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನವನ್ನು ಕೈಗೊಳ್ಳುವುದರಿಂದ ಆತ್ಮ ಶುದ್ಧೀಕರಣಗೊಂಡು, ಆ ವ್ಯಕ್ತಿಯ ಪಾಪಗಳೆಲ್ಲವೂ ತೊಳೆದು ಹೋಗುತ್ತದೆ ಎಂಬ ನಂಬಿಕೆ ಸನಾತನ ಹಿಂದು ಧರ್ಮೀಯರದ್ದಾಗಿದೆ.

ಈ ಮಹಾಕುಂಭ ಮೇಳದಲ್ಲಿ ಪುಣ್ಯ ಸ್ನಾನದ ಸಮಯಗಳನ್ನು 13 ಅಖಾಡಗಳ ನಡುವೆ ಹಂಚಲಾಗಿದೆ. ಇದರಲ್ಲಿ ಶಿಬಿರವನ್ನು ಬಿಡುವ ಸಮಯ, ಪುಣ್ಯ ಸ್ನಾನವನ್ನು ಕೈಗೊಳ್ಳುವ ಸಮಯ ಹಾಗು ಹಿಂತಿರುಗಿ ಶಿಬಿರವನ್ನು ಸೇರುವ ಸಮಯಗಳು ಸೇರಿವೆ.

ಮಹಾನಿರ್ವಾಣಿ ಮತ್ತು ಅಟಲ್ ಅಖಾಡಗಳು ಈ ಬಾರಿಯ ಕುಂಭ ಮೇಳದಲ್ಲಿ ಮೊದಲ ಪುಣ್ಯ ಸ್ನಾನವನ್ನು ಕೈಗೊಳ್ಳಲಿವೆ. ಜ.14ರಂದು ಬೆಳಿಗ್ಗೆ 5.15 ರಿಂದ 7.55ರವರೆಗೆ 40 ನಿಮಿಗಳ ಸಮಯವನ್ನು ಈ ಅ ಎರಡು ಅಖಾಡಗಳಿಗೆ ನೀಡಲಾಗಿದೆ. ಅದಾದ ಬಳಿಕ, ನಿರಂಜನಿ ಮತ್ತು ಆನಂದ ಅಖಾಡಗಳು ಪುಣ್ಯ ಸ್ನಾನಕ್ಕಿಳಿಯಲಿವೆ. ಈ ಎರಡೂ ಅಖಾಡಗಳಿಗೆ ಜ.14ರ ಬೆಳಿಗ್ಗೆ 6.05 ರಿಂದ 8.45ರ ವರೆಗೆ ಸಮಯವನ್ನು ನಿಗದಿಪಡಿಸಲಾಗಿದೆ.

ಸನಾತನ ಹಿಂದು ಪರಂಪರೆಯಲ್ಲಿ ಈ ಕುಂಭ ಮೇಳಕ್ಕೆ ಸಮುದ್ರ ಮಥನದ ಕಾಲದ ಸಂಬಂಧವಿದೆ. ದೇವಾಸುರರು ಸೇರಿಕೊಂಡು ಮಂದರ ಪರ್ವತವನ್ನು ಕಡೆಗೊಲಾಗಿಸಿಕೊಂಡು, ಮಹಾಶೇಷನನ್ನೇ ಹಗ್ಗವಾಗಿಸಿಕೊಂಡು ಸಮುದ್ರ ಮಥನ ಮಾಡುತ್ತಿರುವ ಸಂದರ್ಭದಲ್ಲಿ ಹಲವಾರು ಸುವಸ್ತುಗಳು ಮೇಲೆದ್ದು ಬಂದವು, ಅದರಲ್ಲಿ ಅಮೃತ ಕುಂಭವೂ ಒಂದು. ಇದನ್ನು ಅಸುರರಿಗೆ ಸಿಗದಂತೆ ತಪ್ಪಿಸಲು ಮೋಹಿಸಿ ವೇಷವನ್ನು ಧರಿಸಿದ ವಿಷ್ಣು ಅದನ್ನು ಹಿಡಿದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆ ಅಮೃತ ಬಾಂಢದಿಂದ ಕೆಲ ಬಿಂದುಗಳು ಪ್ರಯಾಗ್ ರಾಜ್, ಹರಿದ್ವಾರ್, ಉಜ್ಜೈನಿ ಮತ್ತು ನಾಶಿಕ್ ಗಳಲ್ಲಿ ಬೀಳುತ್ತವೆ. ಮತ್ತು ಆ ಮೂಲಕ ಈ ಸ್ಥಳಗಳು ಪವಿತ್ರವೆಂದೆಣಿಸಿಕೊಳ್ಳುತ್ತವೆ.

ಇದನ್ನೂ ಓದಿ: Mahakumbh 2025: AI ಕ್ಯಾಮರಾ, NSG ಕಮಾಂಡೋ, ಡ್ರೋನ್‌ಗಳು- ಮಹಾಕುಂಭಮೇಳಕ್ಕೆ ಭದ್ರತಾ ವ್ಯವಸ್ಥೆ ಹೇಗಿದೆ ಗೊತ್ತಾ?

ಹಾಗಾಗಿ ಅಂದಿನಿಂದ ಈ ನಾಲ್ಕು ಜಾಗಗಳಲ್ಲಿ ಆವರ್ತನ ಪದ್ಧತಿಯಲ್ಲಿ ಕುಂಭ ಮೇಳ ನಡೆದುಕೊಂಡು ಬರುತ್ತಿದೆ. ಮತ್ತು ಇವುಗಳು ಹಿಂದುಗಳಿಗೆ ಪವಿತ್ರ ಧಾರ್ಮಿಕ ಕ್ಷೇತ್ರಗಳಾಗಿ ಪರಿಣಮಿಸಿವೆ.

ಈ ಕುಂಭ ಮೇಳವು ಸಾಧು, ಸಂತರಿಗೆ, ಆಸ್ತಿಕ ವರ್ಗಕ್ಕೆ, ಸಾಧ್ವಿಗಳಿಗೆ, ಕಲ್ಪವಾಸಿಗಳಿಗೆ ಮತ್ತು ತೀರ್ಥಯಾತ್ರಿಗಳಿಗೆ ಬಹಳ ಪ್ರಶಸ್ತವಾದುದಾಗಿದೆ. ಈ ಕುಂಭ ಮೇಳದ ಸಂದರ್ಭದಲ್ಲಿ, ‘ಪೇಶ್ವಾಯ್’ ಎಂದು ಕರೆಯಲ್ಪಡುವ ಅಖಾಡಗಳ ಮೆರವಣಿಗೆ ನಡೆಯುತ್ತದೆ. ಈ ಮೆರವಣಿಗೆಯಲ್ಲಿ ಆನೆಗಳು, ಕುದುರೆಗಳು ಮತ್ತು ರಥಗಳು ಪ್ರಮುಖ ಆಕರ್ಷಣೆಯಾಗಿರುತ್ತವೆ. ಇನ್ನು ಪುಣ್ಯ ಸ್ನಾನದ ಸಂದರ್ಭದಲ್ಲಿ ನಾಗಾ ಸಾಧುಗಳು ಪ್ರಮುಖವಾಗಿ ಗಮನ ಸೆಳೆಯುತ್ತಾರೆ. ಇನ್ನುಳಿದಂತೆ ಹಲವಾರು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಮಹಾಕುಂಭ ಮೇಳದ ಅಷ್ಟೂ ದಿನಗಳು ನಡೆಯುವುದರಿಂದ ಇದು ಲಕ್ಷಾಂತರ ಆಸ್ತಿಕ ವರ್ಗವನ್ನು ಮತ್ತು ದೇಶ-ವಿದೇಶಿಗಳ ಕುತೂಹಲಿಗಳನ್ನು ತನ್ನತ್ತ ಸೆಳೆಯುತ್ತದೆ.

Leave a Reply

Your email address will not be published. Required fields are marked *