Tuesday, 7th January 2025

Mahakumbh Mela: ಮಹಾಕುಂಭ ಮೇಳಕ್ಕೆ ಖಲಿಸ್ತಾನಿ ಉಗ್ರರ ಬೆದರಿಕೆ- ಪ್ರಯಾಗ್‌ರಾಜ್‌ ಚಲೋಗೆ ಕರೆ ಕೊಟ್ಟ ಪನ್ನುನ್‌

Prayagraj chalo

ಲಖನೌ: ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ (Mahakumbh Mela) ನಡೆಯುತ್ತಿದೆ. ಕುಂಭ ಮೇಳಕ್ಕೆ ಸಕಲ ಸಿದ್ಧತೆ ನಡೆಯುತ್ತಿರುವಾಗಲೇ ಖಲಿಸ್ತಾನಿ ಉಗ್ರ ಹಾಗೂ ಸಿಖ್ಸ್ ಫಾರ್ ಜಸ್ಟಿಸ್ ನಾಯಕ  ಗುರುಪತ್‌ವಂತ್ ಸಿಂಗ್ ಪನ್ನುನ್ (Gurpatwant Singh Pannun) ಬೆದರಿಕೆ ಹಾಕಿದ್ದಾನೆ. ಈ ಕುರಿತು ವಿಡಿಯೋವನ್ನು ಬಿಡುಗಡೆ ಮಾಡಿದ್ದಾನೆ. (Prayagraj chalo)

ಪನ್ನುನ್ ಹಿಂದುತ್ವ ಸಿದ್ಧಾಂತವನ್ನು ವಿರೋಧಿಸಲು ಮತ್ತು ಕೊಲ್ಲಲು “ಪ್ರಯಾಗ್ರಾಜ್ ಚಲೋ” ಗೆ ಕರೆ ನೀಡಿದ್ದಾನೆ. ಲಖನೌ ಮತ್ತು ಪ್ರಯಾಗರಾಜ್‌ನ ವಿಮಾನ ನಿಲ್ದಾಣಗಳಲ್ಲಿ ಖಲಿಸ್ತಾನಿ ಮತ್ತು ಕಾಶ್ಮೀರಿ ಧ್ವಜಗಳನ್ನು ಹಾರಿಸುವಂತೆ ಆತ ತಮ್ಮ ಬೆಂಬಲಿಗರನ್ನು ಒತ್ತಾಯಿಸಿದ್ದಾನೆ. ವೀಡಿಯೋದ ಕೊನೆಯಲ್ಲಿ 2025ರ ಮಹಾಕುಂಭ ಮೇಳವು ಯುದ್ಧಭೂಮಿಯಾಗಲಿದೆ ಎಂದು ಘೋಷಿಸಿದ್ದಾನೆ.

ಹತ್ತು ದಿನಗಳಲ್ಲಿ ಮಹಾಕುಂಭ ಮೇಳವನ್ನು ಗುರಿಯಾಗಿಸಿಕೊಂಡು ಪನ್ನುನ್‌ ಹಾಕುತ್ತಿರುವ ಎರಡನೇ ಬೆದರಿಕೆಯಾಗಿದೆ. ಮೊದಲ ವೀಡಿಯೊದಲ್ಲಿ, ಮಕರ ಸಂಕ್ರಾಂತಿ (ಜನವರಿ 14), ಮೌನಿ ಅಮವಾಸ್ಯೆ (ಜನವರಿ 29), ಮತ್ತು ಬಸಂತ್ ಪಂಚಮಿ (ಫೆಬ್ರವರಿ 3) ಸೇರಿದಂತೆ ಧಾರ್ಮಿಕ ಕಾರ್ಯಕ್ರಮದ ಪ್ರಮುಖ ಸ್ನಾನದ ದಿನಾಂಕಗಳನ್ನು ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದ್ದ.

ಪನ್ನುನ್‌ ಹಾಕಿದ್ದ ಬೆದರಿಕೆಯನ್ನು  ಅಖಿಲ ಭಾರತೀಯ ಅಖಾಡ ಪರಿಷತ್ ತೀವ್ರವಾಗಿ ಖಂಡಿಸಿದೆ. ಮಾತನಾಡಿದ ಪರಿಷತ್ತಿನ ಅಧ್ಯಕ್ಷರಾದ ಮಹಂತ್ ರವೀಂದ್ರ ಪುರಿ ಅವರು ಪನ್ನುನ್ ಬೆದರಿಕೆಗಳನ್ನು ತಳ್ಳಿಹಾಕಿದ್ದರು ಹಾಗೂ ಆತ ಒಬ್ಬ “ಮೂರ್ಖ” ಎಂದು ಕರೆದಿದ್ದರು. ಪನ್ನುನ್ ಎಂಬ ವ್ಯಕ್ತಿ ನಮ್ಮ ಮಹಾಕುಂಭ ಮೇಳಕ್ಕೆ ಪ್ರವೇಶಿಸಲು ಧೈರ್ಯ ಮಾಡಿದರೆ, ಅವನನ್ನು ಹೊಡೆದು ಓಡಿಸಲಾಗುತ್ತದೆ. ಇಂತಹ ನೂರಾರು ಹುಚ್ಚರನ್ನು ನಾವು ನೋಡಿದ್ದೇವೆ ಎಂದು ಮಹಂತ್ ರವೀಂದ್ರ ಪುರಿ ಹೇಳಿದ್ದಾರೆ.

ಬಹು ನಿರೀಕ್ಷಿತ ಮಹಾಕುಂಭ ಮೇಳ ಸಮೀಪಿಸುತ್ತಿದ್ದಂತೆ ಪ್ರಯಾಗರಾಜ್‌ನ ಆಧ್ಯಾತ್ಮಿಕ ವ್ಯಕ್ತಿಗಳು ಉತ್ಸುಕರಾಗಿದ್ದಾರೆ. ಈ ಬಾರಿ 40 ಕೋಟಿಗೂ ಹೆಚ್ಚು ಭಕ್ತರು ಆಗಮಿಸುವ ಸಾಧ್ಯತೆಯಿದೆ. ಹಣೆಗೆ ಬೂದಿ ಮತ್ತು ಕುಂಕುಮ ಧರಿಸಿದ ಮಹಾನಿರ್ವಾಣಿ ಅಖಾರದ ಸಾಧು ಸಂತರು ಮಹಾಕುಂಭ ಮೇಳಕ್ಕೆ ಈಗಾಗಲೇ ಆಗಮಿಸಿದ್ದು, ಡಮರು ಬಾರಿಸುತ್ತಾ ಮಹಾದೇವನ ನಾಮವನ್ನು ಜಪಿಸುತ್ತಿದ್ದಾರೆ. ಕೆಲವು ಸಾಧುಗಳು ಕುದುರೆ ಸವಾರಿ ಮಾಡುತ್ತಿರುವುದು ಕಂಡುಬಂದಿದೆ.

ಕುಂಭಮೇಳ ಕೇವಲ ಧಾರ್ಮಿಕ ನಂಬಿಕೆಯಿಂದಾಗಿ ಮಾತ್ರವಲ್ಲ ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ, ಪರಂಪರಾತ್ಮಕ, ಐತಿಹಾಸಿಕ ಮಹತ್ವವನ್ನು ಸಾರುವ ವಿಶ್ವದ ಅತಿದೊಡ್ಡ ಸಮ್ಮೇಳನವಾಗಿದೆ. ಅದರಲ್ಲೂ ಈ ಬಾರಿ 144ನೇ ವರ್ಷದ ಮಹಾ ಪೂರ್ಣ ಕುಂಭಮೇಳಕ್ಕೆ ಪ್ರಯಾಗ್ ರಾಜ್ ಸಾಕ್ಷಿಯಾಗಲಿದೆ.

ಈ ಸುದ್ದಿಯನ್ನೂ ಓದಿ : Mahakumbh Mela: ಮಹಾಕುಂಭ ಮೇಳಕ್ಕೆ ಪ್ರಯಾಗ್ ರಾಜ್ ಸಜ್ಜು; ಈ ಬಾಬಾ 32 ವರ್ಷಗಳಿಂದ ಸ್ನಾನವನ್ನೇ ಮಾಡಿಲ್ಲ!

Leave a Reply

Your email address will not be published. Required fields are marked *